More

    ಮನೆಗಳಿಗೆ ಬೇಡಿಕೆ ಇದೆ, ಮಂಜೂರಾಗುತ್ತಿಲ್ಲ.

    ಸುನಿಲ್ ಪೊನ್ನೇಟಿ ಮಡಿಕೇರಿ
    ಸ್ವಂತದ್ದೊಂದು ಮನೆ ಇರಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಇದಕ್ಕೆ ಪೂರಕವಾಗಿ ಜನಸಾಮಾನ್ಯರ ಕನಸು ನನಸು ಮಾಡಲು ಸರ್ಕಾರಗಳು ವಿವಿಧ ಯೋಜನೆಗಳ ಮೂಲಕ ಮನೆಗಳನ್ನು ಕೊಡುವ ಕೆಲಸ ಮಾಡುತ್ತಿರುತ್ತದೆ. ಈ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಮೂಲಕ ಫಲಾನುಭವಿಗಳಿಗೆ ತಲುಪಿಸಲಾಗುತ್ತದೆ. ವಿಶೇಷ ಎಂದರೆ ಕಳೆದ ೨ ವರ್ಷಗಳಲ್ಲಿ ಜಿಲ್ಲೆಗೆ ಯಾವುದೇ ಹೊಸ ಮನೆಗಳನ್ನು ಹಂಚಿಕೆ ಮಾಡಿಲ್ಲ.

    ’ಎಲ್ಲರಿಗೂ ಮನೆ, ನಿವೇಶನ ರಹಿತರಿಗೆ ನಿವೇಶನ’ ಎನ್ನುವುದು ಚುನಾವಣೆ ಸಮಯದಲ್ಲಿ ರಾಜಕಾರಣಿಗಳ ಜನಪ್ರಿಯ ಆಶ್ವಾಸನೆಗಳಲ್ಲಿ ಒಂದು. ಈ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಜನಸಾಮಾನ್ಯರು ಕೂಡ ಇಂಥ ಯೋಜನೆಗಳ ಮೂಲಕ ಮನೆಗಳನ್ನು ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಕಚೇರಿಯಿಂದ ಕಚೇರಿಗೆ ಅಲೆದಾಡಿ ದಾಖಲೆಗಳನ್ನು ಹೊಂದಿಸಿಕೊಂಡು ಸ್ವ.ಂತ ಮನೆಯ ಕನಸಿಗಾಗಿ ಸತತ ಹೋರಾಟವೂ ಸಾಮಾನ್ಯ.

    ನಗರ ಮತ್ತು ಗ್ರಾಮೀಣ ಪ್ರದೇಶದ ವಸತಿ ರಹಿತರಿಗೆ ಮನೆಗಳನ್ನು ಕೊಡಲು ಸರ್ಕಾರ ಬಸವ ವಸತಿ, ಡಾ. ಅಂಬೇಡ್ಕರ್ ನಿವಾಸ್, ದೇವರಾಜ ಅರಸು ವಸತಿ, ವಾಜಪೇಯಿ ನಗರ ವಸತಿ, ಪ್ರಧಾನಮಂತ್ರಿ ಆವಾಸ್ ಹೀಗೆ ಹಲವು ಯೋಜನೆಗಳನ್ನು ರೂಪಿಸಿದೆ. ವಿವಿಧ ಇಲಾಖೆ, ನಿಗಮ, ಮಂಡಳಿಗಳ ಮೂಲಕ ಈ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಸ್ಥಳೀಯ ಆಡಳಿತ ಸಂಸ್ಥೆಗಳ ಮೂಲಕ ಫಲಾನುಭವಿಗಳನ್ನು ಗುರುತಿಸಿ ಪಾರದರ್ಶಕವಾಗಿ ಯೋಜನೆ ಜಾರಿಯ ರೂಪುರೇಷೆ ಸರ್ಕಾರದ ಮಟ್ಟದಲ್ಲಿ ಆಗುತ್ತದೆ. ಆದರೆ ಕೊಡಗಿನಲ್ಲಿ ೨೦೨೨-೨೩ ಮತ್ತು ೨೦೨೩-೨೪ನೇ ಸಾಲಿನಲ್ಲಿ ಸರ್ಕಾರದಿಂದ ಹೊಸ ಮನೆಗಳ ಹಂಚಿಕೆ ಆಗಿಲ್ಲ.

    ೨೦೧೯-೨೦ ರಿಂದ ೨೦೨೧-೨೨ರ ತನಕ ಕೊಡಗು ಜಿಲ್ಲೆಗೆ ವಿವಿಧ ವಸತಿ ಯೋಜನೆಗಳ ಮೂಲಕ ಒಟ್ಟು ೩,೫೮೧ ಮನೆಗಳು ಮಂಜೂರಾಗಿದ್ದವು. ಇದರಲ್ಲಿ ೧,೫೦೫ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣವಾಗಿದ್ದರೆ, ೧,೧೮೬ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ೮೭೧ ಮನೆಗಳ ನಿರ್ಮಾಣ ಕಾರ್ಯ ಇನ್ನು ಕೂಡ ಶುರುವಾಗಿಲ್ಲ. ೧೯ ಮನೆಗಳನ್ನು ವಿವಿಧ ಕಾರಣಗಳಿಂದ ಬ್ಲಾಕ್ ಮಾಡಲಾಗಿದೆ.
    ಬಸವ ವಸತಿ ಯೋಜನೆ ಅಡಿಯಲ್ಲಿ ಜಿಲ್ಲೆಗೆ ೨,೨೮೯ ಮನೆಗಳು ಮಂಜೂರಾಗಿದ್ದು, ೧,೦೭೪ ಮನೆಗಳ ನಿರ್ಮಾಣ ಕಾರ್ಯ ಪೂರ್ಣವಾಗಿದೆ. ೭೬೦ ಮನೆಗಳ ನಿರ್ಮಾಣ ಪ್ರಗತಿಯಲ್ಲಿವೆ. ೪೪೩ ಮನೆಗಳ ನಿರ್ಮಾಣ ಕಾರ್ಯ ಇನ್ನೂ ಶುರುವಾಗಿಲ್ಲ. ೧೨ ಮನೆಗಳನ್ನು ಬ್ಲಾಕ್ ಮಾಡಲಾಗಿದೆ. ದೇವರಾಜ ಅರಸು ಗ್ರಾಮೀಣ ವಸತಿ ನಿಗಮದಿಂದ ೫ ಮನೆಗಳು ಮಂಜೂರಾಗಿದ್ದು, ೨ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ೩ ಮನೆಗಳ ನಿರ್ಮಾಣ ಕಾರ್ಯ ಶುರುವಾಗಿಲ್ಲ.

    ಡಾ. ಬಿ.ಆರ್. ಅಂಬೇಡ್ಕರ್ ಗ್ರಾಮಿಣ ನಿವಾಸ್ ಯೋಜನೆ ಅಡಿಯಲ್ಲಿ ೧,೦೪೦ ಮನೆಗಳು ಮಂಜೂರಾಗಿದ್ದು ೩೯೫ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ೩೪೬ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ೨೯೨ ಮನೆಗಳ ನಿರ್ಮಾಣ ಕಾರ್ಯ ಇನ್ನೂ ಶುರುವಾಗಿಲ್ಲ. ೭ ಮನೆಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ನಗರ ನಿವಾಸ್ ಯೋಜನೆ ಅಡಿಯಲ್ಲಿ ೫೯ ಮನೆಗಳು ಮಂಜೂರಾಗಿದ್ದು ೮ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ೧೯ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ೩೨ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.
    ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಅಡಿಯಲ್ಲಿ ೨ ಮನೆಗಳು ಮಂಜೂರಾಗಿದ್ದು, ೧ ಮನೆ ನಿರ್ಮಾಣ ಪೂರ್ಣವಾಗಿದೆ. ೧ ಮನೆ ನಿರ್ಮಾಣ ಪ್ರಗತಿಯಲ್ಲಿದೆ. ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ ೧೮೬ ಮನೆಗಳು ಮಂಜೂರಾಗಿದ್ದು, ೨೫ ಮನೆಗಳು ಪೂರ್ಣವಾಗಿದೆ. ೬೦ ಮನೆಗಳು ಪ್ರಗತಿಯಲ್ಲಿದೆ. ೧೦೧ ಮನೆಗಳ ನಿರ್ಮಾಣ ಕಾರ್ಯ ಪೂರ್ಣವಾಗಿಲ್ಲ.

    ವಸತಿ ಇಲಾಖೆಯ ವಿವಿಧ ಗ್ರಾಮೀಣ ಯೋಜನೆಗಳಡಿ ಮನೆಗಳನ್ನು ಪಡೆಯಲು ಸರ್ಕಾರ ಹಲವು ಮಾನದಂಡಗಳನ್ನು ರೂಪಿಸಿದೆ. ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯಾಗಿರಬೇಕು. ಮಾಜಿ ಯೋಧರು, ವಿಧುರರು, ಅಂಗವಿಕಲರು ಮತ್ತು ಹಿರಿಯ ನಾಗರೀಕರಾಗಿದ್ದಲ್ಲಿ ಪುರುಷರು ಸಹಾ ಅರ್ಹರಾಗಿರುತ್ತಾರೆ. ಅರ್ಜಿದಾರರ ಕುಟುಂಬ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದು, ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ೧ ಲಕ್ಷದ ೨೦ ಸಾವಿರ ರೂ. ನಗರ ಪ್ರದೇಶದಲ್ಲಿ ೨ ಲಕ್ಷ ರೂ. ಇರಬೇಕು.

    ಅರ್ಜಿದಾರರ ಕುಟುಂಬ ವಸತಿ ರಹಿತರಾಗಿದ್ದು, ಅರ್ಜಿದಾರರು ಅಥವಾ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಕರ್ನಾಟಕದ ಯಾವುದೇ ಭಾಗದಲ್ಲಿ ಸ್ವಂತ ಮನೆ ಹೊಂದಿರಬಾರದು. ಶಿಥಿಲಗೊಂಡ ಮನೆ ಅಥವಾ ಗುಡಿಸಲಿನಲ್ಲಿ ವಾಸಿಸುತ್ತಿರುವವರು ಅರ್ಹರಾಗಿರುತ್ತಾರೆ. ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದು ನಿವೇಶನಕ್ಕೆ ಸಂಬಂಧಿಸಿದಂತೆ ಖಾತೆ ಹೊಂದಿರಬೇಕು. ಪಾರಂಪರಿಕ ಅರಣ್ಯ ಹಕ್ಕುಗಳ ಕಾಯ್ದೆಯನ್ವಯ ಜಿಲ್ಲಾ ಸಮಿತಿಯಿಂದ ನೀಡಲಾದ ಹಕ್ಕುಪತ್ರ ಪಡೆದಿದ್ದಲ್ಲಿ ವಸತಿ ಸೌಕರ್ಯ ಪಡೆಯಲು ಪರಿಗಣಿಸಬಹುದು.

    ಬೇರೆ ಯಾವುದೇ ಯೋಜನೆ ಅಥವಾ ಇಲಾಖೆಯಿಂದ ಈಗಾಗಲೇ ವಸತಿ ಸೌಲಭ್ಯ ಪಡೆದಿರಬಾರದು. ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ ವಸತಿ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರದ ಆವಾಸ್ ಪ್ಲಸ್ ಪಿಡಬ್ಲ್ಯುಎಲ್‌ಪಟ್ಟಿಯಲ್ಲಿ ಹೆಸರು ಸೇರಿರಬೇಕು. ಡಾ॥ ಬಿ.ಆರ್. ಅಂಬೇಡ್ಕರ್ ಆವಾಸ್ ಯೋಜನೆಯಡಿ ವಸತಿ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರಬೇಕು.

    ಈ ರೀತಿ ಅರ್ಹತೆ ಹೊಂದಿರುವವರು ತಲೆ ಮೇಲೆ ಒಂದು ಸೂರಿಗಾಗಿ ಕಾಯುತ್ತಿದ್ದು, ಜಿಲ್ಲೆಗಾಗಿ ಸರ್ಕಾರ ಹಂಚಿಕೆ ಮಾಡುವ ಮನೆಗೆ ಕಾಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts