More

    ಹಿರಣ್ಯಕೇಶಿಗೆ ಶೀಘ್ರ ಕಾಯಕಲ್ಪ

    ಬೆಳಗಾವಿ : ಮಾರ್ಕಂಡೇಯ ನದಿ ಹೂಳೆತ್ತಿದ್ದ ಬಳಿಕ, ಜಿಲ್ಲೆಯ ಹಿರಣ್ಯಕೇಶಿ ನದಿಗೆ ರಾಜ್ಯದಲ್ಲಿ 2ನೇ ಬಾರಿಗೆ ನರೇಗಾ ಯೋಜನೆಯಡಿ 30.43 ಕಿ.ಮೀ. ಉದ್ದದ ಹಿರಣ್ಯಕೇಶಿ ನದಿಯಲ್ಲಿನ ಹೂಳೆತ್ತಲು ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹಿರಣ್ಯಕೇಶಿ ನದಿ ಪುನಶ್ಚೇತನಗೊಳಿಸಲು ಜಿಲ್ಲಾ ಪಂಚಾಯಿತಿ ಹೊಸ ಹೆಜ್ಜೆಯಿಟ್ಟಿದೆ.

    2 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸೌಲಭ್ಯ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಹಿರಣ್ಯಕೇಶಿ ನದಿಯು ಮಹಾರಾಷ್ಟ್ರದ ಕೊಲ್ಲಾಪುರದ ಮೂಲಕ ಕರ್ನಾಟಕ ಪ್ರವೇಶಿಸುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ಹರಿದು, ಸಂಕೇಶ್ವರ ದಾಟಿ ಮುಂದೆ ಘಟಪ್ರಭಾ ನದಿ ಸೇರುತ್ತದೆ. ಸುಮಾರು 20 ವರ್ಷಗಳಿಂದ ಈ ನದಿಯಲ್ಲಿ ಹೂಳು ತುಂಬಿದ್ದರಿಂದ ಸುತ್ತಮುತ್ತಲಿನ ಕೃಷಿ, ಕೈಗಾರಿಕೆ ಸೇರಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿತ್ತು. ಇದೀಗ ಹೂಳು ತೆಗೆದ ಬಳಿಕ ನೀರಿನ ಸಂಗ್ರಹ ಹೆಚ್ಚಳವಾಗುವುದರ ಜತೆಗೆ ಸುಮಾರು 2 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಿನ ಸೌಲಭ್ಯ ದೊರೆಯಲಿದೆ.

    ಒಂದೂವರೆ ತಿಂಗಳ ಗಡುವು: ಹುಕ್ಕೇರಿ ತಾಲೂಕಿನ 10 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹರಿಯುವ ಈ ಹಿರಣ್ಯಕೇಶಿ ನದಿಯ ಹೂಳೆತ್ತಲು 19 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ಒಂದು ದಿನಕ್ಕೆ 6 ರಿಂದ 7 ಸಾವಿರ ಕಾರ್ಮಿಕರನ್ನು ಬಳಸಿಕೊಂಡು ಒಂದೂವರೆ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ನದಿ ಹೂಳೆತ್ತುವ ಕುರಿತು ಎಲ್ಲ ಗ್ರಾಮಗಳಲ್ಲಿ ಜನರಿಗೆ ತಿಳಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಭಾಗವಹಿಸುವಂತೆ ವಿನಂತಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

    ಕಾಮಗಾರಿಗೆ 6 ಕೋಟಿ ರೂ. ವೆಚ್ಚ

    30.43 ಕಿ.ಮೀ. ಉದ್ದದ ಈ ನದಿ ಹೂಳೆತ್ತಲು ನರೇಗಾದಲ್ಲಿ 6 ಕೋಟಿ ರೂ. ವೆಚ್ಚ ಹಾಗೂ 3 ಲಕ್ಷ ಮಾನವ ದಿನಗಳ ಸೃಷ್ಟಿ ಗುರಿ ಹಾಕಿಕೊಳ್ಳಲಾಗಿದೆ. ಹೂಳೆತ್ತಲು 19 ಗ್ರಾಪಂಗಳಿಗೆ ಜವಾಬ್ದಾರಿ ನೀಡಲಾಗಿದೆ. ಹೂಳೆತ್ತುವುದರಿಂದ ಸುತ್ತಮುತ್ತಲಿನ ಹಳ್ಳಿಗಳಿಗೆ ಅನುಕೂಲವಾಗಲಿದೆ. ಜತೆಗೆ ಅಂತರ್ಜಲಮಟ್ಟ ವೃದ್ಧಿಯಾಗಲಿದೆ. ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಲಾಕ್‌ಡೌನ್‌ನಿಂದ ಖಾಲಿ ಕುಳಿತುಕೊಂಡಿರುವ ಕಾರ್ಮಿಕರಿಗೆ ಉದ್ಯೋಗ ನೀಡುವ ಉದ್ದೇಶ ಈ ಯೋಜನೆಯದ್ದಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಎಸ್.ಬಿ.ಮುಳ್ಳಳ್ಳಿ ತಿಳಿಸಿದ್ದಾರೆ.

    ಆರ್ಥಿಕತೆಗೆ ವೇಗ ನೀಡುವುದು ಸೇರಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಯೋಜನೆಯಡಿ ನಕ್ಷೆ ಸಿದ್ಧಪಡಿಸಿ ಆಯಾ ಗ್ರಾಪಂಗಳಿಗೆ ಕೆಲ ಜವಾಬ್ದಾರಿ ನೀಡಲಾಗಿದೆ. ಎರಡು ದಿನದಲ್ಲಿ ಕಾಮಗಾರಿ ಆರಂಭಿಸಲಾಗುವುದು.
    | ಡಾ. ಕೆ.ವಿ. ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts