More

    ಹೆದ್ದಾರಿ ಮರು ಡಾಂಬರೀಕರಣಕ್ಕೆ ಹಿಂದೇಟು

    ಹಾನಗಲ್ಲ: ಪಟ್ಟಣದ ಮೂಲಕ ಸಾಗಿರುವ ತಡಸ- ಶಿವಮೊಗ್ಗ ರಾಜ್ಯ ಹೆದ್ದಾರಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಪ್ರಾಣಾಪಾಯ ವಲಯವಾಗಿ ಮಾರ್ಪಟ್ಟಿದೆ.

    ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಕುಮಾರೇಶ್ವರ ವಿರಕ್ತಮಠದವರೆಗಿನ ರಸ್ತೆಯಲ್ಲಿ ಪ್ರತಿ ದಿನ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಈ ರಸ್ತೆಯು ತಡಸದಿಂದ- ಹಾನಗಲ್ಲವರೆಗೆ, ಹಾನಗಲ್ಲಿನಿಂದ- ಶಿವಮೊಗ್ಗದವರೆಗೆ ಕೆಶಿಪ್ ಸಂಸ್ಥೆಯಿಂದ ಮೇಲ್ದರ್ಜೆಗೇರಿದ ರಸ್ತೆಯಾಗಿ ಪರಿವರ್ತನೆಗೊಂಡು ಮರು ನಿರ್ವಣಗೊಂಡಿದೆ. ಆದರೆ, ಹಾನಗಲ್ಲ ಪಟ್ಟಣದ ಒಳಗಿನ ರಸ್ತೆಯನ್ನು ಅಗಲೀಕರಣಗೊಳಿಸಲು ಮನೆಗಳ ಮಾಲೀಕರು ಒಪ್ಪಿಗೆ ನೀಡುತ್ತಿಲ್ಲ. ಈ ಮನೆಗಳ ಮಾಲೀಕರಿಗೆ ನೀಡುವಷ್ಟು ಪರಿಹಾರದ ಹಣವನ್ನು ಈ ಯೋಜನೆಯಲ್ಲಿ ಅಳವಡಿಸಲು ಸಾಧ್ಯವಾಗುತ್ತಿಲ್ಲ ಎಂಬಂಥ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ ಎಂದು ಕೆಶಿಪ್ ಅಧಿಕಾರಿಗಳು ಕಾರಣ ನೀಡಿದ್ದಾರೆ.

    ಸಮಸ್ಯೆಗೆ ಕಾರಣವೇನು?: ಎರಡು ಬಾರಿ ಡಾಂಬರೀಕರಣಗೊಂಡಿದ್ದರೂ ಈ ರಾಜ್ಯ ಹೆದ್ದಾರಿಯಲ್ಲಿ ರಸ್ತೆಗೆ ಹಾಕಲಾದ ಡಾಂಬರ್ ಬಿಸಿಲು- ಮಳೆಗೆ ಹಿಗ್ಗಿ- ಕುಗ್ಗಿ ರಸ್ತೆ ಮಧ್ಯದಲ್ಲಿ ಜರಿದು ನಿಂತು, ಉಬ್ಬಿಕೊಂಡು ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದೆ. ಸುಮಾರು ಒಂದೂವರೆ ಕಿ.ಮೀ. ನಷ್ಟಿರುವ ಈ ರಸ್ತೆ ಹಲವು ಕಡೆಗಳಲ್ಲಿ ಬಿರಿದುಕೊಂಡಿದೆ. ಬಹಳಷ್ಟು ಕಡೆಗಳಲ್ಲಿ ತಗ್ಗುಗಳೂ ಬಿದ್ದಿವೆ. ವಾಹನ ಸವಾರರು ಗುಂಡಿಗಳನ್ನು ಹಾಗೂ ಡಾಂಬರಿನ ಗುಡ್ಡೆಗಳನ್ನು ತಪ್ಪಿಸಿ ವಾಹನ ಚಲಾಯಿಸಿ ಸುಸ್ತಾಗುತ್ತಿದ್ದಾರೆ. ಇದನ್ನು ಪ್ರತಿದಿನವೂ ಅಧಿಕಾರಿಗಳೂ ಕಂಡೂ ಕಾಣದಂತೆ ಮುಂದೆ ಸಾಗುತ್ತಿದ್ದಾರೆ. ಕಳೆದ ವರ್ಷ ಈ ರಸ್ತೆಗೆ ಚೌಕಾಕಾರದ ಡಾಂಬರಿನ ತೇಪೆ ಹಾಕುವ ಕೆಲಸವೂ ನಡೆದಿದೆ. ಈ ಕೆಲಸಕ್ಕೆ ಸಾರ್ವಜನಿಕರಿಂದ ವಿರೋಧವೂ ವ್ಯಕ್ತವಾಗಿತ್ತು.

    ಶಿವಮೊಗ್ಗಕ್ಕೆ ಸಮೀಪ ಮಾರ್ಗ: ಹುಬ್ಬಳ್ಳಿಯಿಂದ ಹಾವೇರಿ- ಹರಿಹರ ಮಾರ್ಗದ ಬದಲು ತಡಸ- ಹಾನಗಲ್ಲ- ಶಿಕಾರಿಪುರ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳಿದರೆ 40 ಕಿ.ಮೀ. ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳೂ ಸೇರಿ ಸರಕು ವಾಹನಗಳು ಹಾನಗಲ್ಲ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ಹೀಗಾಗಿ, ಪ್ರತಿ ವರ್ಷವೂ ಪಟ್ಟಣದಲ್ಲಿ ಈ ರಸ್ತೆ ಕುಸಿಯುತ್ತಿದ್ದು, ಇದನ್ನು ಸಂಪೂರ್ಣವಾಗಿ ಕಿತ್ತು ಅಗಲೀಕರಣಗೊಳಿಸಿ, ಭೂಮಿಯನ್ನು ಗಟ್ಟಿಗೊಳಿಸಿ ಗುಣಮಟ್ಟದ ರಸ್ತೆ ನಿರ್ವಿುಸುವ ಅಗತ್ಯವಿದೆ.

    ಇದು ಯಾರಿಗೆ ಸಂಬಂಧಿಸಿದ ರಸ್ತೆ?: ತಡಸದಿಂದ ಶಿವಮೊಗ್ಗದವರೆಗೆ ರಸ್ತೆ ನಿರ್ವಿುಸಲು ಲೋಕೋಪಯೋಗಿ ಇಲಾಖೆ ಈ ರಸ್ತೆಯನ್ನು ಕೆಶಿಪ್​ಗೆ ಎರಡು ಭಾಗವಾಗಿ ವಿಭಜಿಸಿ ಹಸ್ತಾಂತರಿಸಿದೆ. ತಡಸದಿಂದ ಹಾನಗಲ್ಲವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರಿಂದ ಲೋಕೋಪಯೋಗಿ ಇಲಾಖೆ ಈ ರಸ್ತೆಯನ್ನು ತನ್ನ ಸ್ವಾಧೀನಕ್ಕೆ ಮರಳಿ ಪಡೆದಿದೆ. ಆದರೆ, ಹಾನಗಲ್ಲಿನಿಂದ ಶಿವಮೊಗ್ಗಕ್ಕೆ ತೆರಳುವ ರಸ್ತೆ ಹಾನಗಲ್ಲ ಪಟ್ಟಣದ ಮಧ್ಯದಲ್ಲಿ ಕಾಮಗಾರಿ ಕೈಗೊಳ್ಳದಿರುವುದರಿಂದ ಕೆಶಿಪ್​ನಿಂದ ಮರಳಿ ಪಡೆಯಲು ಒಪ್ಪುತ್ತಿಲ್ಲ. ಈ ಮಧ್ಯೆ ಪಟ್ಟಣದೊಳಗಿನ ಒಂದೂವರೆ ಕಿ.ಮೀ. ರಸ್ತೆ ಬಿಟ್ಟು ಉಳಿದಿದ್ದನ್ನು ಮರಳಿ ಪಡೆಯುವಂತೆ ಕೆಶಿಪ್ ಹಾನಗಲ್ಲಿನ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದೆ ಎನ್ನಲಾಗಿದೆ. ಆದರೆ, ಇದಕ್ಕೆ ಇಲಾಖೆ ಅಧಿಕಾರಿಗಳು ಒಪ್ಪಿಗೆ ನೀಡಿಲ್ಲ. ಹೀಗಾಗಿ, ಸ್ಥಳೀಯ ಪಿಡಬ್ಲ್ಯುಡಿ ಈ ರಸ್ತೆಯ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಶಿಪ್ ಸಂಸ್ಥೆಯ ಉಪವಿಭಾಗದ ಕಚೇರಿ ಶಿಕಾರಿಪುರದಲ್ಲಿರುವುದರಿಂದ ಹಾನಗಲ್ಲಿನಲ್ಲಿ ಈ ಸಮಸ್ಯೆ ಹೇಳಿಕೊಳ್ಳಲು ಕೆಶಿಪ್ ಅಧಿಕಾರಿಗಳೂ ಕೈಗೆ ಸಿಗುತ್ತಿಲ್ಲ. ಕೆಶಿಪ್- ಪಿಡಬ್ಲ್ಯುಡಿ ಈ ಎರಡೂ ಇಲಾಖೆಗಳ ಸಮನ್ವಯದ ಕೊರತೆಯಿಂದಾಗಿ ಸಾರ್ವಜನಿಕರು, ಪ್ರಯಾಣಿಕರು ಮತ್ತು ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

    ಹಾನಗಲ್ಲ ಮೂಲಕ ಸಾಗಿರುವ ಶಿವಮೊಗ್ಗ ರಸ್ತೆಯನ್ನು ಹೆದ್ದಾರಿ ನಿರ್ಮಾಣ ಕಾಮಗಾರಿಗಾಗಿ ಕೆಶಿಪ್​ಗೆ ಹಸ್ತಾಂತರಿಸಲಾಗಿದೆ. ಆದರೆ, ಕಾಮಗಾರಿ ಪಟ್ಟಣದ ಮಧ್ಯದಲ್ಲಿ ಪೂರ್ಣಗೊಳ್ಳದ್ದರಿಂದ ನಮ್ಮ ಇಲಾಖೆಗೆ ರಸ್ತೆಯನ್ನು ಮರಳಿ ಪಡೆದಿಲ್ಲ. ನಮ್ಮ ಇಲಾಖೆಯಿಂದ ಈ ರಸ್ತೆ ದುರಸ್ತಿಗೆ ಅನುದಾನವೂ ಬರುತ್ತಿಲ್ಲ. ಕೆಶಿಪ್​ನವರು ರಸ್ತೆಯನ್ನು ಪೂರ್ಣಗೊಳಿಸಿ ನಮ್ಮ ಇಲಾಖೆಗೆ ಮರಳಿ ಹಸ್ತಾಂತರಿಸುವವರೆಗೆ ಈ ರಸ್ತೆಯ ನಿರ್ವಹಣೆ ಹೊಣೆ ಅವರದ್ದೇ.

    | ಎಂ.ಬಿ. ಬಿರಾದಾರ, ಎಇಇ, ಪಿಡಬ್ಲ್ಯುಡಿ ಹಾನಗಲ್ಲ

    ಪ್ರತಿದಿನ ಹಾನಗಲ್ಲ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ. ರಸ್ತೆಗೆ ಹಾಕಿದ್ದ ಡಾಂಬರು ಜರಿದು ಹೋಗಿ ರಸ್ತೆ ಮಧ್ಯದಲ್ಲಿ ಗುಡ್ಡೆಗಳಾಗಿ ನಿಂತಿವೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದಾರೆ. ಸಂಬಂಧಿಸಿದ ಇಲಾಖೆಯವರು ಈ ಗುಡ್ಡೆಗಳನ್ನು ತೆಗೆದು ಹಾಕಿ ರಸ್ತೆಯನ್ನು ಮರು ಡಾಂಬರೀಕರಣಗೊಳಿಸಬೇಕು.

    | ಮೆಹಬೂಬಸಾಬ್ ನಾಶಿಪುಡಿ, ವಾಹನ ಸವಾರ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts