More

    ಖಾಸಗಿ ವ್ಯಕ್ತಿಗೆ ಸರ್ಕಾರಿ ಭೂಮಿ ಪರಭಾರೆ!

    ಪೋಡಿ ರದ್ದುಪಡಿಸಲು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಹೊಸಕೋಟೆ
    ತಾಲೂಕಿನ ಖಾಜಿಹೊಸಹಳ್ಳಿಯ ಸರ್ವೇ ನಂ. 6ರಲ್ಲಿರುವ ಸರ್ಕಾರಿ ಭೂಮಿಯಲ್ಲಿ ಸುಮಾರು 75 ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರ ನೀಡದೆ ಗ್ರಾಮಸ್ಥರಲ್ಲದ ವ್ಯಕ್ತಿಗೆ 1.20 ಎಕರೆ ಮಂಜೂರು ಮಾಡಿರುವುದು ಸರಿಯಲ್ಲ, ಕೂಡಲೇ ಅವರ ಪೋಡಿ ವಜಾಗೊಳಿಸಬೇಕೆಂದು ಒತ್ತಾಯಿಸಿ ನಗರದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಂಘಟನೆಯಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
    ದಲಿತ ಸಂಘರ್ಷ ಸಮಿತಿ ಕರ್ನಾಟಕದ ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಮಾತನಾಡಿ, ಖಾಸಗಿ ವ್ಯಕ್ತಿಗೆ ಮಂಜೂರು ಮಾಡಿರುವ ಭೂಮಿ ಕೃಷಿ ಚಟುವಟಿಕೆಗೆ ಯೋಗ್ಯವಾಗಿಲ್ಲ. ಬಂಡೆಯಿಂದ ಕೂಡಿದೆ. ಆ ಜಾಗವನ್ನು ನಿವೇಶನ ರಹಿತ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಾಂಗಕ್ಕೆ ನಿವೇಶನಕ್ಕಾಗಿ ಮೀಸಲಿರಿಸಲಾಗಿತ್ತು. ವಿವಾದಿತ ಜಾಗದ ಅಕ್ಕಪಕ್ಕದಲ್ಲಿ ಹಲವರು ಮನೆಗಳನ್ನು ನಿರ್ಮಿಸಿಕೊಂಡು, 94ಸಿಯಡಿ ಅರ್ಜಿ ಸಲ್ಲಿಸಿದ್ದು, ಅಂತಹವರಿಗೆ ನೋಂದಣಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
    ಸಮಿತಿ ಜಿಲ್ಲಾ ಸಂಚಾಲಕ ಎಂ.ಲೋಕೇಶ್ ಮಾತನಾಡಿ, ತಾಲೂಕಿನಲ್ಲಿ ದಲಿತರಿಗೆ, ಹಿಂದುಳಿದ, ಅಲ್ಪಸಂಖ್ಯಾತರು, ನಿವೇಶನರಹಿತರ ಜಮೀನುಗಳನ್ನು ಪ್ರಭಾವಿಗಳು ಅಕ್ರಮವಾಗಿ ದಾಖಲೆ ಮಾಡಿಕೊಳ್ಳುತ್ತಿದ್ದು, ಇಂತಹ ಅಕ್ರಮ ತಡೆಯಬೇಕು ಎಂದು ಒತ್ತಾಯಿಸಿದರು.
    ಚೆನ್ನೈ ಸೂಪರ್ ಎಕ್ಸ್ ಪ್ರೆಸ್ ಹೈವೇ ನಿರ್ಮಾಣಕ್ಕೆ ಗುಡ್ಡ ಹಾಗೂ ಗೋಮಾಳಗಳ ಒತ್ತುವರಿ ಮಾಡಿದ್ದು, ಅದರ ಪಕ್ಕದಲ್ಲಿ ಉಳಿಕೆ ಜಾಗದಲ್ಲಿ ದಲಿತರಿಗೆ ಜಾಗ ಮಂಜೂರು ಮಾಡಬೇಕು ಎಂದರು.
    ಖಾಜಿ ಹೊಸಹಳ್ಳಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 12 ಲಕ್ಷ ರೂ.ಬಿಡುಗಡೆಯಾಗಿದ್ದು ಕೆಲಸ ಅರ್ಧಕ್ಕೆ ಸ್ಥಗಿತವಾಗಿದೆ. ಉಳಿದ ಕಾಮಗಾರಿಗೆ 25 ಲಕ್ಷ ರೂ. ಬಿಡುಗಡೆ ಮಾಡಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
    ಮನವಿ ಸ್ವೀಕರಿಸಿದ ತಹಸೀಲ್ದಾರ್ ವಿಜಯ್ ಕುಮಾರ್ ಮಾತನಾಡಿ, ಪೋಡಿ ರದ್ದು ಮಾಡಲು ನ್ಯಾಯಾಲಯದಲ್ಲಿ ತಡೆ ಕೋರಿ ಅರ್ಜಿ ಸಲ್ಲಿಸಬೇಕು. ನಮ್ಮ ಇಲಾಖೆಯಿಂದ ಕೈಗೊಳ್ಳಬಹುದಾದ ಕ್ರಮಗಳನ್ನು ಕೈಗೊಂಡು ದಲಿತರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts