More

    ಅಜ್ಜಿ -ಯೋಧ ಮೊಮ್ಮಗನ ಸಮಾಗಮ ಮನೆಯಲ್ಲಿ ಹೋಳಿ ಸಂಭ್ರಮ

    ಕುಂದಾಪುರ: ಸ್ಪೋರ್ಟ್ಸ್ ಅಚೀವ್‌ಮೆಂಟ್ ಮಾಡೂಕೆ ಮನಸ್ಸಿತ್ತಾ.. ಮೆಕ್ಯಾನಿಕ್ ಆಕ್ತಿತ್ರ್ಯಿಯಾ.. ಫಾರ್ಮಾಸಿಸ್ಟ್ ಆಪೂಕೆ ಯೋಚನೆ ಇತ್ತಾ..ಯೋಧ ಎಂದರೆ ಬಾರ್ಡ್‌ರ್ ಕಾಯೋದು.. ಕೋವಿ ಹಿಡ್ಕಂಡ್ ನಿಲ್ಲೋದು.. ಯುದ್ಧ ಮಾಡೋದು ಅಷ್ಟೇ ಅಲ್ದೆ.. ನಮಗೆ ಆಪೋ ಕೆಲಸ ಆಯ್ಕೆ ಮಾಡ್ಕಂಡ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡೂಕೆ ಆತ್ತು..ಹೀಗೆ ವ್ಯಾಖ್ಯಾನಿಸಿದ್ದು, ಸೈನಿಕ ತರಬೇತಿ ಪಡೆದು ರಜೆ ಮೇಲೆ ಮನೆಗೆ ಬಂದ ಹಕ್ಲಾಡಿಯ ಯೋಧ ಮಂಜುನಾಥ ಶೆಟ್ಟಿ.

    ತಂದೆಯಿಂದ ದೂರ ಉಳಿದು, ತಾಯಿ ಕಳೆದುಕೊಂಡ ನಂತರ ಅಜ್ಜಿ ನೀಲಮ್ಮ ಶೆಟ್ಟಿ ಕೈತುತ್ತು ನೀಡಿ ಬೆಳೆಸಿದ ಮೊಮ್ಮಗ ಮಂಜುನಾಥ ಶೆಟ್ಟಿ ಮನೆಯಲ್ಲಿ ಹೋಳಿ ಹಬ್ಬ. ಮನೆಯಿಂದ ಕೆಲಸಕ್ಕೆಂದು ಹೋದ ಮೊಮ್ಮಗ ಯೋಧನಾಗಿ ಮರಳಿದು ಮನೆಯಲ್ಲಿ ಹಬ್ಬದ ಸಂಭ್ರಮ. ಮಂಜುನಾಥ್ ಮನೆ ಹಕ್ಲಾಡಿ ಗ್ರಾಮದಲ್ಲಿ ಆಕರ್ಷಣೆಯ ಕೇಂದ್ರ. ದಿನಕ್ಕೆ ಹತ್ತಾರು ಜನ ಬಂದು ಅಭಿನಂದಿಸಿ, ಸೈನಿಕ, ಯುದ್ಧ ಟ್ರೈನಿಂಗ್ ಬಗ್ಗೆ ಮಾಹಿತಿ ಪಡೆದು ಅಚ್ಚರಿಪಡುತ್ತಿದ್ದಾರೆ.

    ಮಂಜುನಾಥ ಚಿಕ್ಕಂದಿನಿಂದಲೂ ಉತ್ತಮ ಕ್ರೀಡಾ ಪಟುವಾಗಿದ್ದು, ಸೈನ್ಯ ಸೇರುವುದು ಅವರ ಜೀವನದ ಉದ್ದೇಶ ಆಗಿತ್ತು. ಯೋಧ, ಸೈನ್ಯ ಬಗ್ಗೆ ಚಿತ್ರ, ವೀಡಿಯೋ ನೋಡುತ್ತಲೇ ಬೆಳೆದ ಮಂಜುನಾಥ ಅವರಿಗೆ ಸೈನ್ಯ ಸೇರುವ ಕನಸು ಗಟ್ಟಿಗೊಳಿಸಿತು. ಬೇರೆ ಬೇರೆ ಉದ್ಯೋಗಕ್ಕೆ ಅವಕಾಶವಿದ್ದರೂ ಅದೆಲ್ಲವನ್ನೂ ಬಿಟ್ಟು ಕನಸಿನ ಬೆನ್ನೇರಿ ಸೈನ್ಯ ಸೇರುವ ಮೂಲಕ ಸಾಕಾರ ಮಾಡಿಕೊಂಡಿದ್ದಾರೆ.

    ನಾವೇಕೆ ಸೈನ್ಯ ಸೇರಲು ಹಿಂದುಳಿದಿದ್ದೇವೆ: ಸೈನ್ಯ, ರೈಲ್ವೆ, ಪೊಲೀಸ್ ವೃತ್ತಿಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಯುವಕರು ಹಿಂದೇಟು ಹಾಕುತ್ತಿದ್ದು, ಇದಕ್ಕೆ ಮಾಹಿತಿ ಕೊರತೆ ಕಾರಣ. ಸೈನ್ಯಕ್ಕೆ ಸೇರ್ಪಡೆಗೊಂಡಲ್ಲಿ ಜೀವಂತ ಬರುತ್ತಾರೋ ಇಲ್ಲವೋ ಎನ್ನುವ ಅಪನಂಬಿಕೆ ಒಂದಾದರೆ, ಸೈನ್ಯ ಎಂದರೆ ಯುದ್ಧ ಎನ್ನುವ ತಪ್ಪು ಕಲ್ಪನೆ ಯುವಕರು ಹಿಂದೇಟು ಹಾಕಲು ಕಾರಣ. ಉಡುಪಿಯಲ್ಲಿ ನಡೆಯುವ ಸೈನ್ಯ ನೇಮಕಾತಿ ರ‌್ಯಾಲಿಯಲ್ಲಿ ಉತ್ತರ ಕನ್ನಡ, ಮಹಾರಾಷ್ಟ್ರ ಅಲ್ಲದೆ ಬೇರೆ ರಾಜ್ಯದಿಂದ ಯುವಕರು ಬರುತ್ತಿದ್ದು, ನಾವು ಮಾತ್ರ ಹಿಂದೆ ಉಳಿದಿದ್ದೇವೆ.
    ಸೈನಕ್ಕೆ ಸೇರಿದ ಮಾತ್ರಕ್ಕೆ ಯುದ್ಧ ಮಾಡಬೇಕು ಎನ್ನುವ ಅರ್ಥವಲ್ಲ. ಮಿಲಿಟರಿಯಲ್ಲೂ ಕೂಡ ಬೇರೆ ಬೇರೆ ಅವಕಾಶವಿದ್ದು, ಸಾಧನೆ ಮಾಡಲು ಸಾಧ್ಯ. ಸೈನ್ಯ ಸೇರಿದ ನಂತರವೂ ನಿಮ್ಮ ಆಯ್ಕೆ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಸೈನ್ಯಕ್ಕೆ ಸೇರುವ ಮಾರ್ಗ, ಮಾಹಿತಿ ನೀಡಿದರೆ ನಮ್ಮ ಅವಳಿ ಜಿಲ್ಲೆಯ ಯುವಕರೂ ಸೈನ್ಯ ಸೇರುತ್ತಾರೆ. ಏಪ್ರಿಲ್ ತಿಂಗಳಿನಲ್ಲಿ ಉಡುಪಿಯಲ್ಲಿ ನಡೆಯುವ ರ‌್ಯಾಲಿಯಲ್ಲಿ ಭಾಗವಹಿಸುವ ಮೂಲಕ ಅವಳಿ ಜಿಲ್ಲೆ ಯುವಕರು ಕೂಡಾ ದೇಶ ಸೇವೆ ಮಾಡಲು ಹಿಂದೆ ಉಳಿಯುವುದಿಲ್ಲ ಎಂಬುದನ್ನು ನಿರೂಪಿಸಬೇಕು ಎಂಬುದು ಯೋಧ ಮಂಜುನಾಥ ಶೆಟ್ಟಿ ಕಳಕಳಿ.

    ಬೇರೆ ಬೇರೆ ಕ್ಷೇತ್ರದಲ್ಲಿ ಉದ್ಯೋಗ ಅವಕಾಶವಿದ್ದರೂ ಸೈನ್ಯಕ್ಕೆ ಸೇರುವುದು ಕನಸಾಗಿತ್ತು. ಕ್ರೀಡೆಯಲ್ಲಿ ತೊಡಗಿಸಿಕೊಂಡು, ದೈಹಿಕ ಕ್ಷಮತೆ ಕಾಪಾಡಿಕೊಂಡಿದ್ದರಿಂದ ತರಬೇತಿ ಕಷ್ಟವಾಗಲಿಲ್ಲ. ತರಬೇತಿ ಮುಗಿದು, ಜಮ್ಮವಿನಲ್ಲಿ ವೃತ್ತಿ ಆರಂಭವಾಗಲಿದೆ. ಮನೆ ಜವಾಬ್ದಾರಿ ಕೂಡ ಇದ್ದು, ಎಲ್ಲವನ್ನೂ ನಿರ್ವಹಿಸಿಕೊಂಡು ಹೋಗುವ ಹೊಣೆ ನನಗಿದೆ. ಸೈನಿಕ ಬದುಕು ಶಿಸ್ತು ಕಲಿಸುತ್ತದೆ. ಸೇನೆಯ ಬಗ್ಗೆ ಇರುವ ತಪ್ಪು ಕಲ್ಪನೆ ತೊರೆದು ದೇಶ ಸೇವೆಗಿರುವ ಅವಕಾಶ ಬಳಸಿಕೊಳ್ಳಬೇಕು.

    -ಮಂಜುನಾಥ ಶೆಟ್ಟಿ, ಯೋಧ, ಬಾಳೆಮನೆ, ಹಕ್ಲಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts