More

    ಗ್ರಾಹಕರ ಪಾಲಿಗೆ ಹುಳಿಯಾದ ಟೊಮ್ಯಾಟೊ

    ಹೊರ್ತಿ: ಮಳೆ ಕೈಕೊಟ್ಟಿರುವುದರಿಂದ ತರಕಾರಿ ಅದರಲ್ಲಿಯೂ ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ಇದರಿಂದ ಗ್ರಾಹಕರಿಗೆ ಹೊರೆಯಾಗಿದೆ.
    ಮಾರುಕಟ್ಟೆಯಲ್ಲಿ ಗ್ರಾಹಕರು ತರಕಾರಿ ಖರೀದಿಸಲು ಹೋದಾಗ ಅವುಗಳ ಬೆಲೆ ಕೇಳಿ ದಂಗಾಗುತ್ತಿದ್ದಾರೆ. ಏನ್ರಪೋ ತರಕಾರಿ ಬೆಲೆ ಹಿಂಗಾದ್ರೆ ಹೆಂಗೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ರೈತರು ಏನ್ ಮಾಡೋದ್ರಿ ಸ್ವಾಮಿ, ಮಳಿಯಿಲ್ಲ. ನಾವು ಬಾವಿ, ಕೊಳವೆಬಾವಿಯ ನೀರಿನಿಂದ ಕಷ್ಟಪಟ್ಟು ಬೆಳೆ ಬೆಳೆದೀವಿ. ಖರ್ಚು ಜಾಸ್ತಿ ಆಗೈತಿ. ಈ ಸಾರಿ ಏನಾ ಸ್ವಲ್ಪ ರೇಟ್ ಬಂದೈತಿ. ಭಾಳಾ ಸಾರಿ ನಾವು ಆಳಿನ ಕೂಲಿನೂ ಕೈಯಿಂದ ಕೊಟ್ಟೀವಿ ಎನ್ನುತ್ತಿದ್ದಾರೆ.

    ಹೊರ್ತಿ ಗ್ರಾಮದ ಸಂತೆಯಲ್ಲಿ ತರಕಾರಿ ಬೆಲೆ ಏರಿಕೆಯ ಪರಿಣಾಮ ಕೊಳ್ಳುವ ಗ್ರಾಹಕರಿಗಿಂತ ಮಾರುವ ವ್ಯಾಪಾರಸ್ಥರ ಸಂಖ್ಯೆ ಹೆಚ್ಚಾಗಿ ಕಂಡುಬಂತು. ಪ್ರತಿ ಕೆಜಿಗೆ ಟೊಮ್ಯಾಟೊ 120ರಿಂದ 140ರೂ. ಹಸಿಮೆಣಸಿಕಾಯಿ 130 ರೂ. ಬೆಂಡೆಕಾಯಿ 80ರೂ. ಹಿರೇಕಾಯಿ 80ರೂ. ಬದನೆಕಾಯಿ 80ರೂ. ಮೆಂತೆಸೊಪ್ಪು ಒಂದು ಕಟ್ಟಿಗೆ 25 ರೂ. ದರವಿದೆ. ಹೀಗಾಗಿ ಗ್ರಾಹಕರು ಖರೀದಸದೇ ಎಲ್ಲ ಕಡೆಗೂ ವಿಚಾರಿಸುತ್ತ ಸಾಗುತ್ತಿರುವ ದೃಶ್ಯಗಳು ಕಂಡುಬಂದವು.
    ತಿಂಗಳ ಹಿಂದೆ ಟೊಮ್ಯಾಟೊ 10 ರೂ.ಗೆ ಕೆಜಿಯಿತ್ತು. ಯಾರು ಖರೀದಿಸಲು ಮುಂದೆ ಬರದ ಹಿನ್ನೆಲೆಯಲ್ಲಿ ಬೆಳೆಗಾರರು ಮತ್ತು ವ್ಯಾಪಾರಿಗಳು ನಡೆ ರಸ್ತೆಯಲ್ಲಿ ಸುರಿದು ಮನೆಗೆ ಹೋಗುವ ಸನ್ನಿವೇಶವಿತ್ತು. ಮಾರುಕಟ್ಟೆಗೆ ಟೊಮ್ಯಾಟೊ ಕಡಿಮೆ ಬಂದಿರುವುದರಿಂದ ಬೆಲೆ ಹೆಚ್ಚಾಗಿದೆ ಎಂಬುದು ರೈತರ ವ್ಯಾಪಾರಿಗಳ ಮಾತಾಗಿದೆ.

    ಮುಂಗಾರು ಮಳೆಗಳು ರೈತರಿಗೆ ಕೈಕೊಟ್ಟಿವೆ. ಇದರಿಂದ ತರಕಾರಿ ಬೆಲೆ ಗ್ರಾಹಕರಿಗೆ ಕಂಗಾಲಾಗಿಸಿದೆ. ಹೀಗೆ ಮುಂದುವರೆದರೆ ಇನ್ನು ದರ ಏರಿಕೆ ಹೆಚ್ಚಾಗುತ್ತದೆ. ತರಕಾರಿ ಬೆಲೆಯ ನಿಯಂತ್ರಣಕ್ಕೆ ಸರ್ಕಾರ ಗಮನ ಹರಿಸಬೇಕು. ದುಬಾರಿ ದರದಿಂದ ಕೆಲವರು ತರಕಾರಿ ಖರೀದಿ ಮಾಡದೆ ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ.
    ಶರಣಬಸು ಡೋಣಗಿ, ಗ್ರಾಹಕ ಹೊರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts