More

    ರಾಜ್ಯದಲ್ಲೂ ಉರಿತಾಪ: ಚುನಾವಣಾ ಪ್ರಚಾರಕ್ಕೆಂದು ಹೊರ ಹೋಗುವವರಿಗೆ ಇಲ್ಲಿದೆ ಕಿವಿಮಾತು!

    ಬೆಂಗಳೂರು: ದೇಶದ ಒಂಬತ್ತು ರಾಜ್ಯಗಳ ತಾಪಮಾನ ಹೆಚ್ಚಳ ಬೆನ್ನಲ್ಲೇ ಕರ್ನಾಟಕದಲ್ಲೂ ಉಷ್ಣಾಂಶ ಏರಿಕೆ ಕಂಡಿದೆ. ವಾತಾವರಣದಲ್ಲಿ ತೀವ್ರ ತೇವಾಂಶ ಕೊರತೆಯಿಂದ ರಾಜ್ಯ ಕೆಂಡವಾಗಿದೆ. ಬೆಳಗ್ಗೆ 8 ಗಂಟೆಗೆ ರಣ ಬಿಸಿಲು ಸುಡಲಾರಂಭಿಸಿದೆ. ಇಡೀ ದಿನ ಕಾಣಿಸಿಕೊಳ್ಳುವ ಬಿರುಬಿಸಿಲಿಗೆ ಜನರು ತತ್ತರಿಸಿದ್ದಾರೆ.

    ರಾಯಚೂರು, ವಿಜಯಪುರ, ಕಲಬುರಗಿ, ಬಳ್ಳಾರಿ ಮತ್ತು ಹಂಪೆಯಲ್ಲಿ ಬುಧವಾರ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಅದೇರೀತಿ, ಬದಾಮಿ, ಬೀದರ್, ಚಿತ್ರದುರ್ಗ, ಧಾರವಾಡ ಹಾಗೂ ಗದಗದಲ್ಲಿ 40ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗಿದೆ. ದಕ್ಷಿಣ ಕರ್ನಾಟಕ ಭಾಗದ ಮೈಸೂರು, ಮಂಡ್ಯ, ಬೆಂಗಳೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವರದಿಯಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸರಾಸರಿ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದೆ. ಕರ್ನಾಟಕ ಹೆಚ್ಚಿನ ಭಾಗಗಳು ಶುಷ್ಕ ಮತ್ತು ಅರೆಶುಷ್ಕ ಸ್ಥಿತಿಯಲ್ಲಿ ಇರುವ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಉಷ್ಣತೆ, ಬಿಸಿಗಾಳಿ ಏರಿಕೆಯಾಗಿದೆ.

    ಇದನ್ನೂ ಓದಿ: ಶೆಟ್ಟರ್ ಜತೆ ಗುರುತಿಸಿಕೊಳ್ಳದಂತೆ ಪಕ್ಷದವರಿಗೆ ಬಿಜೆಪಿ ಹೈಕಮಾಂಡ್ ಸೂಚನೆ; ಜನ ಸೇರಿಸಲು ಪರದಾಟ?

    ಉಷ್ಣ ಮಾರುತ: ಪಶ್ಚಿಮ ಬಂಗಾಳ, ಬಿಹಾರ, ಆಂಧ್ರಪ್ರದೇಶ, ಸಿಕ್ಕಿಂ, ಜಾರ್ಖಂಡ್, ಹಿಮಾಚಲ ಪ್ರದೇಶ,ಒಡಿಶಾ, ಪಂಜಾಬ್ ಮತ್ತು ಹರಿಯಾಣದಲ್ಲಿ ಉಷ್ಣ ಮಾರುತ ಉಂಟಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಇತ್ತೀಚಿಗಷ್ಟೆ ಎಚ್ಚರಿಕೆ ನೀಡಿದೆ. ಈ ರಾಜ್ಯಗಳಲ್ಲಿ ದೀರ್ಘಕಾಲದವರೆಗೆ ಹೊರೆಗೆ ಕೆಲಸ ಮಾಡುವ ಜನರಲ್ಲಿ ಶಾಖದಿಂದ ದುಷ್ಪಾರಿಣಾಮ ಆಗುವ ಸಾಧ್ಯತೆ ಇದೆ. ಹಾಗಾಗಿ, ಜನರು ಮಧ್ಯಾಹ್ನದ ವೇಳೆ ವಿಶ್ರಾಂತಿ ಪಡೆಯುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ತೀವ್ರವಾದ ಬಿಸಿಲಿನ ಸಮಯದಲ್ಲಿ ಮಕ್ಕಳು, ವೃದ್ಧರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಮನೆಗಳಿಂದ ಹೊರಗೆ ಹೋಗಬಾರದು. ಅದೇ ರೀತಿ, ಕರ್ನಾಟಕದಲ್ಲೂ ಬಿಸಿಗಾಳಿ ಬಿಸಲಾರಂಭಿಸಿದೆ. ಇದರಿಂದ, ಜನರ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುವಂತಾಗಿದೆ.

    ಇದನ್ನೂ ಓದಿ: ಪತಿಯ ನಿಧನ, ಬಳಿಕ ಗರ್ಭಪಾತವಾಗಿ ಮಗು ಕೂಡ ಸಾವು; ಇನ್ನು ಮಕ್ಕಳಾಗಲ್ಲವೆಂದು ಮಗುವನ್ನು ಕದ್ದ ಮಹಿಳೆಯ ಬಂಧನ

    ಕಾರ್ಯಕ್ರಮದಲ್ಲಿ ಭಾಗಿಯಾಗಬೇಡಿ

    ಇತ್ತೀಚಿಗಷ್ಟೇ ಮಹಾರಾಷ್ಟ್ರದ ನವಿ ಮುಂಬೈನ ಖಾರ್ಗಾರ್‌ನಲ್ಲಿ ‘ಮಹಾರಾಷ್ಟ್ರ ಭೂಷಣ್’ ಪ್ರಶಸ್ತಿ ಸಮಾರಂಭದಲ್ಲಿ ಬಿಸಿಲ ಬೇಗೆಯಿಂದ 13 ಮಂದಿ ಮೃತಪಟ್ಟಿದ್ದರು. ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು. ಈ ವೇಳೆ ಕೆಲವರು ಸನ್​ಸ್ಟ್ರೋಕ್‌ಗೆ ತುತ್ತಾಗಿ ಪ್ರಾಣ ಬಿಟ್ಟಿದ್ದರು. ಕೆಲವರು ಬಿಸಲ ಬೇಗೆಗೆ ಬಸವಳಿದಿದ್ದರು. ವಿಪರೀತ ಶಾಖದಿಂದಾಗಿ ಅನೇಕ ಮಹಿಳೆಯರು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದರು. ಕರ್ನಾಟಕದಲ್ಲಿಯೂ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ಇದರ ನಡುವೆಯೂ ಚುನಾವಣಾ ಕಾರ್ಯಕ್ರಮಗಳು ಜೋರಾಗಿದೆ. ಆದ್ದರಿಂದ, ಹಗಲಿನ ವೇಳೆ ನಡೆಯುವ ಚುನಾವಣಾ ಸೇರಿ ಯಾವುದೇ ಕಾರ್ಯಕ್ರಮಗಳಿಗೆ ಜನರು ಭಾಗಿಯಾಗಬಾರದು. ತಾಪಮಾನ ಹೆಚ್ಚಾದಂತೆ ಜನರಿಗೆ ತಲೆನೋವು, ವಾಂತಿ, ನಿರ್ಜಲೀಕರಣ, ಸುಸ್ತು ಮತ್ತು ಬೆವರು ಸೇರಿ ಇತರೆ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಬಿಸಿಲು ಲೆಕ್ಕಿಸದೆ ದಿನವಿಡೀ ಕೆಲಸ ಮಾಡಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಮನೆ ಇಲ್ಲದೆ ಬೀದಿಯಲ್ಲಿ ಮಲಗುವ ನಿರಾಶ್ರಿತರು, ಆಟೋ ಚಾಲಕರು, ಸಂಚಾರ ಪೊಲೀಸರು, ರೈತರು, ಕಟ್ಟಡ ಮತ್ತು ರಸ್ತೆ ನಿರ್ಮಾಣ ಕಾರ್ಮಿಕರು ಬಿರು ಬೇಸಿಗೆಯಲ್ಲಿ ಕೆಲಸ ಮಾಡಬಾರದು.

    ಇದನ್ನೂ ಓದಿ: ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!

    ನಿರ್ಮಾಣ ಕ್ಷೇತ್ರದ ಮೇಲೆ ಪರಿಣಾಮ: ಬಿಸಿಲು ಝಳದಿಂದ ಕಟ್ಟಡ ನಿರ್ಮಾಣ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಕೆಲಸ ಮಾಡುವ ಸ್ಥಳದಲ್ಲಿ ಕಾರ್ಮಿಕರಿಗೆ ಐಸ್‌ಪ್ಯಾಕ್, ಕುಡಿಯುವ ನೀರು ಒದಗಿಸಬೇಕು, ಕೆಲಸದ ಅವಧಿ ಬದಲಾಯಿಸಬೇಕು, ಶಾಖದಿಂದ ಆರೋಗ್ಯ ಸಮಸ್ಯೆ ಬಳಲುತ್ತಿರುವವರ ಕಾರ್ಮಿಕರು ವಿಶ್ರಾಂತಿ ನೀಡಬೇಕು ಹಾಗೂ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಕಟ್ಟಡ ನಿರ್ಮಾಣ ಕಂಪನಿಗಳಿಗೆ ಕೇಂದ್ರ ಕಾರ್ಮಿಕ ಇಲಾಖೆ ಸೂಚಿಸಿದೆ.

    ಎಚ್ಚರಿಕೆ ಕ್ರಮಗಳು

    *ಹೆಚ್ಚು ನೀರು (ಕುದಿಸಿ ಆರಿಸಿದ) ಕುಡಿಯಬೇಕು
    * ಗಂಜಿ, ಮಜ್ಜಿಗೆ, ಎಳನೀರು, ನಿಂಬೆ ರಸದಂತಹ ತಂಪು ಪಾನೀಯ ಸೇವನೆ ಉತ್ತಮ
    * ತಾಜಾ ಹಣ್ಣು, ತರಕಾರಿ ಬಳಸಿ
    * ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸಿ
    * ಮಾಂಸ, ಮಸಾಲೆ ಪದಾರ್ಥಗಳ ಮಿತ ಬಳಕೆ
    * ಹೊರಗಿನ ಆಹಾರ ಮತ್ತು ಪಾನೀಯಗಳಿಂದ ದೂರವಿರಿ
    * ಮದ್ಯಪಾನ-ಧೂಮಪಾನ ಒಳ್ಳೆಯದಲ್ಲ
    * ಸುಡು ಬಿಸಿಲಿನಲ್ಲಿ ಓಡಾಡಬಾರದು
    * ಹೊರಗೆ ಹೋದಲ್ಲಿ ಛತ್ರಿ, ಕೂಲಿಂಗ್ ಗ್ಲಾಸ್, ಹ್ಯಾಟ್ ಧರಿಸಿ
    * ಚರ್ಮದ ರಕ್ಷಣೆಗೆ ಹತ್ತಿ ಉಡುಪು ಧರಿಸಿ, ಸನ್‌ಸ್ಕ್ರೀನ್ ಲೋಷನ್ ಬಳಸಿ
    * ಧೂಳು ಮತ್ತು ಬಿಸಿಲಿನಿಂದ ಕಣ್ಣಿನ ಆರೋಗ್ಯ ರಕ್ಷಣೆಗಾಗಿ ಕೂಲಿಂಗ್ ಗ್ಲಾಸ್ ಧರಿಸಬೇಕು
    * ಬೆಚ್ಚಗಿನ/ತಣ್ಣೀರಿನ ಸ್ನಾನ ಒಳ್ಳೆಯದು

    ‘ಈ ಸಲ ಯಾರಿಗೆ ಮತ ಹಾಕಲಿ?’ ಎಂದು ಕೇಳಿದರೆ ಇದು ಏನನ್ನುತ್ತೆ?: ಕೃತಕ ಬುದ್ಧಿಮತ್ತೆಯ ಬುದ್ಧಿಮಾತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts