ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುವಾದದ ಪ್ರವಾಹ ಬಗಹಳಷ್ಟು ಹರಿದು ಹೋಗಿದೆ. ಇದನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುವ ಕಾರ್ಯ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಮತೀಯ ಗಲಭೆಗಳಿಂದಾಗಿ ಉದ್ಯಮಿಗಳು ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನೈತಿಕ ಪೊಲೀಸ್‌ಗಿರಿ ನಡೆಯದಂತೆ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕರ್ನಾಟಕದ ಆರ್ಥಿಕ ವ್ಯವಸ್ಥೆ ಸದೃಢವಾಗಿ ಇಟ್ಟುಕೊಂಡೇ ಈ ಗ್ಯಾರೆಂಟಿ ಜಾರಿಗೊಳಿಸಲಾಗಿದೆ. 59 ಸಾವಿರ ಕೋಟಿ ರೂ. ಮೊತ್ತದ 5 ಗ್ಯಾರೆಂಟಿ ಯೋಜನೆ ಬಿಜೆಪಿಗೆ ಸಹ್ಯವಾಗುತ್ತಿಲ್ಲ. ಯಾಕೆಂದರೆ ಬಿಜೆಪಿ ಬಡವರು, ಅಲ್ಲಸಂಖ್ಯಾತರು, ದಲಿತರ ಪರವಾಗಿಲ್ಲ. ಮಹಿಳೆಯರನ್ನು ಸದೃಢಗೊಳಿಸುವ ನಿಟ್ಟಿನಲ್ಲಿ 24 ಸಾವಿರ ಕೋಟಿ ರೂ. ವೆಚ್ಚದ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸಲಾಗಿದೆ. ಹೀಗಾಗಿ ಬಿಜೆಪಿ ಟೀಕೆಗೆ ಡೋಂಟ್ ಕ್ಯಾರ್ ಎಂದರು.
ಅಧಿಕಾರಕ್ಕೆ ಬರಲು ಕಠಿಣ ರಣತಂತ್ರ
ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಡೂ ಆರ್ ಡೈ ಎಂಬಂತಾಗಿತ್ತು. ಆಕಸ್ಮಿಕವಾಗಿ ಬರದೇ ಇದ್ದಿದ್ದರೆ ತಮಿಳುನಾಡು, ಪಶ್ಚಿಮ ಬಂಗಾಲ ಮುಂತಾದ ರಾಜ್ಯಗಳಲ್ಲಿ ಇರುವಂತೆ ಆಗುತ್ತಿತ್ತು. ಹೀಗಾಗಿ ಅಧಿಕಾರಕ್ಕೆ ಬರಲೇ ಬೇಕು ಎಂಬುದಾಗಿ ನಿರ್ಧರಿಸಿ ಕಾರ‌್ಯತಂತ್ರ ಹಾಗೂ ಚುನಾವಣಾ ರಣನೀತಿ ರೂಪಿಸಿದ್ದೆವು. ಬಿಜೆಪಿ ದುರಾಡಳಿತವನ್ನು ಜನಸಾಮಾನ್ಯರಿಗೆ ತಿಳಿಸಲು ಪ್ರಜಾಧ್ವನಿ ಯಾತ್ರೆ ಕೈಗೊಳ್ಳಲಾಗಿತ್ತು ಎಂದು ಗೆಲುವಿನ ಬಗ್ಗೆ ವಿಶ್ಲೇಷಿಸಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿದರು. ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮಳಹಳ್ಳಿ, ರಾಜಶೇಖರ ಕೋಟ್ಯಾನ್, ಮಂಜುನಾಥ ಭಂಡಾರಿ, ಎಂ.ಎ.ಗಫೂರ್, ಕಿಶನ್ ಹೆಗ್ಡೆ, ರಮೇಶ್ ಕಾಂಚನ್, ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.