More

    ಮನೆ ಬಾಗಿಲಿಗೆ ತರಕಾರಿ, ದಿನಸಿ

    ಬೆಳಗಾವಿ: ರಾಷ್ಟ್ರದಾದ್ಯಂತ ಲಾಕ್ ಡೌನ್ ಘೋಷಿಸಿರುವುದರಿಂದ ನಾಗರಿಕರಿಗೆ ದೈನಂದಿನ ಅಗತ್ಯ ಸಾಮಗ್ರಿಗಳಾದ ದಿನಸಿ, ತರಕಾರಿ ಮತ್ತಿತರ ವಸ್ತುಗಳನ್ನು ಮನೆಬಾಗಿಲಿಗೇ ಕಳುಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಿನಸಿ, ತರಕಾರಿ ವ್ಯಾಪಾರಸ್ಥರು ಹಾಗೂ ಹೋಟೆಲ್ ಮಾಲೀಕರ ಜತೆ ಬುಧವಾರ ಆಯೋಜಿಸಿದ್ದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕರೊನಾ ವೈರಸ್ ಹರಡುವಿಕೆ ತಡೆಗಟ್ಟಲು ವಾಹನಗಳ ಸಂಚಾರ ಸೇರಿದಂತೆ ಅನೇಕ ನಿರ್ಬಂಧ ವಿಧಿಸಲಾಗಿದೆ. ಇದರಿಂದ ನಾಗರಿಕರಿಗೆ ದೈನಂದಿನ ಬಳಕೆಯ ವಸ್ತುಗಳ ಕೊರತೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

    ದಿನಸಿ ಅಂಗಡಿಗಳು ಯಥಾಪ್ರಕಾರ ತಮ್ಮ ವ್ಯಾಪಾರ-ವಹಿವಾಟು ನಡೆಸಬಹುದು. ಇದಲ್ಲದೆ, ಜನರು ದೂರವಾಣಿ ಮೂಲಕ ತಮಗೆ ಅಗತ್ಯವಿರುವ ವಸ್ತುಗಳ ಪಟ್ಟಿ ನೀಡಿದರೆ ಆಯಾ ಪ್ರದೇಶದಲ್ಲಿರುವ ಸಂಬಂಧಿಸಿದ ಅಂಗಡಿಯವರು ಗ್ರಾಹಕರ ಮನೆ ಬಾಗಿಲಿಗೆ ದಿನಸಿ ಸಾಮಗ್ರಿ ತಲುಪಿಸಲಿದ್ದಾರೆ ಎಂದು ತಿಳಿಸಿದರು.

    ಬಡಾವಣೆಗೇ ತರಕಾರಿ ಗಾಡಿ: ತರಕಾರಿ ಮಾರಾಟ ಸ್ಥಳಗಳಲ್ಲಿ ಜನರು ಗುಂಪುಗೂಡುವುದನ್ನು ತಡೆಗಟ್ಟುವ ಉದ್ದೇಶದಿಂದ ಒಂದು ನಿಗದಿತ ಸ್ಥಳದಲ್ಲಿ ತರಕಾರಿ ಮಾರಾಟ ನಿರ್ಬಂಧಿಸಲಾಗಿದೆ. ತಳ್ಳುವ ಗಾಡಿಗಳು ಅಥವಾ ಇತರೆ ಸರಕು ಸಾಗಣೆ ವಾಹನಗಳ ಮೂಲಕ ಪ್ರತಿಯೊಂದು ಬಡಾವಣೆ, ನಗರ ಹಾಗೂ ಮೊಹಲ್ಲಾಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಅನೇಕ ವ್ಯಾಪಾರಸ್ಥರು ಕೂಡ ಮುಂದಾಗಿದ್ದಾರೆ. ಅದೇ ರೀತಿ ರಿಲಯನ್ಸ್ ಫ್ರೆಷ್, ಮೋರ್ ಮತ್ತಿತರ ಡಿಪಾರ್ಟ್‌ಮೆಂಟಲ್ ಸ್ಟೋರ್ಸ್‌ಗಳಲ್ಲಿ ಕೇವಲ ದಿನಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಈ ಮಳಿಗೆಗಳಲ್ಲೂ ದಿನಸಿ ಖರೀದಿಸಬಹುದು ಎಂದರು.

    ಜಿಪಂ ಸಿಇಒ ಡಾ. ಕೆ.ವಿ. ರಾಜೇಂದ್ರ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ, ಎಸ್ಪಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ, ಆರೋಗ್ಯ ಇಲಾಖೆ ಅಧಿಕಾರಿಗಳು, ಹೋಟೆಲ್ ಮಾಲೀಕರು, ತರಕಾರಿ ಮಾರಾಟಗಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಹೋಟೆಲ್ ವ್ಯವಹಾರಕ್ಕಿಲ್ಲ ನಿರ್ಬಂಧ

    ನಗರದ ಎಲ್ಲ ಹೋಟೆಲ್ಗಳಲ್ಲೂ ಪಾರ್ಸಲ್ ಸೇವೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಹೋಟೆಲ್ ವ್ಯವಹಾರಕ್ಕೆ ನಿರ್ಬಂಧ ವಿಧಿಸಿಲ್ಲ. ಆದರೆ, ಸ್ಥಳದಲ್ಲಿಯೇ ಆಹಾರ ಸೇವನೆಗೆ ಅವಕಾಶವಿಲ್ಲ. ಗ್ರಾಹಕರು ಮನೆಗೆ ಪಾರ್ಸಲ್ ತೆಗೆದುಕೊಂಡು ಹೋಗಬಹುದು. ಗುರುವಾರದಿಂದಲೇ ಎಲ್ಲ ಹೋಟೆಲ್ಗಳಲ್ಲಿ ಪಾರ್ಸಲ್ ಸೇವೆ ಒದಗಿಸಲು ಹೋಟೆಲ್ ಮಾಲೀಕರು ಒಪ್ಪಿಕೊಂಡಿದ್ದಾರೆ. ಎಲ್ಲ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಕಲ್ಪಿಸಿರುವುದರಿಂದ ಯಾವುದೇ ಆತಂಕಕ್ಕೆ ಒಳಗಾಗದೇ ಅಗತ್ಯತೆ ಮತ್ತು ಆದ್ಯತೆ ಆಧಾರದ ಮೇಲೆ ಪಡೆದುಕೊಂಡು ಮನೆಯಲ್ಲಿಯೇ ಇರಬೇಕು. ಆ ಮೂಲಕ ಜನರು ಕೋವಿಡ್-19 ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts