More

    ಮನೆಗಳಿಗೇ ದಿನಸಿ ಪೂರೈಸಿ – ಸಚಿವ ಸುರೇಶ ಅಂಗಡಿ

    ಬೆಳಗಾವಿ: ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾನವೀಯತೆಯಿಂದ ಅಗತ್ಯ ವಸ್ತು ಪೂರೈಸುವುದು ವ್ಯಾಪಾರ ಧರ್ಮ. ನೀವು ಇದ್ದರೆ ಕುಟುಂಬ, ಕುಟುಂಬಗಳಿದ್ದರೆ ಸಮಾಜ. ಹೀಗಾಗಿ ಪ್ರತಿಯೊಬ್ಬರ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ತಪ್ಪದೇ ದಿನಸಿ ಸಾಮಾಗ್ರಿ ಪೂರೈಸಬೇಕು ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ವ್ಯಾಪಾರಸ್ಥರಿಗೆ ಸೂಚನೆ ನೀಡಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ರವಿವಾರಪೇಟೆ ವ್ಯಾಪಾರಸ್ಥರ ಸಭೆ ನಡೆಸಿ, ಸ್ಥಳೀಯ ಗ್ರಾಹಕರಿಗೆ ಸಾಧ್ಯವಾದರೆ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

    ಯಾವುದೇ ಕಾರಣಕ್ಕೂ ದಿನಸಿ ಸಾಮಗ್ರಿಗಳ ಸರಬರಾಜು ನಿಲ್ಲಕೂಡದು. ಅನಗತ್ಯವಾಗಿ ಅಂಗಡಿಗಳ ಮುಂದೆ ಜನಸಂದಣಿ ಉಂಟಾಗುವುದನ್ನು ವ್ಯಾಪಾರಸ್ಥರೇ ತಪ್ಪಿಸಬೇಕು. ಜಿಲ್ಲೆಯ ವಿವಿಧ ತಾಲೂಕು ಪ್ರದೇಶಗಳಿಂದ ದಿನಸಿಗಾಗಿ ಆಗಮಿಸುವ ಗ್ರಾಮೀಣ ಅಂಗಡಿಕಾರರಿಗೆ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ತಪ್ಪದೇ ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.

    ಸಹಕರಿಸಿ: ಇಡೀ ದೇಶವೇ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು, ಕಿರಾಣಿ ವ್ಯಾಪಾರಸ್ಥರ ಪಾತ್ರವೂ ಅತ್ಯಂತ ಪ್ರಮುಖವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಇಡೀ ಸಮಾಜಕ್ಕೆ ಅಗತ್ಯವಸ್ತುಗಳ ಪೂರೈಸುವ ಅರ್ಹತೆ ಹೊಂದಿರುವುದು ವ್ಯಾಪಾರಸ್ಥರು ಮಾತ್ರ. ಹೀಗಾಗಿ ಇದನ್ನೇ ಒಳ್ಳೆಯ ಅವಕಾಶ ಎಂದು ತಿಳಿದು ಸಮಾಜವನ್ನು ಹಾಗೂ ದೇಶವನ್ನು ಮಾರಕ ಸೋಂಕಿನಿಂದ ಉಳಿಸಲು ಸಹಕರಿಸಬೇಕು ಎಂದು ಮನವರಿಕೆ ಮಾಡಿದರು.

    ಕ್ರಮದ ಎಚ್ಚರಿಕೆ: ವಾಹನಗಳಿಂದ ತಮ್ಮ ಗೋದಾಮಿನಲ್ಲಿ ಸಂಗ್ರಹಿಸಲು ಹಾಗೂ ಸಂಗ್ರಹಗೊಂಡ ನಂತರ ಬೇಡಿಕೆಗೆ ತಕ್ಕಂತೆ ನಗರದಿಂದ ಜಿಲ್ಲೆಯ ಹಲವೆಡೆ ಸರಬರಾಜು ಮಾಡಲು ಬೆಳಗ್ಗೆ ಮತ್ತು ಮಧ್ಯಾಹ್ನದ ಅವಧಿ ನಿರ್ಧರಿಸಿಕೊಳ್ಳಿ, ವ್ಯಾಪಾರ ಕೇವಲ ಲಾಭಕ್ಕಾಗಿ ಅಲ್ಲ, ಅದರಲ್ಲಿ ಮಾನವೀಯತೆಯೂ ಅಡಗಿರಬೇಕು. ಸರ್ಕಾರ ನೀಡಿರುವ ಆದೇಶ ಪಾಲಿಸದೆ ಕುಂಟು ನೆಪ ಹೇಳುವ ಅಂಗಡಿಕಾರರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಸಚಿವ ಅಂಗಡಿ ಎಚ್ಚರಿಕೆ ನೀಡಿದರು.

    ಅನಿವಾರ್ಯತೆ ಸೃಷ್ಟಿಸಬೇಡಿ: ಜಿಲ್ಲಾದ್ಯಂತ ಅಗತ್ಯ ವಸ್ತುಗಳ ಸರಬರಾಜು ಮಾಡುವಲ್ಲಿ ಸೂಕ್ತ ವಾಹನಗಳಿಗೆ ಅವಕಾಶ ನೀಡುವಂತೆ ಹಾಗೂ ಹೆಚ್ಚುವರಿ ವಾಹನಗಳಿಗೂ ಪಾಸ್ ವಿತರಿಸಲಾಗುವುದು. ಆದರೆ, ಜನದಟ್ಟಣೆ ಉಂಟುಮಾಡಿ ಎಪಿಎಂಸಿ ಮಾರುಕಟ್ಟೆಯಂತೆ ನಗರದ ಹಲವೆಡೆ ದಿನಸಿ ಮಾರುಕಟ್ಟೆಗಳನ್ನೂ ಸ್ಥಳಾಂತರಿಸುವ ಅನಿವಾರ್ಯತೆ ಸೃಷ್ಟಿಸಬೇಡಿ. ಈಗಿನ ರವಿವಾರ ಪೇಟೆಯಲ್ಲಿಯೇ ತಮ್ಮ ತಮ್ಮ ಗೋದಾಮಿನಿಂದಲೇ ಪೂರೈಕೆ ಕಾರ್ಯ ಮುಂದುವರಿಯಲಿ. ಎಲ್ಲರ ಆರೋಗ್ಯಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡೆಸಬೇಕು ಎಂದು ಸಚಿವರು ಹೇಳಿದರು.

    ಶಾಸಕ ಅನಿಲ ಬೆನಕೆ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ್, ಎಸ್ಪಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ಕೆ.ವಿ. ರಾಜೇಂದ್ರ, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಎಸಿಪಿ ನಾರಾಯಣ ಬರಮನಿ ಇತರರು ಇದ್ದರು.
    ಹೆಚ್ಚುವರಿ ದಿನಸಿ ಸಂಗ್ರಹಿಸಿಕೊಳ್ಳಬೇಕಿಲ್ಲ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹಗಲು, ರಾತ್ರಿಯೆನ್ನದೆ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

    ಹೀಗಾಗಿ ಸಾರ್ವಜನಿಕರು ಸೋಂಕಿನ ತೀವ್ರತೆ ಮನಗಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ದಿನಸಿ, ತರಕಾರಿ ಸೇರಿದಂತೆ ಯಾವುದೇ ಅಗತ್ಯವಸ್ತುಗಳ ಪೂರೈಕೆ ನಿಲ್ಲುವುದಿಲ್ಲ. ಈ ಬಗ್ಗೆ ಜಿಲ್ಲೆಯ ಜನತೆಗೆ ಭಯ ಬೇಡ. ಹೆಚ್ಚುವರಿಯಾಗಿ ಸಂಗ್ರಹಿಸಿಟ್ಟುಕೊಳ್ಳುವ ಅಗತ್ಯತೆಯೂ ಇಲ್ಲ. ಸೋಮವಾರ ಬೆಳಗ್ಗೆ ಮತ್ತೊಮ್ಮೆ ರವಿವಾರ ಪೇಟೆಯಲ್ಲಿನ ಶ್ರೀ ಬಸವೇಶ್ವರ ಕೋ. ಆಪರೇಟಿವ್ ಬ್ಯಾಂಕ್‌ನಲ್ಲಿ ಎಲ್ಲ ವ್ಯಾಪಾರಸ್ಥರ ಸಭೆ ನಡೆಸಿ ಸೂಚನೆ ನೀಡಲಾಗುವುದು ಎಂದರು.

    ಸರಬರಾಜು ನಿಲ್ಲಿಸಿದರೆ ಕಠಿಣ ಕ್ರಮ

    ಜಿಲ್ಲಾಧಿಕಾರಿ ಡಾ. ಬಿ.ಎಸ್. ಬೊಮ್ಮನಹಳ್ಳಿ ಮಾತನಾಡಿ, ಅಗತ್ಯ ವಸ್ತುಗಳ ಪೂರೈಕೆಗೆ ಕಾರ್ಮಿಕರು ಸಿಗುತ್ತಿಲ್ಲ ಎಂದು ನೆಪ ಹೇಳುವಂತಿಲ್ಲ. ದಿನಸಿ ಸಾಮಗ್ರಿಗಳ ಸರಬರಾಜು ನಿಲ್ಲಿಸಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ, ಅಂಗಡಿಗಳ ಲೈಸೆನ್ಸ್ ರದ್ದುಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಜನದಟ್ಟಣೆ ಹೆಚ್ಚಾದ್ದರಿಂದಲೇ ಎಪಿಎಂಸಿಯನ್ನು ನಾಲ್ಕು ಪ್ರದೇಶಗಳಲ್ಲಿ ಸ್ಥಳಾಂತರಿಸಲಾಗಿದೆ. ಇದೀಗ ಕೆಲ ವ್ಯಾಪಾರಸ್ಥರು ಅಗತ್ಯ ವಸ್ತು ಪೂರೈಸುವಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಇದರಿಂದ ಸೋಂಕು ಮತ್ತಷ್ಟು ಹರಡುವ ಸಾಧ್ಯತೆ ಇದೆ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರಿದರೆ ಕಠಿಣ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದು ವ್ಯಾಪಾರಸ್ಥರಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts