More

    ಬೆಂಗಳೂರು ದಕ್ಷಿಣ ಪೊಲೀಸ್ ವಿಭಾಗದಲ್ಲಿ ಅಗತ್ಯ ಸಾಮಗ್ರಿ ತಲುಪಿಸಲು ಸಹಾಯವಾಣಿ ಆರಂಭ | ಎಲ್ಲ ವಾರ್ಡ್​ಗಳಲ್ಲೂ ಸೌಕರ್ಯದ ವಿಸ್ತರಣೆ

    ಬೆಂಗಳೂರು: ಲಾಕ್​ಡೌನ್ ಜಾರಿಯಲ್ಲಿದ್ದರೂ ಅಗತ್ಯ ಸಾಮಗ್ರಿಗಳ ಖರೀದಿ ನೆಪವೊಡ್ಡಿ ಮನೆಯಿಂದ ಹೊರ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಈ ಸಮಸ್ಯೆ ನಿವಾರಿಸಲು ಬಿಬಿಎಂಪಿ ‘ಹೋಂ ಡೆಲಿವರಿ ಸಹಾಯವಾಣಿ’ (080-61914960) ಆರಂಭಿಸಿದೆ. ಇದರ ಮೂಲಕ ಜನರು ದಿನಸಿ, ತರಕಾರಿ, ಔಷಧ, ಹಾಲು, ಹಣ್ಣುಗಳನ್ನು ಮನೆಗೆ ತರಿಸಿಕೊಳ್ಳಬಹುದು.

    ಕತ್ತರಿಗುಪ್ಪೆ ವಾರ್ಡ್​ನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಸಹಾಯವಾಣಿ ಆರಂಭಿಸಲಾಗಿದ್ದು, ತಕ್ಕಮಟ್ಟಿಗೆ ಯಶಸ್ವಿ ಯಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ದಕ್ಷಿಣ ಪೊಲೀಸ್ ವಿಭಾಗ ವ್ಯಾಪ್ತಿಯ ಬಸವನಗುಡಿ, ಜಯನಗರ, ಪದ್ಮನಾಭನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕೆಲವೆಡೆ ಸಹಾಯವಾಣಿಗೆ ಚಾಲನೆ ನೀಡಲಾಯಿತು. 2.5 ಲಕ್ಷ ಮನೆಗಳ 7.5 ಲಕ್ಷ ಜನರು ಸಹಾಯವಾಣಿಯ ಲಾಭ ಪಡೆಯಬಹುದು. ಮುಂದಿನ ದಿನಗಳಲ್ಲಿ ಎಲ್ಲ ವಾರ್ಡ್​ಗಳಲ್ಲಿ ವಿಸ್ತರಣೆಯಾಗುವ ಸಾಧ್ಯತೆಯಿದೆ.

    ಸ್ಥಳೀಯ ಮಳಿಗೆ ಗಳಿಂದ ಡೆಲಿವರಿ: ಹೋಂ ಡೆಲಿವರಿ ಸಹಾಯವಾಣಿ 080-61914960 ಸಂಖ್ಯೆಗೆ ಕರೆ ಅಥವಾ ವಾಟ್ಸ್​ಆಪ್ ಮೂಲಕ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಬಹುದು. ಬೆಂ. ದಕ್ಷಿಣ ಪೊಲೀಸ್ ವಿಭಾಗ ವ್ಯಾಪ್ತಿಯಲ್ಲಿರುವ 958 ದಿನಸಿ ಅಂಗಡಿ, 323 ತರಕಾರಿ ಅಂಗಡಿ ಹಾಗೂ 479 ಔಷಧ ಮಳಿಗೆ, 82 ಮಾಂಸದಂಗಡಿ ಹಾಗೂ 84 ಹಣ್ಣಿನಂಗಡಿಗಳು ಸೇರಿ ಇತರೆ ಮಳಿಗೆಗಳು ಹೋಂ ಡೆಲಿವರಿ ಸೇವೆಗೆ ನೋಂದಣಿ ಮಾಡಿಸಿವೆ. ಈ ಮಳಿಗೆಗಳಿಗೂ ಬಿಬಿಎಂಪಿ ಜಿಯೋ ಮ್ಯಾಪಿಂಗ್ ಮಾಡಿದ್ದು, ಲೊಕೇಶನ್ ಆಧರಿಸಿ ಕರೆ ಮಾಡಿದವರ ಮನೆಗಳಿಗೆ ಪಕ್ಕದ ಮಳಿಗೆಗಳಿಂದ ಅಗತ್ಯ ಪದಾರ್ಥ ತಲುಪಿಸಲಾಗುವುದು.

    ಡೆಲಿವರಿ ಶುಲ್ಕ ಇಲ್ಲ: ಡಂಜೋ, ರಾಪಿಡೋ, ಫಾರ್ಮ್​ ​ಈಜಿ, ಬಿಗ್ ಬಜಾರ್, ಸ್ಟೋರ್​ಸೆ, ಶಾಪ್​ಜಿ, ಕ್ಲೋವೆರ್ ವೆಂಚರ್ಸ್, ನಿಂಜಾ ಕಾರ್ಟ್, ಹೌಸ್​ಜಾಯ್, ಸ್ಟಾಪ್ ಕೇರ್ ಕಂಪನಿಗಳು ಹೋಂ ಡೆಲಿವರಿ ನೀಡಲಿವೆ. ಇಲ್ಲಿ ವಸ್ತುಗಳ ಮೇಲೆ ಇರುವ ಎಂಆರ್​ಪಿ ಬೆಲೆ ಹಾಗೂ ತರಕಾರಿ ದಿನಸಿಗಳಿಗೆ ಸ್ಥಳೀಯ ಅಂಗಡಿಗಳು ನಿಗದಿ ಮಾಡಿದ ಬೆಲೆಯನ್ನು ಗ್ರಾಹಕರು ಪಾವತಿಸಬೇಕು. ಪದಾರ್ಥಗಳನ್ನು ಸ್ವೀಕರಿಸಿದ ಗ್ರಾಹಕರು ಆನ್​ಲೈನ್ ಇಲ್ಲವೆ ನಗದು ರೂಪದಲ್ಲಿ ಹಣ ಪಾವತಿಸಬಹುದು.

    ಕಂದಾಯ ಸಚಿವರಿಂದ ಚಾಲನೆ: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಂದಾಯ ಸಚಿವ ಆರ್. ಅಶೋಕ್, ಮೇಯರ್ ಎಂ. ಗೌತಮ್ ಕುಮಾರ್, ಸಂಸದ ತೇಜಸ್ವಿ ಸೂರ್ಯ ಹೋಂಡೆಲಿವರಿ ಸಹಾಯವಾಣಿಗೆ ಚಾಲನೆ ನೀಡಿದರು. ಉಪಮೇಯರ್ ರಾಮಮೋಹನರಾಜು, ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್, ಜಂಟಿ ಆಯುಕ್ತ ವೀರಭದ್ರಸ್ವಾಮಿ, ಮುಖ್ಯ ಆರೋಗ್ಯಾಧಿಕಾರಿ ಡಾ. ಬಿ.ಕೆ. ವಿಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.

    ಔಷಧಕ್ಕೆ ವೈದ್ಯರ ಚೀಟಿ ಕಡ್ಡಾಯ: ಸಾರ್ವಜನಿಕರು ಆರ್ಡರ್ ಮಾಡುವ ದಿನಸಿ, ತರಕಾರಿ, ಮಾಂಸಕ್ಕೆ ‘ಎ’ ಗುಂಪು ವಸ್ತುಗಳೆಂದು ವಿಂಗಡಿಸಲಾಗಿದೆ. ಔಷಧಗಳನ್ನು ‘ಬಿ’ ಗುಂಪಿಗೆ ಸೇರಿಸಲಾಗಿದೆ. ಇವುಗಳನ್ನು ಪಡೆಯಲು ವೈದ್ಯರಿಂದ ಸಲಹೆ ಪಡೆದ ಚೀಟಿಗಳನ್ನು ವಾಟ್ಸ್​ಆಪ್ ಮೂಲಕ ಕಳಿಸುವುದು ಕಡ್ಡಾಯವಾಗಿದೆ.

    ಬೆಂ. ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಹೋಂ ಡೆಲಿವರಿ ಸಹಾಯವಾಣಿ ಜಾರಿಗೊಳಿಸಲಾಗಿದೆ. ಜನರು ಮನೆಯಿಂದ ಹೊರಬಾರದೆ, ಸಹಾಯವಾಣಿಗೆ ಕರೆ ಅಥವಾ ವಾಟ್ಸ್​ಆಪ್ ಮೂಲಕ ಅಗತ್ಯ ಸಾಮಗ್ರಿ ಆರ್ಡರ್ ಮಾಡಿ ಸೇವೆ ಪಡೆದುಕೊಳ್ಳಬಹುದು.
    | ತೇಜಸ್ವಿ ಸೂರ್ಯ ಸಂಸದ

    ಬಾಡಿಗೆಗೆ ಒತ್ತಡ ಬೇಡ: ವಲಸೆ ಮತ್ತು ಕೂಲಿ ಕಾರ್ವಿುಕರು ವಾಸವಿರುವ ಮನೆಗಳು ಹಾಗೂ ಸ್ಥಳದ ಒಂದು ತಿಂಗಳ ಬಾಡಿಗೆ ಪಾವತಿಗೆ ಸಂಬಂಧಪಟ್ಟ ಮಾಲೀಕರು ಒತ್ತಡ ಹೇರದಂತೆ ಬಿಬಿಎಂಪಿ ನಿರ್ದೇಶನ ನೀಡಬೇಕು. ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಕಾಮಗಾರಿಗಳು ಮತ್ತು ಖಾಸಗಿ ಬಿಲ್ಡರ್​ಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ವಿುಕರ ಆಶ್ರಯಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

    ಕರೊನಾ ಹೊಕ್ಕೈತಿ…!: ಕೆಎಎಸ್ ಅಧಿಕಾರಿ, ನಟ ಸಂಗಮೇಶ ಉಪಾಸೆ ಬರೆದು- ಹಾಡಿರುವ ‘ಕರೊನ ಹೊಕ್ಕೈತಿ ಮೈಯಾಗ, ಎಲ್ರಿಗೂ ಕೂಡಿಸೈತಿ ಮನಿಯಾಗ’ ಎಂಬ ಹಾಡು ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಖುಷಿ ಕ್ರಿಯೇಷನ್, ಎಸ್.ಆರ್. ಹೈಟೆಕ್ ವಿಷನ್ಸ್ ಕೈ ಜೋಡಿಸಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಪೌರಕಾರ್ವಿುಕ, ವೈದ್ಯ ಮತ್ತು ಪೊಲೀಸ್ ಕಾನ್​ಸ್ಟೆಬಲ್​ಗಳಿಂದ ಬಿಡುಗಡೆ ಮಾಡಿಸಲಾಗಿದೆ. ಯುಟ್ಯೂಬ್​ನಲ್ಲಿ (https://youtu.be/DPvnBLH_q1U) ವೀಕ್ಷಿಸಬಹುದು.

    ಗೋಶಾಲೆಗೆ ಸಿಕ್ತು ಸರ್ಕಾರದ ನೆರವು: 4 ಲೋಡ್ ಮೇವು, ಪಕ್ಷಿಗಳಿಗೆ 24 ಮೂಟೆ ಅಕ್ಕಿ, ಗೋಧಿ ವಿತರಣೆ, 6 ಲಕ್ಷ ರೂ. ದೇಣಿಗೆ ನೀಡಿದ ರಾಜಸ್ಥಾನ್ ಯೂತ್ ಅಸೋಸಿಯೇಷನ್

     

    ಸೋಷಿಯಲ್ ಡಿಸ್ಟೆನ್ಸ್​ ನಿರ್ವಹಿಸದೆ ವ್ಯಾಪಾರ ಮಾಡಿದ್ದಕ್ಕೆ ಕೇಸ್!: ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬೀಳುತ್ತಿರುವ ಜನರ ನಡವಳಿಕೆಗೆ ಅಂಗಡಿ ಮಾಲೀಕರೇ ಹೊಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts