More

    ಹಾಕಿ ಮೈದಾನಕ್ಕೆ ಕಾಲ ಸನ್ನಿಹಿತ

    ಬೆಳಗಾವಿ: ಬೆಂಗಳೂರು, ಮೈಸೂರು ಬಿಟ್ಟರೆ ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲಿಯೂ ಗುಣಮಟ್ಟದ ಇಂಟರ್‌ನ್ಯಾಷನಲ್ ಹಾಕಿ ಗ್ರೌಂಡ್ ಇಲ್ಲ. ಈ ಕೊರತೆ ನೀಗಿಸಲು ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಾಕಿ ಗ್ರೌಂಡ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. 10 ವರ್ಷದ ಪ್ರಯತ್ನ ಸಾಕಾರಕ್ಕೆ ಸದ್ಯ ಕಾಲ ಕೂಡಿಬಂದಿದೆ.
    ಬೆಳಗಾವಿ ಉತ್ತರ ಅಥವಾ ದಕ್ಷಿಣ ಭಾಗದಲ್ಲಿ ಸ್ಥಳ ಮಂಜೂರು ಮಾಡಲು ನಗರಾಭಿವೃದ್ಧಿ ಪ್ರಾಧಿಕಾರ ತೀರ್ಮಾನಿಸಿದೆ. ಹಲವು ಸೌಲಭ್ಯ ಹೊಂದಿದ ಸುಸಜ್ಜಿತ ಹಾಕಿ ಮೈದಾನ ನಿರ್ಮಾಣಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಶಾಸಕ ಅಭಯ ಪಾಟೀಲ, ಅನಿಲ ಬೆನಕೆ ಇನ್ನಿತರ ಶಾಸಕರು ಉತ್ಸುಕರಾಗಿದ್ದಾರೆ. ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ವಿಶೇಷ ಕಾಳಜಿ ವಹಿಸಿದ್ದಾರೆ.

    15 ಕೋಟಿ ರೂ. ವೆಚ್ಚ: ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಹಾಕಿ ಇಂಡಿಯಾ ಅಸೋಸಿಯೇಷನ್ ಮಾರ್ಗದರ್ಶನದಲ್ಲಿ ಗ್ರೌಂಡ್ ನಿರ್ಮಾಣ ಕಾಮಗಾರಿ ನಡೆಯಲಿದೆ. ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಕಿ ಮೈದಾನ ನಿರ್ಮಾಣ ಮಾಡಲು ರೂಪುರೇಷೆ ಹಾಕಿಕೊಳ್ಳಲಾಗಿದೆ. 8 ಅಡಿಯಷ್ಟು ನೆಲ ಅಗೆದು ಅತ್ಯಾಧುನಿಕ ಅಸ್ಟ್ರೋಟರ್ಫ್ (ಕೃತಕ ಹುಲ್ಲು) ಮೈದಾನ ನಿರ್ಮಿಸಲು ಉದ್ದೇಶಿಸಲಾಗಿದೆ. ಶಾಪಿಂಗ್ ಕಾಂಪ್ಲೆಕ್ಸ್, ಜಾಗಿಂಗ್ ಪಾಥ್ ಹಾಗೂ ಹೋಟೆಲ್‌ಗಳಿಗೆ ಸ್ಥಳಾವಕಾಶ ಇರಲಿದೆ.

    ಕ್ರೀಡಾಪಟುಗಳಿಗೆ ಸಂತಸ: ಬೆಳಗಾವಿ ಟಿಳಕವಾಡಿಯ ಲೇಲೇ ಗ್ರೌಂಡ್, ಕ್ಯಾಂಪ್ ಪ್ರದೇಶದ ದೋಬಿಘಾಟ್ ಬಳಿಯ ಹಾಕಿ ಗ್ರೌಂಡ್‌ನಲ್ಲಿ ಕ್ರೀಡಾಪಟುಗಳು ಕ್ರೀಡಾಭ್ಯಾಸ ಮಾಡುತ್ತಾರೆ. ಆದರೆ, ಈ ಗ್ರೌಂಡ್‌ಗಳಲ್ಲಿ ಅಸ್ಟ್ರೋಟರ್ಫ್ ವ್ಯವಸ್ಥೆ ಇಲ್ಲದ್ದರಿಂದ ಕಲ್ಲು, ಮಣ್ಣುಗಳ ಮಧ್ಯೆಯೇ ಆಟವಾಡುತ್ತಿದ್ದರು. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದ ಹಾಕಿ ಗ್ರೌಂಡ್ ನಿರ್ಮಿಸುತ್ತಿರುವುದು ಕ್ರೀಡಾಪಟುಗಳು ಸಂತಸ ವ್ಯಕ್ತಪಡಿಸಿದ್ದಾರೆ.

    ಗ್ರೌಂಡ್ ನಿರ್ಮಾಣದ ಬಳಿಕ ಬೆಳಗಾವಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದ್ದು, ಈ ಭಾಗದ ಪ್ರವಾಸೋದ್ಯಮವೂ ಅಭಿವೃದ್ಧಿ ಹೊಂದಲಿದೆ. ಅಲ್ಲದೆ, ಈ ಭಾಗದ ಉದ್ಯಮಗಳಿಗೂ ಉತ್ತೇಜನ ಸಿಗಲಿದೆ.

    ಇತಿಹಾಸ ದಾಖಲಿಸಿದ ಬೆಳಗಾವಿ ಕ್ರೀಡಾಪಟುಗಳು: ಹಾಕಿ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಾವಿ ಹೆಸರು ಮಾಡಿತ್ತು. ಜಿಲ್ಲೆಯ ಮೂವರು ಕ್ರೀಡಾಪಟುಗಳು ಒಲಿಂಪಿಕ್ ಕ್ರೀಡೆಯಲ್ಲಿ ಪಾಲ್ಗೊಂಡು ಜಿಲ್ಲೆಯ ಹೆಸರನ್ನು ಖ್ಯಾತಿಗೊಳಿಸಿದ್ದರು. ಯೂನಿವರ್ಸಿಟಿ ಬ್ಲೂೃ ತಂಡದ 11 ಜನರಲ್ಲಿ ಬೆಳಗಾವಿಯವರೇ 9 ಜನ ಹಾಕಿ ಮೈದಾನದಲ್ಲಿರುತ್ತಿದ್ದರು. 2012ರಲ್ಲಿ ಬೆಳಗಾವಿಯಲ್ಲಿ ಆಲ್ ಇಂಡಿಯಾ ಹಾಕಿ ಟೂರ್ನಮೆಂಟ್ ಆಯೋಜಿಸಲಾಗಿತ್ತು. ನಂತರದಲ್ಲಿ ರಾಜ್ಯ, ಜಿಲ್ಲಾಮಟ್ಟದ ಹಲವು ಟೂರ್ನಮೆಂಟ್ ಆಯೋಜಿಸಲಾಗಿತ್ತು.

    ಬೆಳಗಾವಿಯಲ್ಲಿ ಹಾಕಿ ಪ್ರೇಮಿಗಳು ಹೆಚ್ಚಿದ್ದಾರೆ. ಹೀಗಾಗಿ ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಾಕಿ ಗ್ರೌಂಡ್ ಅಗತ್ಯವಿದೆ. ಗ್ರೌಂಡ್ ನಿರ್ಮಾಣದ ಬಳಿಕ ದೇಶ-ವಿದೇಶಗಳ ಜನರು ಆಗಮಿಸಿ ಈ ನೆಲದ ಖ್ಯಾತಿಯೂ ಹೆಚ್ಚಲಿದೆ. ಜಾಗ ಮಂಜೂರು ಕುರಿತು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದೊಂದಿಗೆ ಸಭೆ ನಡೆಸಿ ತೀರ್ಮಾನಿಸಲಾಗುವುದು.
    | ಘೂಳಪ್ಪ ಹೊಸಮನಿ ಬುಡಾ ಅಧ್ಯಕ್ಷ, ಬೆಳಗಾವಿ

    ಬೆಳಗಾವಿಯಲ್ಲಿ ಹಾಕಿ ಕ್ರೀಡಾಪಟುಗಳು ಹೆಚ್ಚಿದ್ದಾರೆ. ಸುಸಜ್ಜಿತ ಹಾಕಿ ಗ್ರೌಂಡ್ ನಿರ್ಮಾಣಕ್ಕೆ ಚಿಂತನೆ ನಡೆಸಿರುವುದು ಸಂತಸದ ಸಂಗತಿ. ಹಾಕಿ ಕ್ರೀಡೆಯಲ್ಲಿ ಬೆಳಗಾವಿ ಜಿಲ್ಲೆ ಹೆಚ್ಚಿನ ಖ್ಯಾತಿ ಗಳಿಸಲಿ.
    | ಮನೋಹರ ಪಾಟೀಲ ಹಾಕಿ ಮಾಜಿ ಕ್ರೀಡಾಪಟು

    ಗ್ರೌಂಡ್ ಎಲ್ಲಿ ನಿರ್ಮಿಸಬೇಕೆನ್ನುವ ಕುರಿತು ಶೀಘ್ರ ಸಭೆ ನಡೆಸಿ ಅಂತಿಮಗೊಳಿಸಲಾಗುವುದು. ರಾಮತೀರ್ಥ ನಗರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ 8 ಎಕರೆಯಷ್ಟು ಜಾಗ ಇದೆ. ಇಲ್ಲಿ ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಮೈದಾನವಿದೆ. ಇದೇ ಭಾಗದಲ್ಲಿ ಹಾಕಿ ಗ್ರೌಂಡ್ ನಿರ್ಮಾಣವಾದರೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ.
    | ಪ್ರೀತಂ ನಸಲಾಪುರೆ ಆಯುಕ್ತರು ನಗರಾಭಿವೃದ್ಧಿ ಪ್ರಾಧಿಕಾರ ಬೆಳಗಾವಿ

    | ಜಗದೀಶ ಹೊಂಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts