More

    ಹೋಟೆಲ್ ಉದ್ಯಮದತ್ತ ಜೂ. ರಾಜಕುಮಾರ್

    ಪರಶುರಾಮ ಕೆರಿ ಹಾವೇರಿ

    ಜೂನಿಯರ್ ರಾಜಕುಮಾರ್ ಎಂದೇ ಖ್ಯಾತಿ ಪಡೆದು ಸಾವಿರಾರು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ, ಕೋಟ್ಯಂತರ ಕನ್ನಡಿಗರಿಗೆ ಡಾ. ರಾಜಕುಮಾರ್ ಅವರನ್ನು ನೆನಪಿಸಿಕೊಟ್ಟ ಅಶೋಕ ಬಸ್ತಿ ಇದೀಗ ಕಲಾ ಸೇವೆ ಕೈಬಿಟ್ಟು ಜೀವನ ನಿರ್ವಹಣೆಗಾಗಿ ಹೋಟೆಲ್ ಆರಂಭಿಸಲು ಮುಂದಾಗಿದ್ದಾರೆ.

    ಕರೊನಾ ಮಹಾಮಾರಿ ಅನೇಕರ ಬದುಕಿನ ಚಿತ್ರಣವನ್ನೇ ಬದಲಾಯಿಸಿದೆ. ಕಲಾವಿದರಿಗಂತೂ ಯಾವುದೇ ಕಾರ್ಯಕ್ರಮ ನಡೆಸಲು ಸಾಧ್ಯವಾಗದೆ, ಆರ್ಥಿಕವಾಗಿ ಭಾರಿ ಹೊಡೆತ ಬಿದ್ದಿದೆ. ಮುಂದೆ ಸರಿ ಹೋಗಬಹುದು ಎಂದುಕೊಂಡರೂ ರಂಗಭೂಮಿಯ ಮೇಲೆ ಬಿದ್ದಿರುವ ಕರಿಛಾಯೆ ಸರಿಯುವ ಲಕ್ಷಣ ಕಾಣುತ್ತಿಲ್ಲ. ಸರ್ಕಾರ ಕೆಲ ಮಾರ್ಗಸೂಚಿಗಳಂತೆ ರಂಗ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದರೂ ನಿರೀಕ್ಷಿಸಿದ ಪ್ರಮಾಣದಲ್ಲಿ ಪ್ರೇಕ್ಷಕರು ಬರುತ್ತಿಲ್ಲ. ಹೀಗಾಗಿ, ರಂಗಭೂಮಿ ಕಲಾವಿದರು ಸದ್ಯ ತೀವ್ರ ಸಂಕಷ್ಟದಲ್ಲಿದ್ದಾರೆ. ಇದನ್ನೆಲ್ಲ ಮನಗಂಡ ಜೂ. ರಾಜ್ ಖ್ಯಾತಿಯ ಮೂಲತಃ ಹಾವೇರಿ ತಾಲೂಕು ದೇವಗಿರಿ ಗ್ರಾಮದ, ಸದ್ಯ ಹಾವೇರಿಯಲ್ಲಿ ವಾಸವಾಗಿರುವ ಅಶೋಕ ಬಸ್ತಿ ಡಾ. ರಾಜಕುಮಾರ್ ಅಭಿಮಾನಿಗಳ ಹೆಸರಿನಲ್ಲಿ ಹೋಟೆಲ್ ಆರಂಭಕ್ಕೆ ಸಿದ್ಧತೆ ನಡೆಸಿದ್ದಾರೆ.

    ನಗರದ ಪಿಬಿ ರಸ್ತೆಯಲ್ಲಿರುವ ವಿಆರ್ ಬಳ್ಳಾರಿ ಕಾಂಪ್ಲೆಕ್ಸ್​ನಲ್ಲಿ ನ. 26ರಿಂದ ‘ಹೋಟೆಲ್ ಅಭಿಮಾನಿ’ ಆರಂಭಿಸುತ್ತಿದ್ದಾರೆ.

    ಮೂರೂವರೆ ದಶಕಗಳಿಂದ ಕಲಾಸೇವೆ: ಅಶೋಕ ಬಸ್ತಿ ಜೂನಿಯರ್ ಡಾ. ರಾಜಕುಮಾರ್ ಆಗಿದ್ದು ಒಂದು ವಿಶೇಷ. ಓದು ಬರಹ ಕಲಿಯದ ಬಸ್ತಿ ಬಾಲ್ಯದಲ್ಲಿ ಎಮ್ಮೆ ಕಾಯಲು ಹೋಗುತ್ತಿದ್ದರು. ಆ ಸಮಯದಲ್ಲಿ ರಾಜಕುಮಾರ್ ಅವರ ಸಂಪತ್ತಿಗೆ ಸವಾಲ್ ಚಿತ್ರವನ್ನು ಮನೆಯವರಿಗೆ ಹೇಳದೇ ಕದ್ದುಮುಚ್ಚಿ ಹಾವೇರಿಗೆ ಬಂದು ನೋಡಿ ಹೋಗುತ್ತಿದ್ದರು. ಇದರಿಂದ ಮನೆಯವರಿಂದ ಹೊಡೆತವನ್ನೂ ತಿಂದಿದ್ದರು. ಆದರೂ ಬಿಡದೇ ರಾಜಕುಮಾರ್ ಅವರ ಚಿತ್ರವನ್ನು ನೋಡಿ ಅವರಂತೆಯೇ ಎಮ್ಮೆ ಮೇಲೆ ಕುಳಿತು ರಾಜಕುಮಾರ್ ಹಾಡಿದ್ದ ‘ಯಾರೇ ಕೂಗಾಡಲಿ… ಎಮ್ಮೆ ನಿನಗೆ ಸಾಟಿಯಿಲ್ಲ …’ ಎಂಬ ಹಾಡಿನ ನಟನೆ ಮಾಡುತ್ತಿದ್ದರು. ಸಿನಿಮಾ ನಟನೆಯ ಹುಚ್ಚಿನಿಂದ 20ನೇ ವಯಸ್ಸಿನಲ್ಲಿ ಒಮ್ಮೆ ಮನೆಬಿಟ್ಟು ಹುಬ್ಬಳ್ಳಿ ಸೇರಿದ್ದರು. ಹುಬ್ಬಳ್ಳಿಯ ಹೋಟೆಲ್​ವೊಂದರಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ್ದರು. ಅಲ್ಲಿಗೆ ಬರುತ್ತಿದ್ದ ಅನೇಕ ಕಲಾವಿದರನ್ನು ಪರಿಚಯ ಮಾಡಿಕೊಂಡು ನಂತರ ಪಂಡಿತ ಪಂಚಾಕ್ಷರ ಕವಿ ಗವಾಯಿಗಳ ನಾಟ್ಯ ಸಂಘದಲ್ಲಿ ನಟನೆಗಿಳಿದರು. ಅಂದಿನಿಂದ ಶುರುವಾದ ಡಾ. ರಾಜಕುಮಾರ್ ಅವರ ಅಭಿನಯ ಮುಂದೆ ಇವರಿಗೆ ಜೂನಿಯರ್ ರಾಜಕುಮಾರ್ ಎಂಬ ಖ್ಯಾತಿ ತಂದುಕೊಟ್ಟಿತು. ಇವರ ಕಲಾಸೇವೆಗೆ ರಾಜ್ಯೋತ್ಸವ ಪ್ರಶಸ್ತಿಯೂ ಒಲಿದು ಬಂದಿದೆ.

    ಶಿವಣ್ಣನಿಂದ ಶುಭ ಹಾರೈಕೆ: ನನ್ನ ಮೇಲೆ ರಾಜಕುಮಾರ್ ಕುಟುಂಬದವರ ಹಾರೈಕೆ, ಪ್ರೀತಿ ಇದೆ. ನಾನು ಅಭಿಮಾನಿಗಳ ಹೆಸರಲ್ಲಿ ಹೋಟೆಲ್ ಆರಂಭಿಸುತ್ತಿರುವ ವಿಷಯವನ್ನು ಶಿವರಾಜಕುಮ್ ಕೇಳಿ ಶುಭ ಹಾರೈಸಿದ್ದಾರೆ. ಇಲ್ಲಿಗೆ ಒಮ್ಮೆ ಭೇಟಿ ನೀಡಿ ಊಟ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ, ನಟಿ ವಿನಯಾಪ್ರಸಾದ, ಸಾಹಿತಿ ಬರಗೂರ ರಾಮಚಂದ್ರಪ್ಪ ಇಲ್ಲಿಗೆ ಬರುವುದಾಗಿ ತಿಳಿಸಿದ್ದಾರೆ ಎನ್ನುತ್ತಾರೆ ಅಶೋಕ ಬಸ್ತಿಯವರ ಪುತ್ರ ರಾಘವೇಂದ್ರ.

    ಅಭಿಮಾನಿ ದೇವರ ಸಹಕಾರದಿಂದ ನಿರಂತರವಾಗಿ 35 ವರ್ಷಗಳ ಕಾಲ ಡಾ. ರಾಜ್ ವೇಷದಲ್ಲಿ ಕೋಟ್ಯಂತರ ಕನ್ನಡಿಗರನ್ನು ರಂಜಿಸಿದ್ದೇನೆ. ಕಲಾಸೇವೆಯ ಜೊತೆಗೆ ಬೇರೆ ಉದ್ಯೋಗವೂ ಇದ್ದರೆ ಅನುಕೂಲ ಎಂಬ ಉದ್ದೇಶದಿಂದ ಹೋಟೆಲ್ ಆರಂಭಿಸಿದ್ದೇನೆ. ಮೊದಲೆಲ್ಲ ಕ್ಯಾಂಪ್​ಗಳನ್ನು ಹಾಕಿದ ಸಮಯದಲ್ಲಿ ನೂರಾರು ಕಲಾವಿದರಿಗೆ ನಾನು, ನನ್ನ ಶ್ರೀಮತಿಯವರು ಶುಚಿರುಚಿಯಾದ ಅಡುಗೆ ಮಾಡಿದ್ದೇವೆ. ಈಗ ನಾವೇ ಹೋಟೆಲ್ ಆರಂಭಿಸುತ್ತಿದ್ದೇವೆ.

    | ಅಶೋಕ ಬಸ್ತಿ, ಜೂನಿಯರ್ ರಾಜಕುಮಾರ್ ಖ್ಯಾತಿಯ ಕಲಾವಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts