More

    ಹುಬ್ಬಳ್ಳಿ ಧಾರವಾಡದಲ್ಲಿ ದಾಖಲೆಯ ಉಷ್ಣಾಂಶ, ಹಿಂದೆಂದೂ ಕಂಡರಿಯದ 42 ಡಿಗ್ರಿ ಸೆಲ್ಸಿಯಸ್

    ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡದ ಮಟ್ಟಿಗೆ ಹಿಂದೆಂದೂ ಕಂಡರಿಯದ ಉಷ್ಣಾಂಶ ದಾಖಲಾಗಿದ್ದು, ಶುಕ್ರವಾರ ಮಧ್ಯಾಹ್ನ 42 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ.

    ಸಾಮಾನ್ಯವಾಗಿ ಪ್ರತಿ ಬೇಸಿಗೆಯಲ್ಲಿ ಹೆಚ್ಚೆಂದರೆ ಸುಮಾರು 39 ಡಿಗ್ರಿ ಸೆಲ್ಸಿಯಸ್ಗೆ ಹೋಗುತ್ತಿದ್ದ ಉಷ್ಣಾಂಶವು, ಈ ಬಾರಿ ಹಿಂದಿನ ಎಲ್ಲ ದಾಖಲೆ ಮುರಿದು 42 ಡಿಗ್ರಿ ಸೆಲ್ಸಿಯಸ್ಗೆ ತಲುಪಿರುವುದು ಜನಜೀವನ ಹೈರಾಣಾಗಿಸಿದೆ.

    ಬೆಳಗ್ಗೆ 10- 11 ಗಂಟೆಯಾದರೆ ಸಾಕು ಹೊರಗೆ ಹೋದರೆ ಬಿಸಿಲು ನೆತ್ತಿ ಸುಡುತ್ತಿದೆ. ಮನೆಯಲ್ಲಿ ಕುಳಿತುಕೊಳ್ಳುವುದಕ್ಕೂ ಆಗುತ್ತಿಲ್ಲ. ಬಿಸಿ ವಾತಾವರಣವು ಜನರ ಜೀವ ಹಿಂಡುತ್ತಿದೆ. ಅದರಲ್ಲೂ ಮಕ್ಕಳು, ಹಿರಿಯರು, ರೋಗಿಗಳು ಬಿಸಿಲಿನ ತಾಪಕ್ಕೆ ಬೆಂದು ಹೋಗುತ್ತಿದ್ದಾರೆ.

    ಬಿಸಿಲಿನ ಝಳ ತಾಳಿಕೊಳ್ಳದ ಅನೇಕರು ಕಾಯಿಲೆಗೆ ಬೀಳುತ್ತಿದ್ದಾರೆ. ಚರ್ಮ ವ್ಯಾದಿ, ಜ್ವರ, ತುರಿಕೆ, ನಿರ್ಜಲೀಕರಣ ಇತ್ಯಾದಿ ಸಮಸ್ಯೆಗಳು ಉಲ್ಬಣವಾಗುತ್ತಿವೆ. ಕಳೆದೊಂದು ವಾರದಿಂದ ಉಷ್ಣಾಂಶವು 39 ಡಿಗ್ರಿ ಸೆಲ್ಸಿಯಸ್ ದಾಟಿ ಬಿಟ್ಟಿದೆ. ಅಕ್ಯುವೆದರ್ನಲ್ಲಿ ಶುಕ್ರವಾರ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

    ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ಸೂರ್ಯನ ಪ್ರಖರತೆ ಹೆಚ್ಚುತ್ತಲೇ ಹೊರಟಿದೆ. ಜನ& ಜಾನುವಾರುಗಳು ಕಂಗೆಟ್ಟು ಹೋಗಿದ್ದಾರೆ. ಬಾಯಾರಿಕೆ ತಣಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಎಷ್ಟೇ ನೀರು ಕುಡಿದರೂ ಸಾಕೆನಿಸುತ್ತಿಲ್ಲ. ಹೊರಗೆ ಬಿಸಲು, ಮನೆಯೊಳಗೆ ಧಗೆಯಿಂದಾಗಿ ಜನರು ಇಂತಹ ಉರಿಯನ್ನು ಅನುಭವಿಸಲಾಗದೇ ಹೊರಳಾಡುತ್ತಿದ್ದಾರೆ.

    ಬಿಸಿಲಿನಿಂದ ತಪ್ಪಿಸಿಕೊಳ್ಳಲು ಅನೇಕರು ತಂಪು ಪಾನೀಯಕ್ಕೆ ಮೊರೆ ಹೋಗುತ್ತಿದ್ದಾರೆ. ಎಳನೀರು, ಕಲ್ಲಂಗಡಿ, ಕರ್ಬೂಜ್, ಕಬ್ಬಿನ ಹಾಲು, ಮಜ್ಜಿಗೆ ಇತ್ಯಾದಿಗಳನ್ನು ಬಳಸುತ್ತಿದ್ದಾರೆ.

    ಮಳೆಯೂ ಇಲ್ಲ: ಸಾಮಾನ್ಯವಾಗಿ ಹೋಳಿ ಹುಣ್ಣಿಮೆ ನಂತರ ಒಂದಿಷ್ಟು ಮಳೆಯಾಗುತ್ತಿತ್ತು. ಆದರೆ, ಈ ವರ್ಷ ವಾರ ಕಳೆದರೂ ಮಳೆಯ ದರ್ಶನವಿಲ್ಲ. ಮಳೆ ಬಾರದೇ ಇದ್ದರೆ ಇನ್ನಷ್ಟು ಸಮಸ್ಯೆಗಳು ಉದ್ಭವಿಸುತ್ತವೆ ಎನ್ನುತ್ತಾರೆ ಹವಾಮಾನ ತಜ್ಞರು.

    ಗಿಡ& ಮರಗಳು ಒಣಗುತ್ತವೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಉಷ್ಣಾಂಶವು ಇನ್ನಷ್ಟು ಹೆಚ್ಚಾಗುವ ಎಲ್ಲ ಲಕ್ಷಣಗಳು ಇದ್ದು, ಜನರು ಮುಂಜಾಗ್ರತೆ ವಹಿಸುವುದೊಂದು ಪರಿಹಾರ ಎಂದು ತಜ್ಞರು ಸಲಹೆ ನೀಡಿದ್ದಾರೆ.

    ಉತ್ತರ ಕರ್ನಾಟಕ ಭಾಗದ ಬೇಸಿಗೆಯಲ್ಲಿ ಹೆಚ್ಚೆಂದರೆ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿತ್ತು. ಈ ಬಾರಿ 41 ಡಿಗ್ರಿ ಸೆಲ್ಸಿಯಸ್ವರೆಗೆ ಏರಿದೆ. ರಾತ್ರಿಯ ಉಷ್ಣಾಂಶದಲ್ಲೂ ಹೆಚ್ಚಳವಾಗಿದೆ. ಇನ್ನೊಂದು ವಾರ ಬಿಸಿ ವಾತಾವರಣ ಇರಲಿದೆ. ಜನರಿಗೆ ಎಚ್ಚರಿಕೆ ವಹಿಸುವುದು ಅವಶ್ಯ ಎಂದು ಕೃಷಿ ವಿವಿ ಹವಾಮಾನ ವಿಭಾಗದ ಮುಖ್ಯಸ್ಥರಾದ ಡಾ. ಆರ್.ಎಚ್. ಪಾಟೀಲ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts