More

    10 ಸಾವಿರ ರೂ. ಗಡಿ ದಾಟಿದ ಅರೇಬಿಕಾ ಕಾಫಿ, ಬೆಳೆಗಾರರ ಮುಖದಲ್ಲಿ ಮಂದಹಾಸ

    ಆಲ್ದೂರು: ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿ ಧಾರಣೆ 10 ಸಾವಿರ ರೂ. ಗಡಿ ದಾಟಿರುವುದರಿಂದ ಕಾಫಿ ಬೆೆಳೆಗಾರರ ವಲಯದಲ್ಲಿ ಮತ್ತೆ ಆಶಾಭಾವನೆ ಮೂಡಿದೆ.

    ಹಲವು ವರ್ಷಗಳಿಂದ ಕಾಫಿ ಧಾರಣೆ ಕುಸಿತದಿಂದ ಕಂಗಾಲಾಗಿ ನಿರಾಸಕ್ತಿ ತಳೆದಿದ್ದ ಬೆಳೆಗಾರರಿಗೆ ಸದ್ಯದ ಕಾಫಿ ಧಾರಣೆ ನೆಮ್ಮದಿ ತಂದಿದೆ. ಸತತ ಧಾರಣೆ ಕುಸಿತದಿಂದ ಕಾಫಿ ಉದ್ಯಮವೇ ಸಾಕು ಎನ್ನುವ ಹಂತಕ್ಕೆ ತಲುಪಿದ್ದ ಸಾಕಷ್ಟು ಬೆಳೆಗಾರರಿಗೆ ಈ ಬಾರಿಯ ಧಾರಣೆ ಮತ್ತೆ ಕಾಫಿ ಉದ್ಯಮದತ್ತ ಒಲವು ತೋರುವಂತೆ ಮಾಡಿದೆ.

    ಕಳೆದ 5-6 ವರ್ಷಗಳಿಂದ 8 ಸಾವಿರ ರೂ. ಗಡಿ ದಾಟದ ಕಾಫಿ ಧಾರಣೆ ಬೆಳೆಗಾರರನ್ನು ಸಂಕಷ್ಟಕ್ಕೆ ತಳ್ಳಿತ್ತು. ಕೂಲಿ ಕಾರ್ವಿುಕರ ಕೊರತೆ, ಹೆಚ್ಚಾದ ರಸಗೊಬ್ಬರ ಬೆಲೆ, ಹಲವು ರೋಗಗಳು, ದುಬಾರಿ ಕೀಟನಾಶಕಗಳಿಂದ ತೋಟಗಳ ನಿರ್ವಹಣೆ ಕಷ್ಟಸಾಧ್ಯ ಎಂಬ ಮನೋಭಾವನೆ ಬೆಳೆಗಾರರಲ್ಲಿ ಮನೆಮಾಡಿತ್ತು. ಇರುವ ತೋಟವನ್ನು ನಿರ್ವಹಣೆೆ ಮಾಡಲು ಸಾಧ್ಯವಾಗದೆ, ಪಾಳು ಬಿಡಲೂ ಸಾಧ್ಯವಾಗದೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು.

    ಇದರ ಜತೆಗೆ ಗಾಯದ ಮೇಲೆ ಬರೆ ಎಳೆದಂತೆ ಹವಾಮಾನ ವೈಪರೀತ್ಯವೂ ಬೆಳೆಗಾರರ ಬದುಕಿನಲ್ಲಿ ಕಣ್ಣಾಮುಚ್ಚಾಲೆಯಾಡಿತು. ಕಳೆದ ವರ್ಷ ಸುರಿದ ಮಳೆಗೆ ಬಹುತೇಕ ಕಾಫಿ ಫಸಲು ನೆಲಕಚ್ಚಿತ್ತು. ಈ ವರ್ಷದ ಬದುಕು, ತೋಟಗಳ ನಿರ್ವಹಣೆ ಹೇಗೆ? ಎಂಬ ಚಿಂತೆ ಬೆಳೆಗಾರರನ್ನು ಕಾಡಿತ್ತು. ಆದರೆ ಈ ಬಾರಿಯ ಕಾಫಿ ಧಾರಣೆ ಬೆಳೆಗಾರರಲ್ಲಿ ನೆಮ್ಮದಿ ತಂದಿದೆ.

    ಅರೇಬಿಕಾ ಕಾಫಿ 50 ಕೆಜಿ ಬ್ಯಾಗ್ ಸದ್ಯಕ್ಕೆ 10,500 ರೂ. ದಾಟಿದೆ. ಬಹುತೇಕ ಬೆಳೆಗಾರರು ಈ ಬಾರಿಯೂ ಧಾರಣೆ ಸಿಗುವುದಿಲ್ಲ ಎಂಬ ಭಯದಿಂದ ಬಹುತೇಕ ಕಾಫಿಯನ್ನು 7,300 ರೂ.ಗೆ ಮಾರಾಟ ಮಾಡಿದ್ದರು. ಆದರೆ ಮಾರ್ಚ್​ನಲ್ಲಿ ಕಾಫಿ ಧಾರಣೆ 10 ಸಾವಿರ ರೂ. ಗಡಿ ದಾಟಿದ್ದು ಉತ್ತಮ ಧಾರಣೆ ನಿರೀಕ್ಷಿಸಿದ್ದ ಬೆಳೆಗಾರರು ಸಂತಸಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts