ಲಿಂಗಸುಗೂರು: ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಅಮರೇಶ್ವರ ಜಾತ್ರಾ ಮಹೋತ್ಸವ ಮಾ.7 ರಂದು ಹೋಳಿ ಹುಣ್ಣಿಮೆ ದಿನ ನಡೆಯಲಿದೆ.
ಜಾತ್ರೆ ನಿಮಿತ್ತ ಗರ್ಭಗುಡಿ, ದ್ವಾರಬಾಗಿಲು, ಆದಯ್ಯನ ಗುಡಿ, ಗುರುಮಠ, ಆಂಜನೇಯ, ವೀರಭದ್ರ, ಹಿರಿಯಣ್ಣನ ಗುಡಿಗಳು, ಕಪಿಲಪ್ಪ ಮಹಡಿ, ಮೆಟ್ಟಮರಡಿ ಕಟ್ಟೆ, ಬಸವಣ್ಣ ಕಟ್ಟೆ, ಗುಂತಗೋಳ, ಯರಡೋಣ, ಹೊನ್ನಳ್ಳಿಯ ಕಳಸದ ಗುಡಿಗಳು ಸೇರಿ ಅಮರೇಶ್ವರ ಸುಕ್ಷೇತ್ರ ವ್ಯಾಪ್ತಿಯ ಗುಡಿ ಗುಂಡಾರ ಮತ್ತು ವಸತಿ ಮನೆಗಳಿಗೆ ಸುಣ್ಣ-ಬಣ್ಣ ಬಳಿಯಲಾಗುತ್ತಿದೆ. ಹೊಂಡದಲ್ಲಿ ನೀರು ತುಂಬಿಸಿ ಬ್ಲೀಚಿಂಗ್ ಪೌಡರ್ ಹಾಕಿ ಭಕ್ತರ ಪುಣ್ಯಸ್ನಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ದೇವಸ್ಥಾನ, ದ್ವಾರ ಬಾಗಿಲು ಮತ್ತು ಸುಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ, ಮಹಾರಥ ಮತ್ತು ಉತ್ಸವ ರಥ ಸ್ವಚ್ಛತೆ ಮತ್ತು ಗ್ರೀಸಿಂಗ್ ಮಾಡಲಾಗಿದೆ. ಮಹಾರಥೋತ್ಸವ ನಡೆಯುವ ಬೀದಿಯಲ್ಲಿ ಮರಮ್ ಹಾಕಲಾಗುತ್ತಿದೆ. ಜಾನುವಾರುಗಳಲ್ಲಿ ಚರ್ಮಗಂಟು ರೋಗ ನಿಯಂತ್ರಣ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಆದೇಶದಂತೆ ಅಮರೇಶ್ವರ ಜಾತ್ರಾಮಹೋತ್ಸವದ ದನಗಳ ಜಾತ್ರೆ ರದ್ದುಪಡಿಸಲಾಗಿದೆ. ಇದು ರೈತರಲ್ಲಿ ಬೇಸರ ಮೂಡಿಸಿದೆ.
ಜಾತ್ರೆಗೆ ಬರುವ ಭಕ್ತರಿಗಾಗಿ ಕುಡಿಯುವ ನೀರು, ತಾತ್ಕಾಲಿಕ ಆಸ್ಪತ್ರೆ, ಪೊಲೀಸ್ ಠಾಣೆ, ಸಿಸಿ ಕ್ಯಾಮರಾ, ಬಸ್ ನಿಲ್ದಾಣ, ಖಾಸಗಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಮಹಾರಥೋತ್ಸವ ವೇಳೆ ನೂಕು ನುಗ್ಗಲು ಉಂಟಾಗದಂತೆ ಮತ್ತು ಕಳ್ಳತನ ಹಾಗೂ ಇತರ ಅವಗಢ ಸಂಭವಿಸದಂತೆ ಮುಂಜಾಗ್ರತೆ ವಹಿಸಬೇಕಿದೆ.
ಸುಕ್ಷೇತ್ರ ಅಮರೇಶ್ವರ ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯಲು ತಾಲೂಕು ಆಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಾತ್ರೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವುದರೊಂದಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ.
ರಂಗಪ್ಪ
ನಾಡತಹಸೀಲ್ದಾರ್, ಗುರುಗುಂಟಾ
ಅಮರೇಶ್ವರ ಜಾತ್ರಾ ಮಹೋತ್ಸವ ಮಾ.7 ರಿಂದ ಯುಗಾದಿವರೆಗೆ ನಡೆಯಲಿದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ಅಮರೇಗೌಡ
ಭಕ್ತ, ಗುಂತಗೋಳ