More

    ಭದ್ರಾ ಮೇಲ್ದಂಡೆ ಶೀಘ್ರ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ

    ಹೊಸದುರ್ಗ: ರಾಷ್ಟ್ರೀಯ ಯೋಜನಾ ವ್ಯಾಪ್ತಿಗೆ ಭದ್ರಾ ಮೇಲ್ದಂಡೆ ಯೋಜನೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಘೋಷಣೆಯಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

    ತಾಲೂಕಿನ ಲಕ್ಕಿಹಳ್ಳಿ ಬಳಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಕಾಮಗಾರಿಯ ಪ್ರಗತಿ ವೀಕ್ಷಿಸಿ ಮಾತನಾಡಿದರು.

    2008ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಭದ್ರಾ ಯೋಜನೆಗೆ ಚಾಲನೆ ನೀಡಿತ್ತು. ಪ್ರಾರಂಭದಲ್ಲಿ 6 ಸಾವಿರ ಕೋಟಿಯ ಯೋಜನೆಯಾಗಿತ್ತು. ನಂತರ ಯೋಜನಾ ಗಾತ್ರ ಹೆಚ್ಚಾದ ಕಾರಣ ಅಂದಾಜು ಮೊತ್ತವೂ ಅಧಿಕವಾಗಿದೆ. 2016 ರ ಒಳಗೆ ಯೋಜನೆ ಪೂರ್ಣಗೊಳ್ಳಬೇಕಾಗಿತ್ತು. ತಾಂತ್ರಿಕ ತೊಂದರೆಗಳಿಂದ ವಿಳಂಬವಾಗಿದೆ. ಈಗ ಸಮಸ್ಯೆ ನಿವಾರಿಸಿ ಕಾಮಗಾರಿ ವೇಗ ಹೆಚ್ಚಿಸಲಾಗಿದೆ ಎಂದರು.

    ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಆಗುವುದರಿಂದ ಕೇಂದ್ರದಿಂದ ಹೆಚ್ಚಿನ ಅನುದಾನ ದೊರೆಯಲಿದೆ. ಇದರಿಂದ ಕಾಮಗಾರಿಗೆ ಮತ್ತಷ್ಟು ವೇಗ ಸಿಗಲಿದೆ ಎಂದರು.

    ಯೋಜನೆಯ ಪ್ಯಾಕೇಜ್ 8 ಮತ್ತು 9 ರಲ್ಲಿ ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕಿನ ಮೂರು ಕಡೆ 7.5 ಕಿ.ಮೀ. ಟನಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, 300 ಮೀಟರ್ ಸುರಂಗ ಕಾಮಗಾರಿ ಮಾತ್ರ ಬಾಕಿ ಇದೆ. ಇದು ಜುಲೈ 15 ರೊಳಗೆ ಮುಗಿಸಲು ಗುತ್ತಿಗೆದಾರರಿಗೆ ಗಡುವು ನೀಡಲಾಗಿದೆ ಎಂದರು.

    ಚಿತ್ರದುರ್ಗ ಶಾಖಾ ಕಾಲುವೆ ಕಿ.ಮೀ. 73 ರಿಂದ 90 ರವರೆಗೆ ಪ್ಯಾಕೇಜ್-9 ರಡಿ ಇದ್ದು, ಇದರ ಟೆಂಡರ್ ಮೊತ್ತ 368.81 ಕೋಟಿಗಳಾಗಿದೆ. ಈಗಾಗಲೇ 279.60 ಕೋಟಿ ರೂ. ವೆಚ್ಚವಾಗಿದ್ದು, 146.01 ಕೋಟಿ ಬಾಕಿ ಇದೆ. ಇದರಲ್ಲಿ ಮೂರು ಟನಲ್ ಹಾಗೂ ತೆರೆದ ಕಾಲುವೆಯಿದ್ದು ಟನಲ್ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

    ಚಿತ್ರದುರ್ಗ ಶಾಖಾ ಕಾಲುವೆಯ ಕಿ.ಮೀ. 61.23 ರಿಂದ 90.00 ವರೆಗೆ ಪಂಕ್ತೀಕರಣಕ್ಕೆ ಅನುಮೋದನೆ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ವಿಭಾಗ ವ್ಯಾಪ್ತಿಯ ಚಿತ್ರದುರ್ಗ ಶಾಖಾ ಕಾಲುವೆಯ ಕಿ.ಮೀ. 61.23 ರಿಂದ 67.41 ಕಿ.ಮೀ.ವರೆಗೆ ದೊಡ್ಡಕಿಟ್ಟದಹಳ್ಳಿ, ಕೆಂಚೇನಹಳ್ಳಿ, ನಾಕೀಕೆರೆ ಗ್ರಾಮಗಳ ಮೂಲಕ ಕಿ.ಮೀ 67.41 ರಿಂದ 73.3 ವರೆಗೆ ಬೂದಿಪುರ, ಮಾಳಗೇರನಹಳ್ಳಿ, ಗೂಳಿಹೊಸಹಳ್ಳಿ, ಶಂಕರನಹಳ್ಳಿ, ಕಿ.ಮೀ 73.3 ರಿಂದ 81 ಕಿ.ಮೀ. ವರೆಗೆ ಲಕ್ಕಿಹಳ್ಳಿ ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿ ಕಾಲುವೆ ಹಾದು ಹೋಗುತ್ತದೆ ಎಂದು ತಿಳಿಸಿದರು.

    ಚಿತ್ರದುರ್ಗ ಜಿಲ್ಲೆ ಎಲ್ಲ ರೈತರಿಗೂ ನೀರಾವರಿ ಸೌಲಭ್ಯ ಸಿಗಬೇಕೆಂಬುದು ಸರ್ಕಾರದ ಆಶಯವಾಗಿದ್ದು ಮುಂದಿನ ವರ್ಷದೊಳಗೆ ಜಿಲ್ಲೆ ವ್ಯಾಪ್ತಿಯ 48 ಕೆರೆಗಳಿಗೆ ನೀರು ತುಂಬಿಸುವ ಗುರಿ ಹೊಂದಲಾಗಿದೆ ಎಂದರು.

    ಶಾಸಕರಾದ ಗೂಳಿಹಟ್ಟಿ ಡಿ.ಶೇಖರ್, ಚಂದ್ರಪ್ಪ, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣರಾವ್ ಪೇಶ್ವೆ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ರಾಘವನ್, ಅಧೀಕ್ಷಕ ಇಂಜಿನಿಯರ್ ವೇಣುಗೋಪಾಲ್, ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಹಾಸ್, ಶ್ರೀಧರ್, ಟಾಟಾ ಶಿವನ್ ಮತ್ತಿತರರಿದ್ದರು.

    ಎತ್ತಿನಹೊಳೆ ಯೋಜನೆಯಿಂದ ವಿ.ವಿ. ಸಾಗರಕ್ಕೆ ನೀರು: ಚಿತ್ರದುರ್ಗ ಜಿಲ್ಲೆಗೆ ಹೆಚ್ಚಿನ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಎತ್ತಿನಹೊಳೆ ಯೋಜನೆಯಿಂದ ನೀರು ಒದಗಿಸಲು ಚಿಂತಿಸಲಾಗಿದೆ. ಈ ಕುರಿತು ಈಗಾಗಲೇ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳ ಸಭೆ ನಡೆಸಲಾಗಿದ್ದು ಜಿಲ್ಲೆಯ ಶಾಸಕರ ಒತ್ತಾಸೆಯಂತೆ ಎತ್ತಿನಹೊಳೆ ಯೋಜನೆಯಿಂದಲೂ ವಿ.ವಿ ಸಾಗರಕ್ಕೆ ನೀರು ಸಿಗಲಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

    ಶೀಘ್ರವೇ ಅಧಿಕಾರಿಗಳ ಸಭೆ: ಭದ್ರಾ ಮೇಲ್ದಂಡೆ ಯೋಜನೆಯಿಂದ ಕೈಬಿಟ್ಟಿರುವ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಹಾಗೂ ವಾಣಿ ವಿಲಾಸ ಸಾಗರದ ಹಿನ್ನೀರಿನಿಂದ ತಾಲೂಕಿನ ಹಳ್ಳಿಗಳು ಹಾಗೂ ಪಟ್ಟಣಕ್ಕೆ ನೀರೊದಗಿಸುವ ಬಗ್ಗೆ ಶೀಘ್ರವೇ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

    ಹೊಸದುರ್ಗ ಟಿ.ಬಿ.ವೃತ್ತದಲ್ಲಿ ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಬೆಳಗ್ಗೆಯಿಂದ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಅವರೊಂದಿಗೆ ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಅವರ ಬೇಡಿಕೆಯಂತೆ ಚರ್ಚೆ ನಡೆಸಿ, ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts