More

    ಒಕ್ಕಲಿಗ ಸಮುದಾಯದ ಉದ್ಯಮದಾರರಿಗೆ ಸಹಾಯ: ಡಿಕೆಶಿ ಹೇಳಿಕೆ

    ಬೆಂಗಳೂರು: ಒಕ್ಕಲಿಗ ಸಮುದಾಯದ ಉದ್ದಿಮೆದಾರರನ್ನು ಒಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಫಸ್ಟ್ ಸರ್ಕಲ್ ಸೊಸೈಟಿ ಆಯೋಜಿಸಿರುವ ಮೂರು ದಿನಗಳ ‘ಉದ್ಯಮಿ ಒಕ್ಕಲಿಗ’ ಸಮಾವೇಶಕ್ಕೆ ಶುಕ್ರವಾರ ಚಾಲನೆ ದೊರೆಯಿತು.

    ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಅದರಂತೆ, ನೀವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಯಶಸ್ಸು ಕಾಣುತ್ತೀರಿ. ನಾವೆಲ್ಲಾ ಭೂಮಿ ತಾಯಿ ಮಕ್ಕಳು. ಒಕ್ಕಲಿಗ ಎಂಬ ಹೆಸರು ಬಂದಿರುವುದೇ ನಮ್ಮ ಭಾಗ್ಯ.ಭೂಮಿಗೂ ಸಮುದಾಯಕ್ಕೂ ಅವಿನಾಭಾವ ಸಂಬಂಧವಿದೆ. ದೇಶಕ್ಕೆ ಕೃಷಿಕ, ಕಾರ್ಮಿಕ, ಶಿಕ್ಷಕ ಹಾಗೂ ಸೈನಿಕ ಬಹಳ ಮುಖ್ಯ. ಇವರೆಲ್ಲರೂ ಇದ್ದರಷ್ಟೇ ಸಮಾಜ ಸುಸ್ಥಿರವಾಗಿರಲಿದೆ ಎಂದರು.

    ಒಕ್ಕಲಿಗ ಸಮಾಜದ ಉದ್ಯಮಿಗಳೆಲ್ಲರೂ ಒಟ್ಟಿಗೆ ಸೇರಿರುವುದು ಉತ್ತಮ ಬೆಳವಣಿಗೆ. ಹಿಂದೆಯೇ ಆಗಬೇಕಿದ್ದ ಸಮಾವೇಶ ಈಗಲಾದರೂ ನಡೆಯುತ್ತಿರುವುದು ಸಂತಸ ತಂದಿದೆ.ಸಾಕಷ್ಟು ಪೆಟ್ಟು ತಿಂದು ನಿಮ್ಮೆಲ್ಲರ ಸಹಕಾರ, ಆಶೀರ್ವಾದದಿಂದ ಮುಂದೆ ನಿಂತು ಮಾತನಾಡುವ ಶಕ್ತಿ ಬಂದಿದೆ. ನಿಮ್ಮ ಬಳಿ ಕಲಿಯಲು ನನಗೂ ಆಸೆಯಿದೆ. ಬಿಡುವು ಮಾಡಿಕೊಂಡು ಬಂದು ನಿಮ್ಮ ಪರಿಚಯ ಮಾಡಿಕೊಂಡು ನನ್ನಿಂದಾಗುವ ಸಹಾಯ ಮಾಡುತ್ತೇನೆ.ಈ ಮೂಲಕ ಡಿಕೆಶಿ ಇದ್ದಾನೆ ಎಂಬ ಸಂದೇಶ ರವಾನಿಸಲು ಬಂದಿದ್ದೇನೆ. ಉದ್ಯಮದಾರರ ಕಷ್ಟಕಾಲದಲ್ಲಿ ನಾವು ಸಹಾಯ ಮಾಡಬೇಕಾಗುತ್ತದೆ. ನಿಮಗೆ ಮಾರ್ಗದರ್ಶನ ಹಾಗೂ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದರು. ಸಚಿವ ವೆಂಕಟೇಶ್, ಹೊಸೂರು ಕ್ಷೇತ್ರದ ಶಾಸಕ ವೈ.ಪ್ರಕಾಶ್, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಕಾಂಗ್ರೆಸ್ ಮುಖಂಡೆ ಕುಸುಮಾ ಹನುಮಂತರಾಯಪ್ಪ, ನಿರ್ದೇಶಕ ಟಿ.ಎಸ್.ನಾಗಭರಣ ಸೇರಿ ನೂರಾರರು ಉದ್ದಿಮೆದಾರರು ಉಪಸ್ಥಿತರಿದ್ದರು.

    ರೈತರಿಗೆ ಶೀಘ್ರ ಬರ ಪರಿಹಾರ; ವಾರದೊಳಗೆ 30 ಲಕ್ಷ ರೈತರಿಗೆ ಮೊದಲ ಕಂತಿನ ಹಣ

    ಬೆಂಗಳೂದತ್ತ ವಿಶ್ವವೇ ತಿರುಗಿದೆ
    ಬೆಂಗಳೂರುನ್ನು ಭಾರತ ಸೇರಿ ವಿಶ್ವವೇ ತಿರುಗಿನೋಡುತ್ತಿದೆ. ಮಾನವ ಸಂಪನ್ಮೂಲ, ನವೋದ್ಯಮ, ಶಿಕ್ಷಣ, ಆರೋಗ್ಯ, ಪರಿಸರ ಆಕರ್ಷಣೆಯಾಗಿದೆ. ಬೆಂಗಳೂರಿಗರು ನಾಡಪ್ರಭು ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಹಾಗೂ ಎಸ್.ಎಂ.ಕೃಷ್ಣ ಅವರನ್ನು ಸದಾ ನೆನಪು ಮಾಡಿಕೊಳ್ಳಬೇಕು. ಇವರು ನಮ್ಮ ಸಮಾಜದವರೇ ಎಂದು ಡಿಕೆಶಿ ಹೇಳಿದರು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ತಮ್ಮದೇ ರೀತಿಯಲ್ಲಿ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಆ ಸ್ಥಾನವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತುಂಬಿದ್ದು, ಹಿಂದಿನವರಿಗಿಂತಲೂ ಉತ್ತಮವಾಗಿ ಸಮಾಜವನ್ನು ಬೆಳಗಿಸುವ ವಿಶ್ವಾಸ ನನಗಿದೆ. ನಿಮ್ಮದು ಗಟ್ಟಿ ಧ್ವನಿಯಾಗಿರಲಿ. ಇಡೀ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. ನಮ್ಮಂಥವರು ತಪ್ಪು ಮಾಡಿದರೂ ನೇರವಾಗಿ ತಪ್ಪು ಎಂದು ಹೇಳುವ ಶಕ್ತಿ ನಿಮಗಿದೆ. ರಾಜ್ಯ ಒಕ್ಕಲಿಗರ ಸಂಘದವರು ಹತ್ತಾರು ಸಂಸ್ಥೆಗಳನ್ನು ಕಟ್ಟಿ ಉದ್ಯೋಗ ಸೃಷ್ಟಿಸಿ, ಮಾರ್ಗದರ್ಶನ ನೀಡಬೇಕು. ಮತ್ತೆ ಕಿತ್ತಾಡಿದರೆ ಆಡಳಿತಾಧಿಕಾರಿ ತಂದು ಕುರಿಸುವುದಾಗಿ ಎಚ್ಚರಕೆ ನೀಡಿದ್ದೇನೆ ಎಂದು ಹೇಳಿದರು.

    ಉದ್ಯೋಗ ನೀಡುವ ಪ್ರಭುಗಳಾಗಿ:
    ನಮ್ಮ ಸಮುದಾಯ ಅನ್ನ ನೀಡುವುದಕ್ಕೆ ಹೆಸರುವಾಸಿ. ಅದೇರೀತಿ, ಕೇವಲ ಕೃಷಿಗೆ ಸೀಮಿತವಾಗದೆ ನೂರಾರು ಜನರಿಗೆ ಉದ್ಯೋಗ ನೀಡುವ ಮೂಲಕ ಉದ್ದಿಮೆಗಳನ್ನು ಕೊಡುವಂಥ ಪ್ರಭುಗಳಾಗಿ ಒಕ್ಕಲಿಗ ಸಮುದಾಯ ಬೆಳೆಯಬೇಕಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು. ಸಮುದಾಯದ ಉದ್ಯಮದಾರರು ಒಟ್ಟಿಗೆ ಸೇರಿಕೊಂಡಿರುವುದು ಗಮನಾರ್ಹ. ಬದಲಾದ ಕಾಲಘಟ್ಟದಲ್ಲಿ ವ್ಯವಸಾಯದ ಜತೆಗೆ ಉದ್ದಿಮೆ ಮೂಲಕ ತಮ್ಮ ಬುದುಕುನ್ನು ವಿಸ್ತರಿಸಿಕೊಂಡು ಹೋಗುವುದು ಮುಖ್ಯವಾಗಿದೆ. ಗಂಗರು 850 ವರ್ಷ ಕಾಲ ರಾಜ್ಯವನ್ನು ಆಳ್ವಿಕೆ ನಡೆಸಿದ್ದವರು. ಇದನ್ನು ಮುಂದುವರಿಸಿಕೊಂಡು ಬಂದವರು ನಾಡಪ್ರಭು ಕೆಂಪೇಗೌಡ ಸೇರಿ ಇತರ ರಾಜರು ಎಂದು ಶ್ರೀಗಳು ಹೇಳಿದರು.

    ಉತ್ಪನ್ನಗಳ ಪ್ರದರ್ಶನ: 
    ಸಮಾವೇಶದಲ್ಲಿ 100ಕ್ಕೂ ಅಧಿಕ ಸಮುದಾಯದ ಉದ್ಯಮದಾರರು ಮಳಿಗೆಗಳನ್ನು ಸ್ಥಾಪಿಸಿ ಪ್ರಾತ್ಯಕ್ಷಿಕೆಗಳ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಒಕ್ಕಲಿಗ ಆಹಾರ ಪದ್ಧತಿ ಹಾಗೂ ಸಂಸ್ಕೃತಿಯನ್ನು ಪರಿಚಯಿಸಲಾಯಿತು. ಕರ್ನಾಟಕ-ತಮಿಳುನಾಡಿನ ಒಕ್ಕಲಿಗ ಉದ್ಯಮಿಗಳು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು. ಚೆನ್ನೈ, ಕೊಯಮತ್ತೂರು, ಕೃಷ್ಣಗಿರಿ, ಹೊಸೂರು, ಥೇಣಿ ಮತ್ತು ಕಂಬಂ ಉದ್ದಿಮೆದಾರರಿದ್ದರು. ಮುಂದಿನ ಎರಡು ದಿನ ಕೃಷಿ, ಆರೋಗ್ಯ, ಶಿಕ್ಷಣ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಗಳು, ಮನರಂಜನೆ, ನವೋದ್ಯಮ, ಆಹಾರ, ಆತಿಥ್ಯ ಸೇರಿ ಎಲ್ಲ ಕ್ಷೇತ್ರಗಳ ಬಗ್ಗೆ ತಜ್ಞರು ವಿಸ್ತೃತ ಚರ್ಚೆ ನಡೆಯಲಿದೆ. ಗಂಗವಾಡಿ ರಾಜವಂಶದ ಲಾಂಛನ ಸಮಾವೇಶದ ಆಕರ್ಷಣೆ ಕೇಂದ್ರವಾಗಿದೆ. ಒಕ್ಕಲಿಗ ವ್ಯಾಪಾರಿಗಳ ಡಿಜಿಟಲ್ ಮಾರುಕಟ್ಟೆ ಹಾಗೂ ಉದ್ಯಮಿಗಳ ಜಾಲತಾಣ ಲೋಕಾರ್ಪಣೆಗೊಳಿಸಲಾಗುತ್ತದೆ.

    ಕೋಟ್​​:
    ಸಂಘಟಿತರಾದರೆ ರಾಜಕೀಯ ನಾಯಕರು ಸೇರಿ ಎಲ್ಲರೂ ಬರುತ್ತಾರೆ. ಅದರಂತೆ, ಒಕ್ಕಲಿಗರು ಸಂಘಟಿತರಾಗಿ ಪ್ರಮುಖ ನಿರ್ಣಯ ತೆಗೆದುಕೊಂಡು ಹೋರಾಟ ಮಾಡುವ ಅವಶ್ಯಕತೆ ಇದೆ. ಇಲ್ಲದಿದ್ದರೆ ನಿವ್ಯಾರು ಉಳಿಯುವುದಿಲ್ಲ. ಹಣದ ಆಸೆಗಾಗಿ ಸಮುದಾಯದ ಜನರು ಜಮೀನು ಮಾರಿಕೊಳ್ಳಬೇಡಿ. ಶ್ರೀ ಬಾಲಗಂಗಾಥರನಾಥ ಸ್ವಾಮೀಜಿ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದರು. ಬಳಿಕ, ಎಚ್.ಡಿ.ದೇವೇಗೌಡ. ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ ಹಾಗೂ ಸದಾನಂದಗೌಡ ಅವರು ಸಿಎಂಗಳಾದರು. ಡಿ.ಕೆ.ಶಿವಕುಮಾರ್ ಡಿಸಿಎಂ ಆಗಿದ್ದಾರೆ.
    | ಜಿ.ಟಿ.ದೇವೇಗೌಡ, ಶಾಸಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts