More

    ಯೋಧನ ಕುಟುಂಬಕ್ಕೆ ಬಹಿಷ್ಕಾರ?

    ಕಟಕೋಳ: ರಾಮದುರ್ಗ ತಾಲೂಕಿನ ತೋಟಗಟ್ಟಿ ಗ್ರಾಮದ ಯೋಧನೋರ್ವ ತಮ್ಮ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ ಎಂಬ ಆರೋಪ ಮಾಡಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಗಿರೀಶ ಸಾದ್ವಿ ಅವರು ಗುರುವಾರದಂದು ಗ್ರಾಮಕ್ಕೆ ಭೇಟಿ ನೀಡಿ ಪ್ರಮುಖರೊಂದಿಗೆ ಸಭೆ ನಡೆಸಿದರು.

    ಗ್ರಾಮಸ್ಥರು ಹಾಗೂ ನಮ್ಮ (ಯೋಧನ) ಕುಟುಂಬ ಸದಸ್ಯರ ನಡುವೆ ಅನೇಕ ದಿನಗಳಿಂದ ಅಂಗನವಾಡಿ ಜಾಗಕ್ಕೆ ಸಂಬಂಧಿಸಿ ವಿವಾದ ನಡೆಯುತ್ತಿದೆ. ಈ ವಿಚಾರದ ಹಿನ್ನೆಲೆಯಲ್ಲಿಯೇ ಬುಧವಾರ ನಡೆಯಬೇಕಿದ್ದ ನನ್ನ ಮತ್ತು ಸಹೋದರನ ನಿಶ್ಚಿತಾರ್ಥ ಕಾರ್ಯಕ್ಕೆ ನಮ್ಮ ಮನೆಗೆ ಅರ್ಚಕರು ಬಂದಿಲ್ಲ ಎಂದು ಯೋಧ ವಿಠ್ಠಲ ಕಡಕೋಳ ಬುಧವಾರದಂದು ಆರೋಪಿಸಿದ್ದರು.

    ಈ ಹಿನ್ನೆಲೆಯಲ್ಲಿ ರಾಮದುರ್ಗ ತಹಸೀಲ್ದಾರ್ ಗಿರೀಶ ಸ್ವಾದಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಸಂಧಾನ ಸಭೆ ಏರ್ಪಡಿಸಿದರು. ಆದರೆ, ಗ್ರಾಮದ ಹಿರಿಯರು ಸಭೆಗೆ ಬಾರದಿದ್ದರಿಂದ ಸಭೆಯನ್ನು ಮುಂದೂಡಲಾಯಿತು.

    ಜಾಗ ಒತ್ತುವರಿ ಆರೋಪ: ಯೋಧನ ಮನೆಯ ಪಕ್ಕದಲ್ಲಿರುವ ಶಾಲೆಯ ಜಾಗವನ್ನು ಯೋಧನ ಕುಟುಂಬ ಸದಸ್ಯರು ಒತ್ತುವರಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದೇ ಜಾಗದಲ್ಲಿ ಗ್ರಾಮಸ್ಥರು ಅಂಗವನಾಡಿ ಕೇಂದ್ರ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ, ಈ ಸಂಬಂಧ ಯೋಧನ ಕುಟುಂಬ ಹಾಗೂ ಗ್ರಾಮಸ್ಥರ ನಡುವೆ ವಿವಾದ ಆರಂಭವಾಗಿದೆ. ಬಹಿಷ್ಕಾರ ಆರೋಪ ಸುಳ್ಳು.

    ಅಂಗನವಾಡಿ ಜಾಗದ ಬದಲಾಗಿ ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಹೋಗಲು ಜಾಗ ಬಿಡುವ ಬಗ್ಗೆ ಯೋಧನ ಕುಟುಂಬ ಕೊಟ್ಟ ಮಾತು ತಪ್ಪಿದೆ ಎಂದು ಗ್ರಾಪಂ ಸದಸ್ಯ ಈರಣ್ಣ ಹಿರೋಳಿ ಆರೋಪಿಸಿದ್ದಾರೆ. ಸಂಧಾನ ಸಭೆಯಲ್ಲಿ ಗೊಡಚಿ ಗ್ರಾಪಂ ಉಪಾಧ್ಯಕ್ಷ ಈರಣ್ಣ ಕಾಮಣ್ಣವರ, ಸದಸ್ಯ ಈರಣ್ಣ ಹಿರೊಳ್ಳಿ, ಕಾಶೀನಾಥ ಪಾಟೀಲ ಹಾಗೂ ಗ್ರಾಮಸ್ಥರು ಇದ್ದರು.

    ಘಟನೆ ವಿವರ: ಹಲವು ವರ್ಷಗಳಿಂದ ಯೋಧನ ಕುಟುಂಬ ಹಾಗೂ ಗ್ರಾಮಸ್ಥರ ನಡುವೆ ಅಂಗನವಾಡಿ ಕಟ್ಟಡವೊಂದರ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಏರ್ಪಟ್ಟಿದೆ. 2017ರಲ್ಲಿ ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಭೇಟಿ ನೀಡಿ ಸಂಧಾನ ಮಾಡಿದ್ದರು. ಅಂದಿನಿಂದ ಗ್ರಾಮದಲ್ಲಿ ಯೋಧನ ತಂದೆ-ತಾಯಿ ತಮ್ಮ ಪಾಡಿಗೆ ತಾವು ಇದ್ದರು. ಆವಾಗ ಗ್ರಾಮಸ್ಥರ ನಡುವೆ ಯಾವುದೇ ವ್ಯಾಜ್ಯ ಇರಲಿಲ್ಲ. ಆದರೆ, ಬುಧವಾರದಂದು ಯೋಧನ ತಂದೆ ಮಲ್ಲಿಕಾರ್ಜುನ ಅವರು ಪುತ್ರರಾದ ವಿಠ್ಠಲ ಹಾಗೂ ಮಂಜುನಾಥನ ನಿಶ್ಚಿತಾರ್ಥ ಮಾಡಲು ನಿರ್ಧರಿಸಿದ್ದರು.

    ಬಾರದ ಅರ್ಚಕರು: ನಿಶ್ಚಿತಾರ್ಥಕ್ಕೆ ಅರ್ಚಕರಿಗೆ ಆಹ್ವಾನ ನೀಡಿದ್ದರು. ಆದರೆ, ಅರ್ಚಕರು ‘ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ’ ಎಂದಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಯಾಕೆ ಬರುವುದಿಲ್ಲ ಎಂದು ಪ್ರಶ್ನಿಸಿದಾಗ, ‘ಗ್ರಾಮದ ಹಿರಿಯರು ಹೋಗಬೇಡ’ ಎಂದಿದ್ದಾರೆ ಎಂದು ಉತ್ತರಿಸಿದರು.

    ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಮಗೆ ಬಹಿಷ್ಕಾರ ಹಾಕಿದ್ದಾರೆ ಎಂದು ಯೋಧನ ಕುಟುಂಬಸ್ಥರು ಆರೋಪಿಸಿದ್ದರು. ಹೀಗಾಗಿ ರಾಮದುರ್ಗ ತಹಸೀಲ್ದಾರ್ ಗಿರೀಶ ಸ್ವಾದಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಸಂಧಾನ ಸಭೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

    ಶಾಲೆಯ ಜಾಗ ಒತ್ತುವರಿ ಮಾಡಿಲ್ಲ

    ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಯೋಧನ ತಂದೆ ಮಲ್ಲಿಕಾರ್ಜುನ, ತಾಯಿ ಶಾಂತವ್ವ, ನಮ್ಮ ಮಕ್ಕಳ ನಿಶ್ಚಿತಾರ್ಥ ಕಾರ್ಯಕ್ಕೆ ಅರ್ಚಕರು ಹಾಗೂ ಗ್ರಾಮದ ಹಿರಿಯರು ಬಂದಿಲ್ಲ. ಆದರೆ, ಗ್ರಾಮದಲ್ಲಿ ನೀರು, ಅಂಗಡಿ ಸೇರಿ ಯಾವುದೇ ಮೂಲಸೌಕರ್ಯಕ್ಕೆ ತೊಂದರೆ ಆಗಿಲ್ಲ. ನಮ್ಮ ಮನೆಯ ಕಾರ್ಯಕ್ಕೆ ಮಾತ್ರ ಯಾರೂ ಆಗಮಿಸುತ್ತಿಲ್ಲ. ನಾವು ಯಾವುದೇ ಶಾಲೆಯ ಜಾಗ ಒತ್ತುವರಿ ಮಾಡಿಲ್ಲ. ನಮ್ಮ ಮನೆಯ ಮುಂಭಾಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಾವು ವಿರೋಧಿಸಿದ್ದೇ ಈ ಘಟನೆಗೆ ಕಾರಣ ಎಂದರು.

    ಈಗಾಗಲೇ ಯೋಧನ ಕುಟುಂಬಸ್ಥರನ್ನು ಭೇಟಿ ಮಾಡಿ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಬಹಿಷ್ಕಾರ ಹಾಕಿರುವುದು ಮಾಧ್ಯಮಗಳಿಂದ ತಿಳಿದುಬಂದಿತ್ತು. ಕೂಡಲೇ ಊರಿನ ಪ್ರಮುಖರನ್ನು ಕರೆಯಿಸಿ, ವಿಚಾರಣೆ ನಡೆಸುತ್ತೇನೆ. ಸೂಕ್ತ ಜಾಗದಲ್ಲಿ ಅಂಗನವಾಡಿ ನಿರ್ಮಿಸಲು ಕ್ರಮ ಜರುಗಿಸುವುದರ ಜತೆಗೆ ಯೋಧನ ಕುಟುಂಬಕ್ಕೆ ತೊಂದರೆ ನೀಡಿದವರ ವಿರುದ್ಧ ಕ್ರಮಕ್ಕೆ ಸೂಚಿಸುತ್ತೇನೆ.
    | ಮಹಾದೇವಪ್ಪ ಯಾದವಾಡ
    ಶಾಸಕ, ರಾಮದುರ್ಗ

    ಗಡಿಯಲ್ಲಿ ದೇಶ ಕಾಯುವ ಯೋಧನ ಕುಟುಂಬಕ್ಕೆ ಊರಿನಿಂದ ಬಹಿಷ್ಕಾರ, ಸೈನಿಕನ ತಂದೆ-ತಾಯಿಗೆ ರಕ್ಷಣೆ ಇಲ್ಲದಿರುವುದು, ಯೋಧನ ವಿವಾಹಕ್ಕೆ ಅರ್ಚಕರು ತೆರಳದಂತೆ ದಂಡ ವಿಧಿಸಿರುವುದು ದುರ್ದೈವದ ಸಂಗತಿ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ನಡೆಯುತ್ತಿದ್ದ ಘಟನೆಗಳು ಕರ್ನಾಟಕದ ಬೆಳಗಾವಿಯಲ್ಲಿಯೂ ನಡೆದಿರುವುದು ದುರಂತವೇ ಸರಿ. ತಿರುಮಲ ತಿರುಪತಿ ದೇವಸ್ಥಾನದ ನೂರಾರು ಅರ್ಚಕರನ್ನು ಕರೆತಂದು ಇದೇ ಬೆಳಗಾವಿಯಲ್ಲಿಯೇ ವಿವಾಹ ಮಾಡುತ್ತೇವೆ. ಯೋಧನ ಕುಟುಂಬಕ್ಕೆ ನ್ಯಾಯ ದೊರೆಯುವವರೆಗೂ ಹೋರಾಟ ನಡೆಸುತ್ತೇವೆ.
    | ಶಶಾಂಕ್ ಅಧ್ಯಕ್ಷ, ಇಂಡಿಯನ್ ಆರ್ಮಿ ಪೋರಮ್, ಬೆಂಗಳೂರು

    ಮೂರು ವರ್ಷಗಳಿಂದ ಯೋಧನ ಕುಟುಂಬ ಹಾಗೂ ಗ್ರಾಮಸ್ಥರ ನಡುವೆ ವಿವಾದ ಆರಂಭವಾಗಿದ್ದು, ಇನ್ನೂ ಇತ್ಯರ್ಥವಾಗಿಲ್ಲ. ಸಣ್ಣ ವಿಚಾರವನ್ನು ಇಬ್ಬರೂ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರಿಂದ ಈ ವಿವಾದ ಕಗ್ಗಂಟಾಗಲು ಕಾರಣವಾಗಿದೆ. ಗ್ರಾಮಸ್ಥರ ಜತೆ ನೇರವಾಗಿ ಮಾತನಾಡಿ ವಿವಾದ ಇತ್ಯರ್ಥ ಪಡಿಸದೆ, ಯೋಧ ಬೆಂಗಳೂರಿನಲ್ಲಿರುವ ಹಿರಿಯ ಅಧಿಕಾರಿಗಳಿಗೆ ಗ್ರಾಮಸ್ಥರ ವಿರುದ್ಧ ದೂರು ನೀಡುತ್ತಿದ್ದಾರೆ. ಇದು ಜಗಳಕ್ಕೆ ಪ್ರಮುಖ ಕಾರಣವಾಗಿದೆ.
    | ಗಿರೀಶ ಸ್ವಾದಿ ರಾಮದುರ್ಗ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts