More

    ಸಮಸ್ಯೆ ಪರಿಹಾರಕ್ಕೆ ಸರಣಿ ಹೋರಾಟ: ಶಿರೂರು ಟೋಲ್‌ಗೇಟ್ ಎದುರು ಪ್ರತಿಭಟನೆ

    ಬೈಂದೂರು: ಚತುಷ್ಪಥ ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದ ಆರಂಭದಿಂದಲೂ ನಿತ್ಯ ಅಪಘಾತ ಸಂಭವಿಸುತ್ತಿದೆ. ಬೀದಿದೀಪ ದುರಸ್ತಿಯಾಗಿಲ್ಲ. ಸರ್ವೀಸ್ ರಸ್ತೆ ಬೇಡಿಕೆ ಇದುವರೆಗೆ ಈಡೇರಿಸಿಲ್ಲ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲುವ ಪರಿಣಾಮ ಅಪಘಾತ ಹೆಚ್ಚುತ್ತಿದ್ದು, ಹಲವು ಬಾರಿ ಮನವಿ ಮಾಡಿದರೂ ಕಂಪನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಮನ ಹರಿಸುತ್ತಿಲ್ಲ. ಜನರ ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

    ಶಿರೂರು ಗ್ರಾಮ ಪಂಚಾಯಿತಿ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹೆದ್ದಾರಿ ಅವ್ಯವಸ್ಥೆ ಖಂಡಿಸಿ ಶಿರೂರು ಟೋಲ್‌ಗೇಟ್ ಎದುರು ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

    ಬೈಂದೂರು ಕ್ಷೇತ್ರ ಬಿಜೆಪಿ ಮಂಡಲದ ಅಧ್ಯಕ್ಷ ನೆಲ್ಯಾಡಿ ದೀಪಕ್‌ಕುಮಾರ್ ಶೆಟ್ಟಿ ಮಾತನಾಡಿ, ಈಗಾಗಲೇ ಸಂಸದರು ಹಾಗೂ ಶಾಸಕರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಬೈಂದೂರು ಕ್ಷೇತ್ರದ ಹೆದ್ದಾರಿ ಸಮಸ್ಯೆ ಕುರಿತು ತಿಳಿಸಿದ್ದು, ಅಧಿಕಾರಿಗಳು ಶೀಘ್ರ ಕಾಮಗಾರಿ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಹೆದ್ದಾರಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳು ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ಆದ್ದರಿಂದ ಜನರ ತಾಳ್ಮೆ ಪರೀಕ್ಷಿಸದೆ ತಕ್ಷಣ ಕ್ರಮ ಕೈಗೊಳ್ಳಬೇಕು ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದರು.

    ಸ್ಥಳೀಯರ ಬೇಡಿಕೆಗಳಿಗೆ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರ ಕಂಪನಿ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗದ ಕಾರಣ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಕಂಪನಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಈ ಬಾರಿ ಸಮಪರ್ಕವಾದ ಸ್ಪಂದನೆ ಲಿಖಿತ ರೂಪದಲ್ಲಿ ನೀಡಬೇಕು ಎಂದು ಪ್ರತಿಭಟನೆಕಾರರು ಪಟ್ಟುಹಿಡಿದರು. ನಂತರ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಇಲಾಖಾ ವ್ಯಾಪ್ತಿಯಲ್ಲಿ ಅವಕಾಶವಿರುವ ಬೇಡಿಕೆಗಳನ್ನು ಈಡೇರಿಸುತ್ತೇವೆ ಮತ್ತು ಅಗತ್ಯ ಕಾಮಗಾರಿಗಳನ್ನು ನಾಳೆಯಿಂದಲೇ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದರು.

    ಬೈಂದೂರು ತಹಶೀಲ್ದಾರ್ ಕಿರಣ ಗೌರಯ್ಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ನವೀನ್, ಗುತ್ತಿಗೆದಾರ ಕಂಪನಿಯ ಅಧಿಕಾರಿ ಶ್ರೀನಿವಾಸ, ಟೋಲ್ ಜನರಲ್ ಮ್ಯಾನೇಜರ್ ಗಂಗಾಧರ ಫಾಯ್ಕ್ರ, ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್ ಕೆ., ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಆನಂದ್ ಕಾಯ್ಕಿಣಿ, ಠಾಣಾಧಿಕಾರಿ ಪವನ್ ನಾಯಕ್, ಜಿಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ತಾಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಶಿರೂರು ಗ್ರಾಪಂ ಅಧ್ಯಕ್ಷೆ ಜಿ.ಯು.ದಿಲ್ಶಾದ್ ಬೇಗಂ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್, ಕಾಂಗ್ರೆಸ್ ಮುಖಂಡ ಎಸ್.ಮದನ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಗ್ರಾಪಂ ಸದಸ್ಯ ಉದಯ ಪೂಜಾರಿ ಮೈದಿನಪುರ, ಶೋಯಿಬ್ ಅರೆಹೊಳೆ, ರಘುರಾಮ ಕೆ.ಪೂಜಾರಿ, ಗ್ರಾಪಂ ಸದಸ್ಯರು ಇದ್ದರು. ಟೋಲ್‌ಗೇಟ್ ಬಳಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts