More

    ತ್ಯಾಜ್ಯ ವಿಲೇವಾರಿಗೆ 2021ರವರೆಗಿನ ಕ್ರಿಯಾ ಯೋಜನೆ ಸಲ್ಲಿಸಿ; ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2021ರ ಡಿಸೆಂಬರ್ ಅಂತ್ಯದ ವೇಳೆ ಪ್ರತಿದಿನ ಎಷ್ಟು ಘನ ತ್ಯಾಜ್ಯ ಸಂಗ್ರಹವಾಗುತ್ತದೆ, ಅದರ ವೈಜ್ಞಾನಿಕ ವಿಲೇವಾರಿಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ವಿವರಗಳನ್ನೊಳಗೊಂಡ ಕ್ರಿಯಾ ಯೋಜನೆ ಸಲ್ಲಿಸುವಂತೆ ಪಾಲಿಕೆಗೆ ಹೈಕೋರ್ಟ್ ನಿರ್ದೇಶಿಸಿದೆ.

    ನಗರದಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 2012ರಲ್ಲಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

    ನ್ಯಾಯಾಲಯದ ನಿರ್ದೇಶಾನುಸಾರ ತ್ಯಾಜ್ಯ ವಿಲೇವಾರಿಗೆ ಕೈಗೊಂಡಿರುವ ಕ್ರಮಗಳ ಕುರಿತು ಪಾಲಿಕೆ ಸಲ್ಲಿಸಿದ ವರದಿ ಪರಿಶೀಲಿಸಿದ ಪೀಠ, ಇದರಲ್ಲಿ ಸದ್ಯದ ಕ್ರಮಗಳ ಬಗ್ಗೆ ಹೇಳಲಾಗಿದೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಮುಂದಿನ ದಿನಗಳಲ್ಲಿ ತ್ಯಾಜ್ಯದ ಪ್ರಮಾಣವೂ ಹೆಚ್ಚಾಗಲಿದೆ. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿತು.

    ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ. ನ್ಯಾಯಲಯದ ಎಲ್ಲ ನಿರ್ದೇಶನಗಳನ್ನು ಪಾಲಿಕೆ ಪಾಲಿಸುತ್ತಿದೆ, ಮುಂದಿನ ದಿನಗಳಲ್ಲಿ ಭೂಭರ್ತಿ ಘಟಕಗಳಿಗೆ ತ್ಯಾಜ್ಯ ಹೋಗದಂತೆ ತಡೆಯಲಾಗುವುದು. ಸದ್ಯದ ಅಂದಾಜಿನಂತೆ 2025ರವೇಳೆಗೆ ಬೆಂಗಳೂರು ನಗರದಲ್ಲಿ ಪ್ರತಿದಿನ 7ಸಾವಿರ ಟಟ್ ತ್ಯಾಜ್ಯ ಸಂಗ್ರಹವಾಗುವ ಸಾಧ್ಯತೆ ಇದೆ ಎಂದರು.

    ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಸದ್ಯ 2021ರ ಡಿಸೆಂಬರ್ ಅಂತ್ಯದ ವೇಳೆಗೆ ಪ್ರತಿದಿನ ನಗರದಲ್ಲಿ ಎಷ್ಟು ತ್ಯಾಜ್ಯ ಸಂಗ್ರಹವಾಗುತ್ತದೆ, ಅದನ್ನು ಹೇಗೆ ವಿಲೇವಾರಿ ಮಾಡಲಾಗುವುದು ಎಂಬ ಬಗ್ಗೆ ಕ್ರಿಯಾ ಯೋಜನೆಯನ್ನು ಸಲ್ಲಿಸಿ, ಆನಂತರ ನೋಡೋಣ ಎಂದು ಹೇಳಿತು. ಪಾಲಿಕೆ ವಕೀಲರು 3 ವಾರ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಸಮಯಾವಕಾಶ ನೀಡಿದ ಪೀಠ, ನ್ಯಾಯಾಲಯ ಕೇಳಿರುವ ವಿಚಾರದ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಬಿಬಿಎಂಪಿ ಆಡಳಿತಾಧಿಕಾರಿಗೆ ಸೂಚಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts