More

    ರೇಷ್ಮೆ ಬೆಳೆಗಾರರಲ್ಲಿ ಆಶಾಭಾವ

    ರಾಣೆಬೆನ್ನೂರ: ವಿಧಾನ ಪರಿಷತ್ ಸದಸ್ಯ ಆರ್. ಶಂಕರ ಅವರಿಗೆ ತೋಟಗಾರಿಕೆ ಮತ್ತು ರೇಷ್ಮೆ ಖಾತೆ ನೀಡಲಾಗಿದ್ದು, ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಹೆಚ್ಚಿನ ಅನುಕೂಲ ದೊರಕುವ ನಿರೀಕ್ಷೆ ಹೊಂದಲಾಗಿದೆ.

    ಜಿಲ್ಲೆಯ ರಾಣೆಬೆನ್ನೂರ, ಹಿರೇಕೆರೂರ, ಬ್ಯಾಡಗಿ, ಹಾನಗಲ್ಲ ಸೇರಿ ಇತರ ತಾಲೂಕಿನಲ್ಲೂ ರೇಷ್ಮೆ ಹೆಚ್ಚಾಗಿ ಬೆಳೆಯಲಾಗುತ್ತಿದೆ. ರೇಷ್ಮೆ ಗೂಡು ನಿರ್ವಣಕ್ಕಾಗಿ ಇಲಾಖೆ ನೀಡುವ 1.5 ಲಕ್ಷ ರೂ. ಸಹಾಯಧನ ನಾಲ್ಕೈದು ವರ್ಷ ಕಳೆದರೂ ಜಿಲ್ಲೆಯ ರೈತರಿಗೆ ದೊರೆತಿಲ್ಲ. ಹುಳು ಖರೀದಿ, ಗೂಡು ನಿರ್ವಣದ ಚಂದ್ರಿಕೆ ಸೇರಿ ಇತರ ಉಪಕರಣಗಳನ್ನು ಸಬ್ಸಿಡಿಯಲ್ಲಿ ರೈತರಿಗೆ ನೀಡಬೇಕು. ಆದರೆ ಈ ಯೋಜನೆಗಳು ಗಗನ ಕುಸುಮವಾಗಿದೆ.

    ಹಾವೇರಿಯಲ್ಲಿ ತೆರೆದಿರುವ ರೇಷ್ಮೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಹ ದೊರೆಯದಾಗಿದೆ. ಇಂಥ ಕಾರಣಗಳಿಂದ ರೈತರು ರೇಷ್ಮೆ ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಇದೀಗ ಜಿಲ್ಲೆಯ ಆರ್. ಶಂಕರ ಅವರಿಗೆ ರೇಷ್ಮೆ ಖಾತೆ ನೀಡಿದ್ದರಿಂದ ರೇಷ್ಮೆ ಬೆಳೆಗಾರರಲ್ಲಿ ಆಶಾಭಾವ ಮೂಡಿದೆ.

    ಆಗಬೇಕಿರುವ ಕಾಮಗಾರಿ: ನಗರಕ್ಕೆ ಇನ್ನೊಂದು ಪೊಲೀಸ್ ಠಾಣೆ, ಹೊಸ ಬಸ್ ನಿಲ್ದಾಣ ಮಾಡಬೇಕು ಎಂಬ ಬೇಡಿಕೆಯೂ ಹಾಗೆ ಉಳಿದಿದೆ. ನಿರಂತರ ಕುಡಿಯುವ ನೀರಿನ ಕಾಮಗಾರಿ ಮುಗಿದು ಜನತೆಗೆ ನೀರು ಒದಗಿಸಬೇಕಿತ್ತು. ಆದರೆ, ಇಂದಿಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಒಳಚರಂಡಿಗಾಗಿ ತೋಡಿದ ರಸ್ತೆಗಳ ಮರು ಡಾಂಬರೀಕರಣವಾಗಿಲ್ಲ. ನಗರದ ದೊಡ್ಡಪೇಟೆ ಅಭಿವೃದ್ಧಿ ಕಾರ್ಯ ಮಂದಗತಿಯಲ್ಲಿ ಸಾಗಿದೆ. ನಗರದ ಬಹುತೇಕ ಪಾರ್ಕ್​ಗಳು ಪಾಳು ಬಿದ್ದಿವೆ.

    ರಾಣೆಬೆನ್ನೂರನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿ ಮಾಡುವುದಾಗಿ ಆರ್. ಶಂಕರ ಈ ಹಿಂದಿನಿಂದಲೂ ಹೇಳುತ್ತ ಬಂದಿದ್ದಾರೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಈಗ ಮತ್ತೆ ಸಚಿವ ಸ್ಥಾನ ಒಲಿದು ಬಂದಿದೆ. ಇನ್ನು ಮುಂದಾದರೂ ಅಭಿವೃದ್ಧಿ ಕಾರ್ಯಗಳು ತೇಜಿ ಪಡೆಯಲಿವೆ ಎನ್ನುವ ಆಶಾಭಾವ ಗರಿಗೆದರಿದೆ.

    ಹರಾಜಾಗದೆ ಉಳಿದ ಮಳಿಗೆಗಳು

    ಎಂ.ಜಿ. ರಸ್ತೆಯಲ್ಲಿ ನಗರಸಭೆ ವತಿಯಿಂದ 2017ರಲ್ಲಿಯೇ ನಿರ್ವಿುಸಿದ 72 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಮೂರು ವರ್ಷದಿಂದ ನನೆಗುದಿಗೆ ಬಿದ್ದಿದೆ. ಇದರಿಂದ ನಗರಸಭೆಗೆ ಕೋಟ್ಯಂತರ ರೂ. ನಷ್ಟವಾಗಿದೆ. ಆರ್. ಶಂಕರ ಆಗಲಿ, ಶಾಸಕ ಅರುಣಕುಮಾರ ಪೂಜಾರ, ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿಯಾಗಲಿ ಈವರೆಗೂ ಮಳಿಗೆ ಹರಾಜಿಗೆ ಕ್ರಮ ಕೈಗೊಂಡಿಲ್ಲ. ಈಗಲಾದರೂ ಸಚಿವರು ಮುತುವರ್ಜಿ ವಹಿಸಿ ಮಳಿಗೆ ಹರಾಜಿಗೆ ಕ್ರಮ ವಹಿಸಬೇಕು ಎಂಬುದು ವ್ಯಾಪಾರಸ್ಥರ ಆಗ್ರಹವಾಗಿದೆ.

    ಈ ಹಿಂದೆ ಪೌರಾಡಳಿತ ಖಾತೆ ವಹಿಸಿಕೊಂಡಾಗ ನಗರಸಭೆಯ ಎಂ.ಜಿ. ರಸ್ತೆಯ ಮಳಿಗೆಗಳನ್ನು ಹರಾಜು ಮಾಡುವ ಕುರಿತು ಪರಿಶೀಲಿಸಿದ್ದೆ. ಅಷ್ಟರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಈಗ ಅಧಿಕಾರಿಗಳ ಜತೆ ಮಾತನಾಡಿ ಹರಾಜು ಪ್ರಕ್ರಿಯೆ ಏನಾಗಿದೆ ತಿಳಿದು ಕ್ರಮ ಜರುಗಿಸಲಾಗುವುದು. ಇನ್ನುಳಿದಂತೆ ಎರಡು ವರ್ಷದ ಅವಧಿಯಲ್ಲಿ ಜನತೆಗೆ ನೀಡಿದ ಭರವಸೆಯಂತೆ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ಮಾಡುತ್ತೇನೆ.
    | ಆರ್. ಶಂಕರ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts