More

    ಬಿತ್ತನೆ ಬೀಜ, ರಸಗೊಬ್ಬರಕ್ಕಿಲ್ಲ ಕೊರತೆ

    ಹೊನ್ನಾಳಿ : ಮುಂಗಾರು ಹಂಗಾಮು ಪ್ರಾರಂಭವಾಗಿರುವುದರಿಂದ ರೈತರು ಯಾವುದೇ ಕ್ಷಣದಲ್ಲಾದರೂ ಬಿತ್ತನೆ ಪ್ರಾರಂಭಿಸುವ ಹಿನ್ನೆಲೆಯಲ್ಲಿ ಕೊರತೆಯಾಗದ ರೀತಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು.
     ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಿ ಬುಧವಾರ ಮಾತನಾಡಿದರು.
     ಈ ವೇಳೆಗಾಗಲೇ ಮುಂಗಾರು ಪ್ರಾರಂಭವಾಗಬೇಕಾಗಿತ್ತು. ಆದರೆ, ತಡವಾಗಿದ್ದು ಈ ವಾರದಲ್ಲಿ ಮಳೆ ಬರುವ ಸಾಧ್ಯತೆ ಇದೆ. ರೈತರು ಮಳೆ ನೋಡಿಕೊಂಡು ಬಿತ್ತನೆ ಕಾರ್ಯ ಪ್ರಾರಂಭಿಸಿ ಎಂದು ಮನವಿ ಮಾಡಿದರು.
     ಜ. 1ರಿಂದ ಜೂನ್ 12ರ ವರೆಗೆ ತಾಲೂಕಿನಲ್ಲಿ ವಾಡಿಕೆಯಂತೆ 146.4 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಕೇವಲ  97.6 ಮಿ.ಮೀ.ನಷ್ಟು ಮಳೆಯಾಗಿದೆ. ಶೇ. 33ರಷ್ಟು ಮಳೆ ಕೊರತೆಯಾಗಿದೆ. ನ್ಯಾಮತಿ ತಾಲೂಕಿನಲ್ಲಿ 158.9 ಮಿ.ಮೀ.ನಷ್ಟು ಮಳೆಯಾಗಬೇಕಿತ್ತು. ಆದರೆ, ಈವರೆಗೆ 105 ಮಿಮೀ ಮಾತ್ರ ಮಳೆಯಾಗಿದೆ ಎಂದು ವಿವರಿಸಿದರು.
     ಸಹಾಯಕ ಕೃಷಿ ನಿರ್ದೇಶಕಿ ಪ್ರತಿಮಾ ಮಾತನಾಡಿ, ಅವಳಿ ತಾಲೂಕಿನ ಆರು ಹೋಬಳಿಗಳ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಮೆಕ್ಕೆಜೋಳ, ಅಲಸಂದಿ, ತೊಗರಿ, ಶೇಂಗಾ, ರಾಗಿ, ಸೊಯಾಬಿನ್ ಸೇರಿ ಅನೇಕ ಬಿತ್ತನೆ ಬೀಜ ದಾಸ್ತಾನು ಮಾಡಿದ್ದೇವೆ ಎಂದರು.
     ಅವಳಿ ತಾಲೂಕಿನಲ್ಲಿ ಬಹುತೇಕ ಮೆಕ್ಕೆಜೋಳ ಹೆಚ್ಚು ಬಿತ್ತನೆ ಮಾಡುವುದರಿಂದ ವಿವಿಧ ಬ್ರಾೃಂಡಿನ ಮೆಕ್ಕೆಜೋಳದ ಬಿತ್ತನೆ ಬೀಜ ದಾಸ್ತಾನು ಇದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಒಂದು ಪ್ಯಾಕೇಟ್‌ಗೆ 120 ರೂ., ಸಾಮಾನ್ಯ ವರ್ಗದವರಿಗೆ 20 ರೂ. ರಿಯಾಯಿತಿ ಇದೆ ಎಂದು ತಿಳಿಸಿದರು.
     ಅಲಸಂದಿ ಬಿತ್ತನೆ ಬೀಜ ಎಸ್ಸಿ ಹಾಗೂ ಎಸ್ಟಿಗೆ 180 ರೂ. ಹಾಗೂ ಸಾಮಾನ್ಯ ವರ್ಗಕ್ಕೆ 120 ರೂ., ತೊಗರಿ ಬಿತ್ತನೆ ಬೀಜ ಎಸ್ಸಿ, ಎಸ್ಟಿಗೆ 187 ರೂ. ಹಾಗೂ ಸಾಮಾನ್ಯ ವರ್ಗಕ್ಕೆ 125 ರೂ. ರಿಯಾಯಿತಿ ದರದಲ್ಲಿ ದೊರೆಯಲಿದೆ ಎಂದು ತಿಳಿಸಿದರು.
     ಈಗಾಗಲೇ 3500 ಟನ್ ಯೂರಿಯಾ, 1800 ಟನ್ ಡಿಎಪಿ ಹಾಗೂ ಕಾಂಪ್ಲೆಕ್ಸ್ 3000 ಟನ್ ಗೊಬ್ಬರ ದಾಸ್ತಾನು ಮಾಡಿದೆ ಎಂದು ವಿವರಿಸಿದರು.
     ಟಿಎಪಿಸಿಎಂಎಸ್ ಅಧ್ಯಕ್ಷ ಗಜೇಂದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆಂಗಲಹಳ್ಳಿ ಷಣ್ಮುಖಪ್ಪ, ಟಿಎಪಿಸಿಎಂಎಸ್ ಕಾರ್ಯದರ್ಶಿ ಮುರುಗೇಶ್, ಮುಖಂಡರಾದ ಶೇಖರಪ್ಪ, ಕುಬೇರನಾಯ್ಕ, ಜಿಪಂ ಮಾಜಿ ಸದಸ್ಯ ಶಿವರಾಮ್‌ನಾಯ್ಕ, ಗೋಪಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts