More

  ಪ್ರಸಾದ್ ಸ್ಥಾನ ತುಂಬಲು ಸಾಧ್ಯವಿಲ್ಲ

  ಕೊಳ್ಳೇಗಾಲ: ವಿ.ಶ್ರೀನಿವಾಸಪ್ರಸಾದ್ ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬಹುದು ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

  ಪಟ್ಟಣದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ವಿ. ಶ್ರೀನಿವಾಸಪ್ರಸಾದ್ ಅವರ ಅಭಿಮಾನಿ ಬಳಗ ಅಯೋಜಿಸಿದ್ದ ಸ್ವಾಭಿಮಾನದ ದೊರೆ ಅಜರಾಮರ ಎಂಬ ಶೀರ್ಷಿಕೆಯಡಿ ಕೇಂದ್ರದ ನಾಯಕ, ಸ್ವಾಭಿಮಾನಿ ರಾಜಕಾರಣಿಗೆ ನುಡಿ-ನಮನ, ಗಾನ-ನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

  40 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. 1987ರಿಂದ ಅನೇಕ ಜನಪರ ಕೆಲಸ, ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದರೂ ಪ್ರಸಾದ್ ಅವರು ಗಳಿಸಿದ ಹೆಸರನ್ನು ನಾನು ಗಳಿಸಲಾಗಲಿಲ್ಲ. ಬದುಕಿನ ಕೊನೆಯ ಪಯಣವೇ ಸಾವು. ಹಾಗಾಗಿ, ಸಾವಿಗೂ ಮುನ್ನ ಅವರು ಮಾಡಿದ್ದ ಜನಪರ ಕಾರ್ಯಕ್ರಮ, ನಿಲುವು, ಬದ್ಧತೆ ಅವರನ್ನು ಉನ್ನತ ಸ್ಥಾನಕ್ಕೆ ಏರುವಂತೆ ಮಾಡಿದೆ ಎಂದರು.

  ರಾಜ್ಯಾದ್ಯಂತ ಶೋಷಿತ ಸಮುದಾಯವನ್ನು ಒಂದುಗೂಡಿಸುವ ಕೆಲಸ ಮಾಡಿದರು. ಅವರು ನಾಯಕತ್ವಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟರು. ಅವರ ಶಕ್ತಿ ಪ್ರಬಲವಾದ ಅಂಬೇಡ್ಕರ್ ವಾದವೇ ಆಗಿತ್ತು. ಅವರ ಧ್ವನಿಯಾಗಲು, ಎತ್ತರಕ್ಕೆ ಬೆಳೆಯಲು ಇಲ್ಲಿನ ಜನರೇ ಕಾರಣ ಎಂದು ಸ್ಮರಿಸಿದರು.

  ಪ್ರಸಾದ್ ಒಬ್ಬ ಜನಪರ ನಾಯಕರಾಗಿದ್ದರು. ಕೊನೆಯ ದಿನಗಳಲ್ಲಿ ಒಪ್ಪದ ಸಿದ್ಧಾಂತದ ಜತೆಗೆ ರಾಜಕೀಯ ಮಾಡಬೇಕಾದ ಅನಿವಾರ್ಯತೆ ಅವರಿಗೆ ಒದಗಿ ಬಂತು. ನಾನು ಪಕ್ಷಾಂತರಿಯಾಗಿದ್ದೇನೆ, ಆದರೆ, ತತ್ವಾಂತರಿಯಲ್ಲ ಎಂದಿದ್ದರು. ಅವರೊಬ್ಬ
  ಪ್ರಜಾಪ್ರಭುತ್ವವಾದಿಯಾಗಿ ಬದುಕಿದರು ಎಂದು ಅಭಿಪ್ರಾಯಪಟ್ಟರು.

  ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ನಾನು ವಿ.ಶ್ರೀನಿವಾಸಪ್ರಸಾದ್ ಆರೋಗ್ಯ ವಿಚಾರಿಸಲು ಅವರ ನಿವಾಸಕ್ಕೆ ಹೋಗಿದ್ದೆ. ನನ್ನನ್ನು ಕಂಡು ಕೃಷ್ಣಮೂರ್ತಿ ಅವರನ್ನು ನಿಮ್ಮ ಸಂಪುಟದಲ್ಲಿ ಮಂತ್ರಿ ಮಾಡಿಕೊಳ್ಳಲಿಲ್ಲ ಏಕೆ ಎಂದು ನೇರವಾಗಿ ಮುಖ್ಯಮಂತ್ರಿಗಳಿಗೆ ಪ್ರಶ್ನಿಸಿದ್ದರು. ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ನೀಡಲಿಲ್ಲ. ನನಗೆ ಮಂತ್ರಿಯಾಗಬೇಕೆಂಬ ಹಂಬಲ ಇರಲಿಲ್ಲ. ನಾನು ಮತ್ತು ಅವರು ರಾಜಕೀಯವಾಗಿ ಬೇರೆ, ಬೇರೆ ದಿಕ್ಕಿನಲ್ಲಿದ್ದರೂ ನನ್ನ ಬಗ್ಗೆ ವಿಶ್ವಾಸವಿಟ್ಟುಕೊಂಡಿದ್ದರು. ಅವರು ಬಿಜೆಪಿಯಲ್ಲಿದ್ದರು ಅನಂತ್ ಕುಮಾರ್ ಹೆಗಡೆ ಹೇಳಿಕೆಯನ್ನು ಖಂಡಿಸಿದ್ದರು ಎಂದರು.

  ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ, ಮಾಜಿ ಶಾಸಕರಾದ ಆರ್.ನರೇಂದ್ರ, ಹರ್ಷವರ್ಧನ್, ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ. ಎಚ್.ಕೆ. ಟ್ರಸ್ಟ್ ಅಧ್ಯಕ್ಷೆ ಪ್ರೇಮಲತಾ, ಡಿವೈಎಸ್ಪಿ ಮಹಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ರವಿ, ನಗರಸಭೆ ಮಾಜಿ ಅಧ್ಯಕ್ಷರಾದ ರಮೇಶ್, ರೇಖಾ ರಮೇಶ್, ಮುಖಂಡ ಓಲೆ ಮಹದೇವ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts