More

    ದಕ್ಷಿಣಕಾಶಿಯಲ್ಲಿ ತೇರನೇರಿದ ಮಲ್ಲೇಶ

    ಹಿರಿಯೂರು: ದಕ್ಷಿಣ ಕಾಶಿ ಖ್ಯಾತಿಯ ಶ್ರೀ ತೇರುಮಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ವೈಭವದಿಂದ ನಡೆಯಿತು.

    ಬೆಳಗ್ಗೆ 9ಕ್ಕೆ ದೇವಾಲಯದಲ್ಲಿನ ಶಿವ ಧನಸ್ಸನ್ನು ವೇದಾವತಿ ನದಿ ಬಳಿ ತಂದು, ಗಂಗಾಪೂಜೆ ನೆರವೇರಿಸಲಾಯಿತು. ದೇಗುಲದ ಆವರಣದಲ್ಲಿ ಹೋಮ-ಹವನ, ಪುಣ್ಯಾಹ, ಗಣಪತಿ ಪೂಜೆ, ಮಹಾಮಂಗಳಾರತಿಯೊಂದಿಗೆ ಬೀರೇನಹಳ್ಳಿ ಮುಜುರೆ ಕರಿಯಣ್ಣ ಹಟ್ಟಿ ಗ್ರಾಮದ ಶ್ರೀ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ಮಧ್ಯಾಹ್ನ 12.30ಕ್ಕೆ ಮಘಾ ನಕ್ಷತ್ರದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

    ಮಂಗಳ ವಾದ್ಯಗಳೊಂದಿಗೆ ದೇಗುಲದ ಆವರಣದಿಂದ ಉತ್ಸವ ಮೂರ್ತಿಯನ್ನು ರಥ ಬಳಿ ಕರೆ ತಂದು ಪೂಜೆ ಸಲ್ಲಿಸಲಾಯಿತು. ಬಳಿಕ ಬಣ್ಣದ ವಸ್ತ್ರ, ಬಾವುಟ, ಹೂವುಗಳಿಂದ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ, ರಾಜ ಬೀದಿಯಲ್ಲಿ ಭಕ್ತರ ಹರ್ಷೋದ್ಘಾರದೊಂದಿಗೆ ತೇರು ಮುಂದೆ ಸಾಗಿತು. ರಥ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತರು ಹಣ್ಣು, ದವನ ಎಸೆದು ಭಕ್ತಿ ಅರ್ಪಿಸಿದರು. ರಥದ ಮುಂದೆ ಶ್ರೀ ವೀರಕರಿಯಣ್ಣ ಸ್ವಾಮಿ ಉತ್ಸವ ಮೂರ್ತಿ ವಾದ್ಯ ಮೇಳದೊಂದಿಗೆ ಸಾಗಿತು.

    ಆಕರ್ಷಕ ತೇರು: ನಾಲ್ಕು ಕಲ್ಲಿನ ಗಾಲಿಗಳ 20 ಅಡಿ ಎತ್ತರಕ್ಕೆ ಬೃಹತ್ ಗೋಳಾಕಾರದ ಗೋಪುರ ನಿರ್ಮಿಸಿ ವಿವಿಧ ಬಣ್ಣಗಳ ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಶ್ರೀ ಸ್ವಾಮಿಯನ್ನು ಹೂವುಗಳಿಂದ ಸಿಂಗರಿಸಿ, ರಥದಲ್ಲಿ ಪ್ರತಿಷ್ಠಾಪಿಸಿ ರಥ ಬೀದಿಯಲ್ಲಿ ಕರೆ ತರುವ ದೃಶ್ಯ ಆಸ್ತಿಕರ ಮನಸ್ಸಿನಲ್ಲಿ ಧನ್ಯತೆಯ ಭಾವ ಮೂಡಿಸಿತು. ಹರ ಹರ ಮಹಾದೇವ, ಶಂಭೋ ಶಂಕರ ಎಂಬ ಭಕ್ತರ ಉದ್ಘೋಷಗಳು ಮುಗಿಲು ಮುಟ್ಟಿದ್ದವು.

    ಒಂದೇ ದಿನ ಮೂರು ತೇರು: ಪ್ರತಿ ವರ್ಷ ಮಘಾ ಮಾಸದ ಶುಕ್ಲ ಪಕ್ಷದ ರೇವತಿ ನಕ್ಷತ್ರದಲ್ಲಿ ಆರಂಭಗೊಳ್ಳುವ ಹದಿನಾರು ದಿನಗಳ ಜಾತ್ರೆ ಕೇಂದ್ರಾಕರ್ಷಣೆ ತೇರು ಮಲ್ಲೇಶ್ವರ ಸ್ವಾಮಿ, ಚಂದ್ರ ಮೌಳೇಶ್ವರ ಸ್ವಾಮಿ, ಉಮಾ ಮಹೇಶ್ವರ ಸ್ವಾಮಿಯ ರಥೋತ್ಸವ ನೆರವೇರುತ್ತದೆ. ಒಂದೇ ದಿನ ಮೂರು ರಥೋತ್ಸವಗಳು ಒಂದೆಡೆ ನಡೆಯುವುದು ಇಲ್ಲಿನ ವಿಶೇಷ. ಜಾತ್ರೆಗೆ ಆಗಮಿಸಿದ ಭಕ್ತರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಮಜ್ಜಿಗೆ, ಬೆಲ್ಲದ ಪಾನಕ, ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಶಾಸಕಿ ಪೂರ್ಣಿಮಾ ಪೂಜೆ: ಶ್ರೀ ತೇರುಮಲ್ಲೇಶ್ವರ ಸ್ವಾಮಿ ರಥಕ್ಕೆ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾಧಿಕಾರಿ ದಿವ್ಯಾಪ್ರಭು, ತಹಸೀಲ್ದಾರ್ ಪ್ರಶಾಂತ್ ಪಾಟೀಲ್ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು.

    ಹಾಲಿ- ಮಾಜಿ ಶಾಸಕರ ಪರ ಬೆಂಬಲಿಗರ ಜೈಕಾರ: ರಥಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ ಶಾಸಕಿ ಕೆ.ಪೂರ್ಣಿಮಾ, ಮಾಜಿ ಶಾಸಕ ಡಿ.ಸುಧಾಕರ್ ಪರ ಬೆಂಬಲಿಗರು ಜೈ ಕಾರ ಹಾಕಿದ್ದು ಗಮನ ಸೆಳೆಯಿತು.

    ನಗರಸಭೆ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಗುಂಡೇಶ್, ಸದಸ್ಯರಾದ ಬಾಲಕೃಷ್ಣ, ಮಹೇಶ್ ಪಲ್ಲವ, ಶಿವರಂಜನಿ, ಅಂಬಿಕಾ, ಸರವಣ, ಕೇಶವಮೂರ್ತಿ, ಈ.ಮಂಜುನಾಥ್, ಚಿತ್ರಜಿತ್, ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ಅರ್ಚಕ ವಿಶ್ವನಾಥಾಚಾರ್, ಎಂಎಲ್ಸಿ ಕೆ.ಎಸ್.ನವೀನ್, ಗೊಲ್ಲ ಸಂಘದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಮೂಡಲಗಿರಿಯಪ್ಪ, ಬಿಜೆಪಿ ಮುಖಂಡ ಎನ್.ಆರ್.ಲಕ್ಷಿ ್ಮೀಕಾಂತ್, ಜಿ.ಎಲ್.ಮೂರ್ತಿ, ಜಿಪಂ ಮಾಜಿ ಸದಸ್ಯರಾದ ಆರ್.ನಾಗೇಂದ್ರನಾಯ್ಕ, ಪಾಪಣ್ಣ, ಕೆಪಿಸಿಸಿ ಸದಸ್ಯ ಸುರೇಶ್ ಬಾಬು, ಖಾದಿ ರಮೇಶ್, ಸೇವಾ ಸಮಿತಿಯ ಬೋಜನಾಯ್ಕ, ಜಗದೀಶ್, ಪಿ.ಎಸ್.ಸಾದತ್ ವುಲ್ಲಾ, ಜಿ.ಪ್ರೇಮ್‌ಕುಮಾರ್, ನಿರಂಜನ್ ಇತರರಿದ್ದರು.

    ಮುಕ್ತಿ ಬಾವುಟಕ್ಕೆ ಪೈಪೋಟಿ: ಕಳೆದ ಆರು ವರ್ಷದಿಂದ ರಥೋತ್ಸವದ ದಿನ ಶ್ರೀ ಸ್ವಾಮಿಯ ಮುಕ್ತಿ ಬಾವುಟ ಹರಾಜು ಹಾಕಲಾಗುತ್ತಿದ್ದು, 2018ರಲ್ಲಿ ವೀರೇಂದ್ರ ಪಪ್ಪಿ ದಾಖಲೆಯ 31 ಲಕ್ಷ ರೂ.ಗೆ ಪಡೆದಿದ್ದರು. ಈ ಬಾರಿ ಮುಕ್ತಿ ಬಾವುಟ ಪಡೆಯಲು ಬಿಜೆಪಿ ಮುಖಂಡ ಡಿಷ್ ಮಂಜುನಾಥ್- ಮಾಜಿ ಸಚಿವ ಡಿ.ಸುಧಾಕರ್ ಜತೆ ಪೈಪೋಟಿ ನಡೆಸಿದರು. ಅಂತಿಮವಾಗಿ ಸುಧಾಕರ್ 10 ಲಕ್ಷ ರೂ.ಗೆ ಪಡೆದರು. ಸತತ ಎರಡನೇ ವರ್ಷ ಸುಧಾಕರ್ ಮುಕ್ತಿ ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts