

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಅವರ ಅಂತಿಮ ಸಂಸ್ಕಾರಕ್ಕೆ ಇಂದು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೌಂದರ್ಯ ಪತಿ ಡಾ.ನೀರಜ್ ಅವರಿಗೆ ಸೇರಿರುವ ಅಬ್ಬಿಗೆರೆಯ ಫಾರ್ಮ್ಹೌಸ್ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಪುತ್ರಿ ಡಾ.ಸೌಂದರ್ಯ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದು, ಕ್ರೆಸೆಂಟ್ ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು. ಇಂದು ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಚಿಕ್ಕಮಗುವೊಂದನ್ನು ಬೇರೆ ರೂಮ್ನಲ್ಲಿ ಬಿಟ್ಟು ವೇಲ್ ಮೂಲಕ ನೇಣು ಹಾಕಿಕೊಂಡು ಅವರು ಸಾವಿಗೆ ಶರಣಾಗಿದ್ದರು. ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು.
ಘಟನೆ ಬಳಿಕ ಡಾ.ಸೌಂದರ್ಯ ಅವರನ್ನು ನೇಣು ಬಿಗಿದುಕೊಂಡಿದ್ದ ವೇಲ್ ಸಮೇತ ಮಲ್ಲಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಸೌಂದರ್ಯರ ಸಾವನ್ನು ದೃಢಪಡಿಸಿದ್ದರ ಹಿನ್ನೆಲೆಯಲ್ಲಿ ಪತಿ ಹೈಗ್ರೌಂಡ್ಸ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಅಲ್ಲಿಗೆ ಆಗಮಿಸಿದ ಪೊಲೀಸರು ವೇಲ್ ತಮ್ಮ ವಶಕ್ಕೆ ಪಡೆದಿದ್ದು, ನಾಳೆ ಸ್ಥಳ ಮಹಜರು ನಡೆಸಲಿದ್ದಾರೆ.