More

    ಜಿದ್ದಾಜಿದ್ದಿಗೆ ಹೊನ್ನಾಳಿ ಹೆಸರು

    ಶ್ರೀನಿವಾಸ್ ಟಿ. ಹೊನ್ನಾಳಿ: ಭೌಗೋಳಿಕವಾಗಿ ಮಲೆನಾಡಿನ ಸೆರಗಿನಲ್ಲಿರುವ ಹಾಗೂ ಅರೆ ಮಲೆನಾಡು ಎಂದು ಕರೆಸಿಕೊಂಡಿರುವ ಹೊನ್ನಾಳಿ ತಾಲೂಕು ಉತ್ತರ ಹಾಗೂ ದಕ್ಷಿಣ ಕರ್ನಾಟಕವನ್ನು ಸಂಪರ್ಕಿಸುವ ಮಧ್ಯ ಸೇತುವಾಗಿದ್ದು, ಬಹಳಷ್ಟು ವಿಶೇಷತೆ ಹೊಂದಿದೆ.

    ಈ ಮೊದಲು ಶಿವಮೊಗ್ಗ ಮಡಿಲಲ್ಲಿದ್ದ ಹೊನ್ನಾಳಿ ತಾಲೂಕನ್ನು 1997ರ ಮಾರ್ಚ್ 15ರಂದು ದಾವಣಗೆರೆ ಜಿಲ್ಲೆಗೆ ಸೇರಿಸಲಾಯಿತು. ಬೆಳಗುತ್ತಿ, ಚೀಲೂರು, ಗೋವಿನಕೋವಿ, ಕುಂದೂರು, ಸಾಸ್ವೇಹಳ್ಳಿ ಹಾಗೂ ಕಸಬಾ ಸೇರಿ ಆರು ಹೋಬಳಿಗಳಿದ್ದು, ರಾಜಕೀಯವಾಗಿ ಜಿಲ್ಲೆಯಲ್ಲಿಯೇ ಅತೀ ಸೂಕ್ಷ್ಮ ಹಾಗೂ ಚುನಾವಣೆ ವೇಳೆ ಬಹಳ ಜಿದ್ದಿಗೆ ಬೀಳುವ ಏಕೈಕ ವಿಧಾನಸಭಾ ಕ್ಷೇತ್ರ ಎಂದು ಗುರುತಿಸಿಕೊಂಡಿದೆ.ಜಿದ್ದಾಜಿದ್ದಿಗೆ ಹೊನ್ನಾಳಿ ಹೆಸರು

    ತುಂಗಭದ್ರಾ ನಾಲೆಗಳ ಬಲ: ಇಲ್ಲಿನ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮಠ, ಅನೇಕ ಪವಾಡಗಳಿಗೆ ಪ್ರಸಿದ್ಧಿಯಾದ ಹಿರೇಕಲ್ಮಠ, ರಾಂಪುರದ ಹಾಲಸ್ವಾಮಿ ಮಠ ಹಾಗೂ ಹೊಟ್ಯಾಪುರದ ಮಠಗಳು ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ ಜನ್ಮಸ್ಥಳ ಅಧ್ಯಾತ್ಮ ಹಾಗೂ ಧಾರ್ಮಿಕ ಕೇಂದ್ರಗಳಾಗಿವೆ.

    ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ 57 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, ಭತ್ತ, ಅಡಕೆ, ಹತ್ತಿ, ತಂಬಾಕು ಹಾಗೂ ತರಕಾರಿ, ದ್ವಿದಳ ಧಾನ್ಯ ಬೆಳೆಯುತ್ತಿದ್ದಾರೆ. ತುಂಗಾ ಹಾಗೂ ಭದ್ರಾ ನಾಲೆಗಳಿರುವುದರಿಂದ ಇಲ್ಲಿನ ಕೆಲ ಪ್ರದೇಶದಲ್ಲಿ ರೈತರು ಎರಡು ಬೆಳೆ ಬೆಳೆಯುತ್ತಿದ್ದಾರೆ.

    1957 ರಲ್ಲಿ ಹೊನ್ನಾಳಿ ದ್ವಿಸದಸ್ಯ ಕ್ಷೇತ್ರವಾಗಿತ್ತು. ಕಾಂಗ್ರೆಸ್‌ನ ಎಚ್.ಎಸ್.ರುದ್ರಪ್ಪ ಹಾಗೂ ದೂದ್ಯನಾಯ್ಕ ಆಯ್ಕೆಯಾಗಿದ್ದರು. ಇದುವರೆಗೂ 15 ಚುನಾವಣೆ ಕಂಡಿದೆ. ಹೊನ್ನಾಳಿ ತಾಲೂಕು ದಾವಣಗೆರೆ ಜಿಲ್ಲೆ ಸೇರಿದ ನಂತರ 5 ಚುನಾವಣೆ ಕಂಡು ಇದೀಗ ಆರನೇ ಚುನಾವಣೆಗೆ ಸಜ್ಜಾಗಿದೆ.

    ಜಿದ್ದಾಜಿದ್ದಿಗೆ ಹೊನ್ನಾಳಿ ಹೆಸರು

    ಡಿ.ಪರಮೇಶ್ವರಪ್ಪ, ಎಚ್.ಬಿ.ಕಾಡಸಿದ್ದಪ್ಪ, ಡಿ.ಜಿ.ಬಸವನಗೌಡ, ಡಿ.ಜಿ.ಶಾಂತನಗೌಡ ಎರಡು ಬಾರಿ ಗೆಲುವಿನ ನಗೆ ಬೀರಿದ್ದರೆ, ಎಚ್.ಬಿ. ಕೃಷ್ಣಮೂರ್ತಿ, ಡಾ.ಡಿ.ಗಂಗಪ್ಪ ಒಂದು ಬಾರಿ ಗೆಲುವು ಸಾಧಿಸಿದ್ದಾರೆ. ಶಾಸಕ ಎಂ.ಪಿ.ರೇಣುಕಾಚಾರ್ಯ ಮೂರು ಬಾರಿ ಜಯ ಗಳಿಸುವ ಮೂಲಕ ಹ್ಯಾಟ್ರಿಕ್ ಗೆಲುವು ಕಂಡಿದ್ದಾರೆ.

    ಎಂಟು ಬಾರಿ ಕಾಂಗ್ರೆಸ್, ಎರಡು ಬಾರಿ ಪಕ್ಷೇತರ, ಮೂರು ಬಾರಿ ಬಿಜೆಪಿ, ತಲಾ ಒಂದು ಬಾರಿ ಪಿಸಿಪಿ ಹಾಗೂ ಕೆಸಿಪಿ ಇಲ್ಲಿ ಜಯ ಸಾಧಿಸಿದೆ. 2004 ರಲ್ಲಿ ಎಂ.ಪಿ.ರೇಣುಕಾಚಾರ್ಯ ಆಯ್ಕೆಯೊಂದಿಗೆ ಬಿಜೆಪಿ ಖಾತೆ ತೆರೆಯಿತು. ಪ್ರಸ್ತುತ ಅವರೇ ಇಲ್ಲಿ ಶಾಸಕರಾಗಿದ್ದಾರೆ. ಪ್ರಜಾ ಶೋಷಿಯಲ್ ಪಾರ್ಟಿಯಿಂದ ಆಯ್ಕೆಯಾದ ಎಚ್.ಎಸ್.ರುದ್ರಪ್ಪ ಮತ್ತು ಬಿಜೆಪಿಯಿಂದ ಆಯ್ಕೆಯಾಗಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಇಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

    ಇತ್ತ ಕ್ಷೇತ್ರದಲ್ಲಿ ಕಳೆದ ಎರಡು ತಿಂಗಳಿನಿಂದ ಚುನಾವಣೆ ಕಾವು ಜೋರಾಗಿದೆ. ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಹಗಲು ರಾತ್ರಿ ಎನ್ನದೆ ಪ್ರಚಾರ ನಡೆಸಿದ್ದಾರೆ. ಈಗಾಗಲೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ ನಡೆದಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ. ಕಾರ್ಯಕ್ರಮದಲ್ಲೇ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಇಬ್ಬರೂ ತಮ್ಮದೇ ಶೈಲಿಯಲ್ಲಿ ಟಿಕೆಟ್‌ಗೆ ತಮ್ಮ ಹಕ್ಕು ಮಂಡಿಸಿ ಗಮನಸೆಳೆದಿದ್ದಾರೆ.

    ಮಾ. 17 ರಂದು ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಹತ್ತಾರು ಸಚಿವರ ದಂಡು ಹೊನ್ನಾಳಿಗೆ ಆಗಮಿಸಲಿದ್ದು, ಅಂದು 1850 ಕೋಟಿ ರೂಪಾಯಿಗೂ ಹೆಚ್ಚು ಕಾಮಗಾರಿಗಳನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಅಂದೇ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಬಿಜೆಪಿ ಟಿಕೆಟ್ ಎಂಬ ಪರೋಕ್ಷ ಘೋಷಣೆ ಮಾಡುವ ಸಾಧ್ಯತೆ ಹೆಚ್ಚು ಇದೆ.

    ಕಾಂಗ್ರೆಸ್‌ನಿಂದ ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಮುಖಂಡರಾದ ಬಿ.ಸಿದ್ದಪ್ಪ, ಎಚ್.ಎ.ಉಮಾಪತಿ ಹಾಗೂ ವಿಶ್ವನಾಥ್ ಸಹ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದು, ಯಾರಿಗೆ ಕೈ ಹೈಕಮಾಂಡ್ ಕೃಪೆ ತೋರಲಿದೆ ಎಂಬುದು ಇನ್ನೂ ನಿಗೂಢ. ಆದರೆ, ಬಿಜೆಪಿಯಿಂದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಟಿಕೆಟ್ ಬಹುತೇಕ ಖಚಿತ ಎಂಬ ವಾತಾವರಣ ನಿರ್ಮಾಣ ಆಗಿದೆ.

    ಜೆಡಿಎಸ್ ಪಕ್ಷ ಕೋಟೆಮಲ್ಲೂರಿನ ಬಿ.ಜಿ.ಶಿವಮೂರ್ತಿ ಗೌಡ ಅಭ್ಯರ್ಥಿ ಎಂದು ಆರು ತಿಂಗಳ ಮುಂಚೆಯೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts