More

    ಮೆಕ್ಕೆಜೋಳ ಬೆಳೆಗಾರರಿಗೆ ಪ್ರೋತ್ಸಾಹಧನ ವಿತರಿಸಿ

    ಹೊಳಲ್ಕೆರೆ: ಮೆಕ್ಕೆಜೋಳ ಬೆಳೆದ 37 ಸಾವಿರ ರೈತರಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನ ವಿತರಿಸಲು ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತಾ ಧನಂಜಯ ನಾಯ್ಕ ತಿಳಿಸಿದರು.

    ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸ್ಥಾಯಿ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನ ಅಲ್ಲಲ್ಲಿ ಮಳೆಯಾಗಿ ಬಿತ್ತನೆ ಆರಂಭವಾಗಿದ್ದು, ಕೃಷಿ ಇಲಾಖೆ ಬೀಜಗೊಬ್ಬರ ಪೂರೈಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

    ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸಲು ಮಾತನಾಡಿ, ತಾಲೂಕಿನಲ್ಲಿ 123 ಎಂಎಂ ಮಳೆಯಾಗಿದ್ದು, 54 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇದೆ. ಮೆಕ್ಕೆಜೋಳ 37 ಸಾವಿರ, ಹತ್ತಿ ಸಾವಿರ, ಶೇಂಗಾ 500, ತೊಗರಿ 2 ಸಾವಿರ ಹೆಕ್ಟೇರ್ ಬಿತ್ತುವ ಗುರಿ ಇದೆ ಎಂದರು.

    ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ, ಗೊಬ್ಬರ ಸಿಗುವಂತೆ ಎಲ್ಲ ರೈತ ಸಂಪರ್ಕ, ಖಾಸಗಿ ಮಾರುಕಟ್ಟೆಯಲ್ಲಿ ದಾಸ್ತಾನು ಮಾಡಲಾಗಿದೆ. ಸರ್ಕಾರ ಘೋಷಿಸಿದಂತೆ ಮೆಕ್ಕೆಜೋಳದ ಪ್ರೋತ್ಸಾಹಧನ ನೀಡುವ ಪ್ರಕ್ರಿಯೆ ಆರಂಭಿಸಿದ್ದು, ಈ ಬಗ್ಗೆ ಪ್ರಕಟಣೆ ನೀಡಿದೆ ಎಂದರು.

    ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಮಾತನಾಡಿ, ರಾಣೇಬೆನ್ನೂರು ಬಿಡಿಬೀಜಗಳ ಮಾರಾಟದ ದಂಧೆ ತಾಲೂಕಿನಲ್ಲಿ ಜೋರಾಗಿ ನಡೆಯುತ್ತಿದೆ. ರೈತರಿಗೆ ವಂಚಿಸಿ ಬೀಜ ಮಾರುವ ದಂಧೆಕೋರರ ವಿರುದ್ಧ ಕಠಿಣ ಕ್ರಮ ಆಗಬೇಕು.

    ಬೀಜ, ಗೊಬ್ಬರ ಖರೀದಿಸುವ ರೈತರಿಗೆ ಅಂಗಡಿ ಮಾಲೀಕರು ಕಡ್ಡಾಯವಾಗಿ ಬಿಲ್ ನೀಡಬೇಕು. ಇಲ್ಲದಿದ್ದರೆ ಪರವಾನಗಿ ರದ್ದುಗೊಳಿಸುವಂತೆ ಸೂಚಿಸಿದರು.

    ಪರಮೇಶ್ವರಪ್ಪ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಯಾವೊಬ್ಬ ಅಧಿಕಾರಿಯೂ ಜನರಿಗೆ ಸಿಗುತ್ತಿಲ್ಲ. ಸಮಸ್ಯೆ ಹೇಳಿಕೊಳ್ಳಲು ಜನರು ಪರದಾಡುವ ಸ್ಥಿತಿ ಇದೆ. ಅಕ್ಷರ ದಾಸೋಹದ ಆಹಾರ ಧಾನ್ಯ ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

    ತಾಪಂ ಉಪಾಧ್ಯಕ್ಷೆ ಅನಸೂಯಾ ಆನಂದ್, ಸದಸ್ಯರಾದ ದೇವರಾಜ್, ಮೂಡಲಗಿರಿಯಪ್ಪ, ಸುಮಾ, ರುಕ್ಕಣ್ಮಿ, ಇಒ ತಾರಕನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts