More

    ಕನ್ನಡ ಭಾಷೆ ಇತಿಹಾಸ ಪುಟಕ್ಕೆ ಸೇರಲಿದೆ

    ಹೊಳಲ್ಕೆರೆ: ಕನ್ನಡ ಶಾಲೆ, ಭಾಷೆ ಉಳಿಯಬೇಕಾದರೆ ಸರ್ಕಾರಿ ಶಾಲೆಯತ್ತ ಜನರ ಆಸಕ್ತಿ ಹೆಚ್ಚಾಗಬೇಕು ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

    ಪಟ್ಟಣದಲ್ಲಿ ಶನಿವಾರ ಕಸಾಪ ಹಮ್ಮಿಕೊಂಡಿದ್ದ ಕನ್ನಡ ಭವನ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಕನ್ನಡ ಓದುವವರು ಇಲ್ಲದೆ ಹೋದಲ್ಲಿ ಕನ್ನಡ ಭಾಷೆ ಇತಿಹಾಸದ ಪುಟ ಸೇರುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

    ಸರ್ಕಾರಿ ಹಾಗೂ ಕನ್ನಡ ಭಾಷಾ ಮಾಧ್ಯಮ ಶಾಲೆಗಳು ಹೆಚ್ಚಬೇಕು. ನೌಕರರು, ರಾಜಕಾರಣಿಗಳು ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿ ಮಾದರಿಯಾಗಬೇಕು. ಸರ್ಕಾರ ಕೂಡ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

    ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್ ಮಾತನಾಡಿ, ಕನ್ನಡ ಭಾಷೆಯಲ್ಲಿ ಓದಿದ ಹಲವರು ವಿಜ್ಞಾನಿಗಳು, ಸಾಹಿತಿಗಳು, ವಿಮರ್ಶಕರು, ಚಿಂತಕರಾಗಿದ್ದಾರೆ. ಭಾರತ ರತ್ನ, ಜ್ಞಾನಪೀಠ ಪ್ರಶಸ್ತಿ ಪಡೆದವರು ಕೂಡ ಸರ್ಕಾರಿ ಶಾಲೆಗಳಲ್ಲಿ ಓದಿದವರು ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

    ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಯುವ ಸಮುದಾಯ ಟಿವಿ, ಮೊಬೈಲ್ ಗೀಳಿಗೆ ಸಿಲುಕಿದೆ. ಬ್ರೇಕಿಂಗ್ ನ್ಯೂಸ್ ನೋಡುವ ಪ್ರವೃತ್ತಿ ಅಪಾಯ. ನಿತ್ಯ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ತಮಿಳುನಾಡು, ಕೇರಳದಲ್ಲಿ ಭಾಷೆಗೆ ಪ್ರಾಧಾನ್ಯತೆ ನೀಡಿದ್ದಾರೆ. ರಾಜ್ಯದಲ್ಲಿಯೂ ಇದು ಪಾಲನೆಯಾಗಬೇಕು ಎಂದರು.

    ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಕನ್ನಡ ಶಾಲೆಗಳ ಉಳಿವಿಗೆ ಬದ್ಧನಾಗಿದ್ದು, ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಈಗಾಗಲೇ 8 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ. ಕನ್ನಡ ಭವನದ ಮೇಲ್ಭಾಗದಲ್ಲಿ ಪುಸ್ತಕ ಭಂಡಾರ ನಿರ್ಮಿಸಲು 20 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.

    ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಮೂರ್ತಿ, ತಾಪಂ ಅಧ್ಯಕ್ಷೆ ಸುಜಾತಾ, ಸದಸ್ಯರಾದ ಸುಮಾ ಹಳ್ಳಪ್ಪ, ಬೆಳ್ಳಿ ಶಿವಕುಮಾರ್, ಪಪಂ ಸದಸ್ಯರಾದ ಬಿ.ಎಸ್.ರುದ್ರಪ್ಪ, ಮುರುಗೇಶ್, ವಿಜಯಸಿಂಹ ಖಾಟ್ರೂತ್, ಮಾಜಿ ಅಧ್ಯಕ್ಷ ಮೋಹನ್ ನಾಗರಾಜ್, ಕಸಾಪ ಸಂಚಾಲಕ ಎನ್.ಕೆ.ನಾರಾಯಣ್, ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ತಾಲೂಕು ಅಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಜಿ.ಆರ್.ಬಸವರಾಜಪ್ಪ, ಬಿ.ಜಿ.ಹಳ್ಳಿ ವೆಂಕಟೇಶ್, ಕೋಶಾಧ್ಯಕ್ಷ ಎ.ವಿ.ರಾಜು, ಹೋಬಳಿ ಅಧ್ಯಕ್ಷರಾದ ಮಂಜುನಾಥ್, ಮಲ್ಲೇಶಪ್ಪ, ಬಾಬು, ರಾಮಗಿರಿ ಯೋಗೀಶ್ ಇತರರಿದ್ದರು.

    ಸಾಣೇಹಳ್ಳಿ ನಾಟಕೋತ್ಸವಕ್ಕೆ ಅನುದಾನ ಅಗತ್ಯ: ಮಕ್ಕಳ ಮೂಲಕ ಕಲೆ, ಸಾಹಿತ್ಯದಂತಹ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿರುವ ಸಾಣೇಹಳ್ಳಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ಮನುಬಳಿಗಾರ್ ತಿಳಿಸಿದರು. ಬಳಿಕ ಮಾತನಾಡಿದ ಶಾಸಕ ಚಂದ್ರಪ್ಪ, ನಾಟಕೋತ್ಸವಕ್ಕೆ ಪ್ರತಿವರ್ಷ ಎರಡು ಲಕ್ಷ ರೂ. ದೇಣಿಗೆ ನೀಡುತ್ತೇನೆ ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts