More

    ಮಳೆ ಹಾನಿ ವರದಿ ಒಪ್ಪದ ಎಂಪಿಆರ್; ಅಧಿಕಾರಿಗಳ ಸಮೀಕ್ಷೆಗೆ ಆಕ್ಷೇಪ, 150 ಕೋಟಿ ಅಧಿಕ ಹಾನಿ ಎಂದ ಶಾಸಕ

    ಹೊನ್ನಾಳಿ: ಹೊನ್ನಾಳಿ-ನ್ಯಾಮತಿ ತಾಲೂಕುಗಳಲ್ಲಿ ಈ ಬಾರಿ ಅತಿವೃಷ್ಟಿಯಿಂದಾಗಿ ಸುಮಾರು 150 ಕೋಟಿ ರೂಪಾಯಿಗೂ ಅಧಿಕ ಹಾನಿಯದಂತೆ ಇದೆ. ಹೀಗೇಕೆ ಅಸಮರ್ಪಕ ವರದಿ ಕೊಡುತ್ತಿದ್ದೀರಿ? ಮನೆಯಲ್ಲಿ ಕುಳಿತುಕೊಳ್ಳದೇ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಪಾರದರ್ಶಕ-ಸಮಗ್ರ ವರದಿ ಕೊಡಿ.

    ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಸೋಮವಾರ, ಮಳೆ ಹಾನಿ ಸಂಬಂಧ ಅವಳಿ ತಾಲೂಕಿನ ಅಧಿಕಾರಿಗಳ ತುರ್ತು ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೀಗೆ ಘರ್ಜಿಸಿದರು.

    ವಿವಿಧ ಇಲಾಖೆ ಅಧಿಕಾರಿಗಳು ಸಲ್ಲಿಸಿದ ಮಳೆಹಾನಿ ವರದಿ ವೀಕ್ಷಿಸಿದ ಶಾಸಕರು, ಇದೇನಿದು ಎರಡೂ ತಾಲೂಕಿನಿಂದ ಒಟ್ಟಾರೆ 63.31 ಕೋಟಿ ರೂ. ಹಾನಿ ಎಂದು ದಾಖಲಿಸಿದ್ದೀರಿ ! ಸ್ವಲ್ಪ ಮಾನವೀಯತೆ. ಮನುಷ್ಯತ್ವ ಇಟ್ಟುಕೊಂಡು ಕೆಲಸ ಮಾಡಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

    ಈ ವರದಿ ಸಮರ್ಪಕವಾಗಿಲ್ಲ. ಇದನ್ನು ಜನ ಕೇಳಿದರೆ ಛೀಮಾರಿ ಹಾಕುತ್ತಾರೆ. ಕೃಷಿ, ಕಂದಾಯ, ತೋಟಗಾರಿಕೆ ಅಧಿಕಾರಿಗಳು ಮತ್ತು ಪಿಡಿಒಗಳು ಸರಿಯಾಗಿ ಸಮೀಕ್ಷೆ ನಡೆಸಿ ವರದಿ ನೀಡಬೇಕು. ಹೋಗೆ ಬೇಕಾ ಬಿಟ್ಟಿ ವರದಿ ಕೊಡಬೇಡಿ ಎಂದು ತಾಕೀತು ಮಾಡಿದರು.

    ಉಭಯ ತಾಲೂಕುಗಳಲ್ಲಿ ಮಳೆಯಿಂದಾಗಿ ಶೇ.90ರಷ್ಟು ಬೆಳೆ ಹಾನಿಯಾಗಿದೆ. ಹಾಗಿದ್ದರೂ ಮನೆಯಲ್ಲೇ ಕುಳಿತು ವರದಿ ತಯಾರಿಸುತ್ತೀರಿ. ಇಂಥ ಸೋಮಾರಿತನ ಒಳ್ಳೆಯದಲ್ಲ. ನಾನು-ನೀವು ಮನೆಯಿಂದ ತಂದು ಪರಿಹಾರ ಕೊಡುತ್ತೀವಾ? ಬೆಚ್ಚಗಿನ ಕಚೇರಿ ಗೂಡು ಬಿಟ್ಟು ಸ್ಥಳಕ್ಕೆ ತೆರಳಿ. ಪರದರ್ಶಕ ವರದಿ ಕೊಡಬೇಕು ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಸೂಚಿಸಿದರು.

    ನಿಯತ್ತಾಗಿ ಕೆಲಸ ಮಾಡಿ: ಸರ್ಕಾರ ಕೊಡೋ ಸಂಬಳಕ್ಕೆ ಮೈ ಚಳಿ ಬಿಟ್ಟು ನಿಯತ್ತಾಗಿ ಕೆಲಸ ಮಾಡಿ. ಇಲ್ಲದಿದ್ದರೆ ಕ್ರಮಕ್ಕೆ ಸಿದ್ಧರಾಗಿ. ಸಂಕಷ್ಟದಲ್ಲಿರುವ ಜನರ ನೆರವಿಗೆ ನಿಲ್ಲಬೇಕು. ಅದು ಬಿಟ್ಟು ಎಲ್ಲೋ ಕುಳಿತು ಫೋಟೊ ಕೊಡಿ..ಆಧಾರ್ ಕಾರ್ಡ್ ಕೊಡಿ.. ಎನ್ನುತ್ತೀರಲ್ಲ ಎಂದು ಗ್ರಾಮ ಲೆಕ್ಕಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರು, ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು.

    ದರಪಟ್ಟಿ ಪ್ರಕಟಿಸಿ: ಎಲ್ಲ ಖಾಸಗಿ ಗೊಬ್ಬರ ಅಂಗಡಿಗಳಲ್ಲಿ ಕೇಂದ್ರ ಸರ್ಕಾರದ ರಿಯಾಯಿತಿ ದರ ಮತ್ತು ಮಾರಾಟ ದರಪಟ್ಟಿ ಪ್ರಕಟಿಸಬೇಕು. ಪ್ರಕಟಿಸದ ಅಂಗಡಿಗಳ ಪರವಾನಗಿ ರದ್ದು ಮಾಡಿ ಎಂದು ತಾಲೂಕು ಕೃಷಿ ಸಹಾಯಕ ಅಧಿಕಾರಿ ಪ್ರತಿಮಾ ಅವರಿಗೆ ಸೂಚಿಸಿದರು.
    ಸಭೆಯಲ್ಲಿ ಎಸಿ ಹುಲ್ಲುಮನಿ ತಿಮ್ಮಣ್ಣ, ಕೃಷಿ ಅಧಿಕಾರಿ ಸಿದ್ದೇಶ್, ತಹಸೀಲ್ದಾರ್ ರಶ್ಮಿ, ರೇಣುಕಾ, ಇಒ ರಾಮಾ ಭೋವಿ, ಜಿಪಂ ಎಇಇ ಅಜ್ಜಪ್ಪ, ತುಂಗಾ ಮೇಲ್ದಂಡೆ ಎಇಇ ಮಂಜುನಾಥ್, ಲೋಕೋಪಯೋಗಿ ಇಂಜಿನಿಯರ್ ಗಂಗಪ್ಪ,ಪುರಸಭೆ ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ, ಇದ್ದರು.

    63.31 ಕೋಟಿ ರೂ. ಮಳೆಹಾನಿ
    ಮಳೆಯಿಂದಾಗಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳಲ್ಲಿ ಒಟ್ಟು 63.31 ಕೋಟಿ ರೂ. ಹಾನಿಯಾಗಿದೆ ಎಂದು ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಸಭೆಗೆ ಮಾಹಿತಿ ನೀಡಿದರು. 289 ಮನೆಗಳಿಗೆ ಧಕ್ಕೆಯಾಗಿದೆ. 296 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು ಇದರಿಂದ ಒಟ್ಟು 9.36 ಕೋಟಿ ರೂ. ನಷ್ವಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ 6.11 ಕೋಟಿ ರೂ., ಶಿಕ್ಷಣ ಇಲಾಖೆಯಲ್ಲಿ 18.18 ಕೋಟಿ ರೂ., ಸಿಡಿಪಿಒ ಇಲಾಖೆ- 4.50 ಕೋಟಿ ರೂ., ತೋಟಗಾರಿಕೆ ಇಲಾಖೆ- 1.56 ಕೋಟಿ ರೂ. ಹಾಗೂ ಕೃಷಿ ಇಲಾಖೆ ವ್ಯಾಪ್ತಿಯಲ್ಲಿ 14.59 ಕೋಟಿ ರೂ. ಹಾನಿಯಾಗಿದೆ ಎಂದು ತಿಳಿಸಿದರು. ಆದರೆ, ಶಾಸಕ ರೇಣುಕಾಚಾರ್ಯ ಈ ವರದಿ ಅಸಮರ್ಪಕ ಎಂದು ಆಕ್ಷೇಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts