More

    ಜಿಲ್ಲೆಯಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ: ಎರಡು ತಿಂಗಳಲ್ಲಿ ನಿರ್ಮಾಣಕ್ಕೆ ಅನುಮೋದನೆ ಎಂದ ಆರೋಗ್ಯ ಸಚಿವ ಸುಧಾಕರ್

    ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಮುಂಬರುವ 50 ವರ್ಷಗಳವರೆಗೂ ಯಾವುದೇ ಸಮಸ್ಯೆ ಎದುರಾಗದಂತೆ ಹೈಟೆಕ್ ಮಾದರಿಯ ಅಂತಾರಾಷ್ಟ್ರೀಯ ಗುಣಮಟ್ಟದ ಹೂವಿನ ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡಿದರು.
    ತಾಲೂಕಿನ ಸೂಲಾಲಪ್ಪದಿನ್ನೆಯಲ್ಲಿ ಹೂವಿನ ಬೆಳೆಗಾರರು ಮತ್ತು ವರ್ತಕರ ಸಂಘ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ಎಪಿಎಂಸಿ ಮಾರುಕಟ್ಟೆಗೆ ಅಗಲಗುರ್ಕಿ ಬಳಿ 9.5 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಭವಿಷ್ಯದ 50 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಸಜ್ಜಿತ ಯೋಜನಾ ವರದಿಯನ್ನು ರೂಪಿಸಲಾಗುವುದು. ಹಾಗೆಯೇ ಎರಡು ತಿಂಗಳಲ್ಲಿ ಅನುಮೋದನೆ ಪಡೆದು, ಅನುದಾನ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
    ಹಳೇ ಹೂವಿನ ಮಾರುಕಟ್ಟೆಯಲ್ಲಿ ಸಂಚಾರ ದಟ್ಟಣೆ, ಸ್ಥಳಾವಕಾಶದ ಕೊರತೆಯ ಜತೆಗೆ ನಾನಾ ಸಮಸ್ಯೆಗಳು ಕಾಡುತ್ತಿದ್ದವು. ಇದಕ್ಕೆ ವಿಶಾಲ ಜಾಗದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ವರ್ತಕರು ಮನವಿ ಸಲ್ಲಿಸಿದ್ದು, ಇದರಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು. ಯಾವುದೇ ರಚನಾತ್ಮಕ ಅಭಿವೃದ್ಧಿಯ ಕೆಲಸಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಟೀಕೆಗಳು ಕೇಳಿ ಬರುವುದು ಸಹಜ. ಕೆಲಸವು ಜನಪರ ಎಂಬುದು ಖಾತ್ರಿಯಾದಾಗ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇನ್ನು ರಾಜ್ಯದಲ್ಲಿ ಅತಿ ಹೆಚ್ಚು ಹೂವು ಬೆಳೆಯುವ ತಾಲೂಕು ಚಿಕ್ಕಬಳ್ಳಾಪುರ. ಇದಕ್ಕೆ ಶಾಶ್ವತ ಮಾರುಕಟ್ಟೆಗೆ ಜಾಗ ಅಗತ್ಯವಿದೆ. ಇದು ಬೇಗ ಸಿಗಲಿದೆ ಎಂದರು.
    ಸುಧಾಕರ್ ಜಮೀನು ಪಕ್ಕದಲ್ಲಿಯೇ ವೈದ್ಯಕೀಯ ಕಾಲೇಜು ನಿರ್ಮಿಸಲಾಗುತ್ತಿದೆ ಎಂಬುದಾಗಿ ಪಂಚರತ್ನ ಯಾತ್ರೆಯ ವೇಳೆ ಕೆಲವರು ಟೀಕಿಸಿದ್ದರು. ಆದರೆ, ಇದುವರೆಗೂ ವೈಯಕ್ತಿಕ ಲಾಭಕ್ಕಾಗಿ ಒಂದೇ ಒಂದು ಕೆಲಸ ಮಾಡಿಲ್ಲ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.
    ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್ಮಾ ತನಾಡಿ, ರೈತರು ಮತ್ತು ವರ್ತಕರು ಸಂಬಂಧ ಉತ್ತಮವಾಗಿರಬೇಕು. ಇಲ್ಲಿ ಶೀಘ್ರದಲ್ಲಿ ಹೈಟೆಕ್ ಅಂತಾರಾಷ್ಟ್ರೀಯ ಮಟ್ಟದ ಮಾರುಕಟ್ಟೆ ನಿರ್ಮಾಣವಾಗಿ, ಒಳ್ಳೆಯ ವಹಿವಾಟು ನಡೆಯಬೇಕು ಎಂದರು.
    ಕಾರ್ಯಕ್ರಮದಲ್ಲಿ ಬಿಎಂಟಿಸಿ ಉಪಾಧ್ಯಕ್ಷ ನವೀನ್ ಕಿರಣ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಹೂವಿನ ವ್ಯಾಪಾರಿಗಳ ಸಂಘದ ಅಧ್ಯಕ್ಷ ರವೀಂದ್ರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಮುಖಂಡರಾದ ಮುನಿರಾಜು, ಅಶೋಕ್, ನಾರಾಯಣಸ್ವಾಮಿ, ನಾಗೇಶ್ ಮತ್ತಿತರರು ಇದ್ದರು.

    ಜನರಿಗಾಗಿ 22 ಸಾವಿರ ನಿವೇಶನ
    ಕ್ಷೇತ್ರದಲ್ಲಿ ವಸತಿ ರಹಿತರಿಗಾಗಿ 22 ಸಾವಿರ ನಿವೇಶನಗಳನ್ನು ಗುರುತಿಸಲಾಗಿದೆ. ಜನರಿಗೆ ಸೂರು ಕಲ್ಪಿಸುವುದಕ್ಕಿಂತ ಮತ್ತೊಂದು ಪುಣ್ಯದ ಕೆಲಸ ಇದೆಯೇ ಎಂದು ಪ್ರಶ್ನಿಸಿದ ಸಚಿವರು, ಯಾವುದೇ ವ್ಯಕ್ತಿಯಾಗಲೀ, ವ್ಯಕ್ತಿಯ ಕುರ್ಚಿಯಾಗಲೀ ಶಾಶ್ವತವಲ್ಲ ಎಂದರು. ಜ.7ರಿಂದ ಆರಂಭವಾಗಲಿರುವ ಚಿಕ್ಕಬಳ್ಳಾಪುರ ಉತ್ಸವವನ್ನು ಮತಕ್ಕಾಗಿ ಆಚರಿಸುತ್ತಿಲ್ಲ. ಬದಲಿಗೆ ನಮ್ಮ ಜಿಲ್ಲೆ ಎಂಬ ಹೆಮ್ಮೆಯ ಸಂಕೇತವನ್ನು ಎತ್ತಿ ತೋರಿಸಲಾಗಿದೆ. ಇದು ಈ ಭಾಗದಲ್ಲಿರುವ ಪಾರಂಪರಿಕ ಕ್ಷೇತ್ರಗಳು, ಸಾಂಸ್ಕೃತಿಕ ವೈಭವವನ್ನು ರಾಜ್ಯಕ್ಕೆ ಪರಿಚಯಿಸುವ ಉದ್ದೇಶವನ್ನು ಹೊಂದಿದೆ ಎಂದರು.

    ಬಹಿರಂಗ ಚರ್ಚೆಗೆ ಸಿದ್ಧ
    ಅನುಭವ, ವಯಸ್ಸು ಮತ್ತು ಸ್ಥಾನಮಾನದಲ್ಲಿ ಈ ದೇಶದ ಪ್ರಧಾನಿ ಬಂದಾಗ ಗೌರವ ಕೊಡುವುದು ಈ ನೆಲದ ಸಂಸ್ಕೃತಿ. ಆದರೆ, ಸಾಮಾನ್ಯ ರಾಹುಲ್ ಗಾಂಧಿ ಹಿಂದೆ ಯಾಕೆ ಓಡಿ ಹೋಗ್ತೀರಿ ಎಂದು ಸಚಿವರು ಪ್ರಶ್ನಿಸುವ ಮೂಲಕ ಪ್ರಧಾನಿಗೆ ಮುಖ್ಯಮಂತ್ರಿ ಭಯ ಬೀಳುವ ಕುರಿತ ಸಿದ್ದರಾಮಯ್ಯ ಆರೋಪಕ್ಕೆ ಟಾಂಗ್ ನೀಡಿದರು. ಈಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಕೊಡದಿದ್ದರೆ ನಿಮಗೆ ಯಾರು ಗೌರವ ಕೊಡುತ್ತಾರೆ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ ಸಚಿವರು, ಮುಂಬರುವ ದಿನಗಳಲ್ಲಾದರೂ ವ್ಯಕ್ತಿತ್ವಕ್ಕೆ, ಸ್ಥಾನಮಾನಕ್ಕೆ ಅನುಸಾರವಾಗಿ ನಡೆದುಕೊಂಡಾಗ ಗೌರವ ಬರುತ್ತದೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಮೇಲೆ ಸಿಎಂ ಆಸೆಯನ್ನು ಬಿಟ್ಟಿದ್ದಾರೆ. ಇನ್ನು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಾಗಿರುವ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಸಿದ್ಧ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts