More

    ಕೂಲಿ ಕಾರ್ಮಿಕರ ಕಷ್ಟದ ಹೆಜ್ಜೆ !

    | ಜಗದೀಶ ಹೊಂಬಳಿ ಬೆಳಗಾವಿ

    ‘ಚೋಟುದ್ದ ಬಟ್ಟೆಗಾಗಿ ಗೇಣುದ್ದ ಹೊಟ್ಟೆಗಾಗಿ..’ ಅನ್ಯ ರಾಜ್ಯದಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನೂರಾರು ಕಾರ್ಮಿಕರಿಗೆ ಕಳೆದ ನಾಲ್ಕಾರು ದಿನದಿಂದ ಹೊಟ್ಟೆಗೆ ಹಿಟ್ಟು ದಕ್ಕಿಲ್ಲ. ಅನ್ಯರಿಂದ ಬೇಡಿ-ಕಾಡಿ ಪಡೆದ ಜೀವಜಲವೊಂದೇ ಬದುಕಿರಲು ಆಸರೆಯಾಗಿದೆ.

    ಇದು, ಗೋವಾದಲ್ಲಿದ್ದ ಕರ್ನಾಟಕದ ಕೂಲಿ ಕಾರ್ಮಿಕರು ಅನುಭವಿಸುತ್ತಿರುವ ಹೀನಾಯ ಬದುಕು. ಲಾಕ್‌ಡೌನ್ ೋಷಣೆಯಿಂದಾಗಿ ತೀವ್ರ ಸಮಸ್ಯೆ ಅನುಭವಿಸುತ್ತಿರುವ ಕಾರ್ಮಿಕರು ಇದೀಗ ತವರಿಗೆ ಮರಳಲು ಕಷ್ಟದ ಹೆಜ್ಜೆಯನ್ನಿಡುತ್ತಿದ್ದಾರೆ. ಮಹಿಳಾ ಕಾರ್ಮಿಕರೂ ಸೇರಿದಂತೆ ನೂರಾರು ಜನರು ಪಾದಯಾತ್ರೆ ಮೂಲಕ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಕರೊನಾ ವೈರಸ್ ಹರಡದಂತೆ ಕೈಗೊಂಡಿರುವ ಕ್ರಮದಿಂದಾಗಿ ಗೋವಾದಲ್ಲಿ ಈ ಕಾರ್ಮಿಕರಿಗೆ ಅನ್ನ, ನೀರು ಸಿಗದೆ ಬಹಳ ಸಮಸ್ಯೆಗೆ ಒಗಾಗಿದ್ದಾರೆ. ಹೀಗಾಗಿ ಬಸ್ ಬಂದ್ ಆಗಿದ್ದರೂ ಸಹ ಹೇಗಾದರೂ ಮಾಡಿ ಜನ್ಮದೂರಿಗೆ ಹೋಗಲು ನಿರ್ಧರಿಸಿದ ಅವರು, ಪಾದಯಾತ್ರೆ ಕೈಗೊಂಡಿದ್ದಾರೆ.

    ರಾಜ್ಯ ಪ್ರವೇಶ: ವಿಜಯಪುರ, ಬಾಗಲಕೋಟೆ, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳ 100ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಗೋವಾದಲ್ಲಿ ತರಕಾರಿ, ದಿನಬಳಕೆ ವಸ್ತುಗಳು ಸಿಗದ ಕಾರಣ ಬಾಡಿಗೆ ಮನೆ ತೊರೆದು ಊರಿನತ್ತ ಮುಖ ಮಾಡಿದ್ದಾರೆ. ಗೋವಾದಿಂದ ಪಾದಯಾತ್ರೆ ಮೂಲಕ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಗಡಿಯಿಂದ ರಾಜ್ಯಕ್ಕೆ ಪ್ರವೇಶ ಮಾಡುತ್ತಿದ್ದಾರೆ.

    ಕಾರ್ಮಿಕರ ತಪಾಸಣೆ: ಮೂರು ದಿನದ ಹಿಂದೆಯೇ ಪಾದಯಾತ್ರೆ ಕೈಗೊಂಡಿರುವ ಈ ಕಾರ್ಮಿಕರು ಶನಿವಾರದಂದು ಬೆಳಗಾವಿ ತಾಲೂಕಿನ ಹೊನ್ಯಾಳ ಕ್ರಾಸ್ ತಲುಪಿದ್ದಾರೆ. ಕಾರ್ಮಿಕರ ಈ ಸಂಕಷ್ಟ ಅರಿತ ಕೆಲ ಗ್ರಾಮಸ್ಥರು ದಾರಿಯಲ್ಲಿಯೇ ಅವರಿಗೆ ಆಹಾರ ಪೂರೈಸುತ್ತಿದ್ದಾರೆ. ಸಂಘ-ಸಂಸ್ಥೆಗಳು ಹಣ್ಣು, ತಿನಿಸು ನೀಡುತ್ತಿದ್ದಾರೆ. ಹೊರ ರಾಜ್ಯದಿಂದ ಕಾರ್ಮಿಕರು ಬಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹೊನ್ಯಾಳ ಕ್ರಾಸ್ ಬಳಿ ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲ ಕಾರ್ಮಿಕರ ತಪಾಸಣೆ ಮಾಡಿದ್ದಾರೆ. ಪೊಲೀಸರು ಭದ್ರತಾ ಕ್ರಮ ಕೈಗೊಂಡಿದ್ದ, ತಹಸೀಲ್ದಾರ್ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.

    ಗ್ರಾಮಸ್ಥರಿಗೆ ವೈರಸ್ ಹರಡುವ ಭೀತಿ

    ಪಾದಯಾತ್ರೆಯಲ್ಲಿ ಆಗಮಿಸುತ್ತಿರುವ ಎಲ್ಲ ಕಾರ್ಮಿಕರಿಗೆ ಬಿಜೆಪಿ ನಾಯಕ ಧನಂಜಯ ಜಾಧವ ನೇತೃತ್ವದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ, ಅವರಿಗೆ 2-3 ದಿನಕ್ಕಾಗುವಷ್ಟು ಆಹಾರವನ್ನು ಸಂಘ-ಸಂಸ್ಥೆಯವರು ಪಾರ್ಸಲ್ ನೀಡುತ್ತಿದ್ದಾರೆ. ಮತ್ತೊಂದೆಡೆ ಗೋವಾ, ಕೊಲ್ಲಾಪುರ, ವಾಸ್ಕೋ, ಹೈದರಾಬಾದ್ ಇನ್ನಿತರ ನಗರಗಳಿಂದ ಕೂಲಿ ಕಾರ್ಮಿಕರು ಹಳ್ಳಿಗಳ ಕಡೆಗೆ ಆಗಮಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಜನರು ಭೀತಿಗೊಳಗಾಗಿದ್ದಾರೆ. ಅವರಿಂದಾಗಿ ಮುಂದೆ ನಮಗೂ ಕರೊನಾ ವೈರಸ್ ಹರಡುತ್ತದೆಯೋ ಎಂದು ಆತಂಕ ಪಡುತ್ತಿದ್ದಾರೆ.

    ಗೋವಾದಿಂದ ಕರ್ನಾಟಕದ ತಮ್ಮ ಹಳ್ಳಿಗಳತ್ತ ನೂರಾರು ಕಾರ್ಮಿಕರು ಪಾದಯಾತ್ರೆ ಹೊರಟಿದ್ದು, ಖಾನಾಪುರದ ಬಳಿ ಅವರಲ್ಲಿನ 41 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಲಾಕ್ ಡೌನ್ ನಿಯಮಾನುಸಾರ ಏಪ್ರಿಲ್ 14ರ ವರೆಗೂ ಈ ಎಲ್ಲ ಕಾರ್ಮಿಕರ ಜವಾಬ್ದಾರಿ ಗೋವಾ ಸರ್ಕಾರದ್ದೇ ಆಗಿರುತ್ತದೆ. ಆದರೂ ಇವರು ಅಲ್ಲಿನ ಸರ್ಕಾರದ ಕಣ್ಣುತಪ್ಪಿಸಿಯೂ ಬಂದಿರಬಹುದು. ಹೀಗಾಗಿ ಅವರು ತವರಿಗೆ ಹೋಗಲು ಅವಕಾಶವಿಲ್ಲದ್ದರಿಂದ ಸದ್ಯ ಗಡಿಯಲ್ಲಿಯೇ ಆಹಾರ ಪೂರೈಸುತ್ತಿದ್ದೇವೆ.
    | ಡಾ. ಎಸ್.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿ, ಬೆಳಗಾವಿ

    ಗೋವಾದಲ್ಲಿ ನಮಗೆ ಆಹಾರ ಸಿಗುತ್ತಿಲ್ಲ. ಊಟ ಹುಡುಕಿಕೊಂಡು ಹೋದರೆ ಗೋವಾದವರು ನಮಗೆ ಹೊಡೆಯುತ್ತಿದ್ದಾರೆ. ನಮಗೆಲ್ಲ ಬಹಳ ತೊಂದರೆಯಾಗುತ್ತಿತ್ತು. ಹೀಗಾಗಿ ಬೇರೆ ದಾರಿ ಕಾಣದೆ ಊರಿನಕಡೆ ಹೊರಟಿದ್ದೇವೆ. ವಾಹನ ಸಿಗದಿದ್ದರೆ ಇನ್ನೂ ಮೂರು ದಿವಸ ನಡೆಯಬೇಕು.
    | ಮುದ್ದಪ್ಪ ತತಬಿ ಕಾರ್ಮಿಕ (ಸುರಪುರ ತಾಲೂಕಿನ ಎಣ್ಣಿವಾಡಗೆ ಗ್ರಾಮಸ್ಥ)

    ಗೋವಾದಲ್ಲಿ ರೇಷನ್, ಕಾಯಿಪಲ್ಲೆ ಸಿಗುತ್ತಿಲ್ಲ. 2-3 ದಿನ ಉಪವಾಸ ಮಾಡಿ ಕಾಲ ಕಳೆದಿದ್ದೇವೆ. ಇನ್ನು ಅಲ್ಲಿರಲು ಸಾಧ್ಯವಿಲ್ಲ. ಹೀಗಾಗಿ ಬಾಡಿಗೆ ಮನೆಗಳನ್ನು ಖಾಲಿ ಮಾಡಿಕೊಂಡು ಬಂದಿದ್ದೇವೆ. ಊರಿಗೆ ಹೋಗಲು ಬಸ್ ಇಲ್ಲದ್ದರಿಂದ ನಡೆದುಕೊಂಡೇ ನಾವೆಲ್ಲ ಹೊರಟಿದ್ದೇವೆ.
    | ದಂಡಪ್ಪ ಪೂಜಾರಿ ಕಾರ್ಮಿಕ (ಕುಷ್ಟಗಿ ತಾಲೂಕಿನ ಕೆ.ಬೆಂಚಮಟ್ಟಿ ಗ್ರಾಮಸ್ಥ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts