More

    ಗೃಹ ಇಲಾಖೆಯ ಸಹಕಾರದಲ್ಲಿ ಸುರಕ್ಷಿತವಾಗಿ ಎಸ್​ಎಸ್​ಎಲ್​ಸಿ ಪರೀಕ್ಷೆ ಆಯೋಜನೆ

    ಬೆಂಗಳೂರು: ಕೋವಿಡ್​-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ತಡವಾಗಿ ಆರಂಭವಾಗುತ್ತಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಸುರಕ್ಷಿತವಾಗಿ ಮತ್ತು ಸುಗಮವಾಗಿ ಏರ್ಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಗೃಹ ಮತ್ತು ಆರೋಗ್ಯ ಇಲಾಖೆಗಳ ಸಹಕಾರ ಪಡೆದುಕೊಳ್ಳುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

    ಜೂ.25ರಿಂದ ಆರಂಭವಾಗಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ಸುಗಮ ನಿರ್ವಹಣೆ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳ ಕುರಿತು ವಿಧಾನಸೌಧದಲ್ಲಿ ಗೃಹ ಸಚಿವ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸೋಮವಾರ ಗೃಹ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರ ಸಭೆ ಏರ್ಪಾಡಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಅವರು, ನಾಡಿನ ಎಲ್ಲ ಮಕ್ಕಳಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬೇಕಾಗಿದೆ. ಅವರ ಹಿತದೃಷ್ಟಿಯಿಂದ ಪರೀಕ್ಷೆ ನಡೆಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

    ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಬೇಕು ಎನ್ನುವುದು ಕರ್ನಾಟಕ ಹೈಕೋರ್ಟ್​ನ ಅಭಿಪ್ರಾಯವಾಗಿದೆ. ಆದರೆ ಈ ಬಾರಿಯ ಪರೀಕ್ಷೆ ಬೇಕು-ಬೇಡ ಎಂಬ ಕೆಲ ಮನಸ್ಥಿತಿಗಳ ಮಧ್ಯೆ ನ್ಯಾಯಾಲಯವೂ ಈ ಕುರಿತು ಕಣ್ಗಾವಲು ನಡೆಸುತ್ತಿದೆ. ಅದಕ್ಕಾಗಿ ಗೃಹ ಇಲಾಖೆಯ ಹೆಚ್ಚಿನ ಸಹಾಯ ಸಹಕಾರದ ಅಗತ್ಯವಿದೆ ಎಂದು ಗೃಹ ಸಚಿವರಲ್ಲಿ ಮನವಿ ಮಾಡಿದರು.

    ಇದನ್ನೂ ಓದಿ: ವಾರ ಮೊದಲೇ ಎಸ್​ಎಸ್​ಎಲ್​ಸಿ ಪರೀಕ್ಷಾರ್ಥಿಗಳ ಆರೋಗ್ಯ ತಪಾಸಣೆ

    ಕಟ್ಟುನಿಟ್ಟಿನ ಕ್ರಮದ ಭರವಸೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವುದು ಶಿಕ್ಷಣ ಇಲಾಖೆ ಜವಾಬ್ದಾರಿಯಾಗಿದೆ. ಆದರೆ ಈ ಬಾರಿಯ ಪರೀಕ್ಷೆಯನ್ನು ಸುಗಮವಾಗಿ ನಡೆಸುವಂತೆ ಮಾಡುವ ನಿಟ್ಟಿನಲ್ಲಿ ಗೃಹ ಇಲಾಖೆ ಎಲ್ಲ ರೀತಿಯ ವಿಶೇಷ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಪೊಲೀಸ್​ ಕಣ್ಗಾವಲು: ಗಡಿ ರಾಜ್ಯದಿಂದ ಬರುವ ಮಕ್ಕಳು ಪರೀಕ್ಷೆಗೆ ಹಾಜರಾಗುವಂತೆ ಮಾಡುವುದರಿಂದ ಹಿಡಿದು ಪರೀಕ್ಷಾ ಕೇಂದ್ರಗಳು, ಪ್ರಶ್ನೆಪತ್ರಿಕೆ ಸಂಗ್ರಹಿಸಿಡಲಾದ ತಾಲೂಕು, ಜಿಲ್ಲಾ ಖಜಾನೆಗಳು, ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ರವಾನೆ, ಮತ್ತು ಪರೀಕ್ಷಾ ಕೇಂದ್ರದ ಬಳಿಯ ಆರೋಗ್ಯ ತಪಾಸಣಾ ಕೇಂದ್ರ, ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಸಾಗಿಸುವ ವಾಹನ ಸೇರಿ ಅಗತ್ಯ ಇರುವೆಡೆಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿರುತ್ತಾರೆ ಎಂದು ಹೇಳಿದರು.

    ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ ಗೋಯೆಲ್, ಅಪರ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮರ್​ ಕುಮಾರ್​ ಪಾಂಡೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾಶಿಇ ಆಯುಕ್ತ ಡಾ. ಕೆ.ಜಿ. ಜಗದೀಶ್, ಎಸ್‍ಎಸ್‍ಎ ಎಸ್‍ಪಿಡಿ ಡಾ. ಎಂ.ಟಿ. ರೇಜು, ಸಿಒಡಿ ಅಧಿಕಾರಿಗಳು, ಗೃಹ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

    ಲಾಕ್​ಡೌನ್​ ದಾಟಿ ಬಂದ್ಳು… ಕುದುರೆ ಏರಿ ಬಂದ್ಳು… ಚೆಲುವೆ ಮಹಾರಾಣಿ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts