More

    ಕರ್ಮಯೋಗಿಗಳಿಂದ ವಸುಧೈವ ಕುಟುಂಬಕಂ ಸಾಕಾರ

    ಲಕ್ಷಾಂತರ ಜನರಿಗೆ ಊಟ, ಆಹಾರಧಾನ್ಯಗಳ ಪೊಟ್ಟಣ ತಲುಪಿಸುವುದು ಭಾರಿ ಸವಾಲಿನ ಕೆಲಸ. ಕರೊನಾದ ಹೊತ್ತಲ್ಲಿ ಸಾಮಾನ್ಯ ಜನರು ಸೇವೆಯ ಶಕ್ತಿಯನ್ನು ಸಾಬೀತುಪಡಿಸಿದರು. ಆ ಕೈಗಳೆಲ್ಲ ಒಂದಾಗಿದ್ದರಿಂದಲೇ ನೆರವನ್ನು ತೀವ್ರ ಹಾಗೂ ಪರಿಣಾಮಕಾರಿ ರೂಪದಲ್ಲಿ ತಲುಪಿಸಲು ಸಾಧ್ಯವಾಯಿತು.

    ಕರ್ಮಯೋಗಿಗಳಿಂದ ವಸುಧೈವ ಕುಟುಂಬಕಂ ಸಾಕಾರಬೆಳಗ್ಗೆ 9 ಗಂಟೆಯ ಸಮಯ… ಬಸ್ಸಿಲ್ಲ, ಆಟೋ ಇಲ್ಲ, ಕ್ಯಾಬ್, ಮೆಟ್ರೋ ಸೇವೆ ಯಾವುದೂ ಇಲ್ಲ. ಆದರೂ, ಹಲವರು ಎರಡು-ಮೂರು ಕಿಲೋಮೀಟರ್ ನಡೆದುಕೊಂಡೇ ಬರುತ್ತಾರೆ. ಇನ್ನು ಕೆಲವರು ದ್ವಿಚಕ್ರ ವಾಹನದ ಮೂಲಕ. ಹೊರಗಡೆ ವಾಹನ ನಿಲ್ಲಿಸಿ, ಗೇಟಿನಲ್ಲಿ ಎಂಟ್ರಿ ಆದಾಕ್ಷಣ ಸ್ಯಾನಿಟೈಸರ್​ನಿಂದ ಕೈ ಶುಚಿಗೊಳಿಸಿಕೊಳ್ಳುವುದು, ಎಂಟ್ರಿ ಪುಸ್ತಕದಲ್ಲಿ ಹೆಸರು ಬರೆದು, ರುಜು ಮಾಡುವುದು. ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಒಂದೆಡೆ ಇರಿಸುವುದು, ಬಳಿಕ ಕೋಣೆಗೆ ಹೋದಾಕ್ಷಣ ಮತ್ತೆ ಸೋಪಿನಿಂದ 20 ಸೆಕೆಂಡುಗಳ ಕಾಲ ಕೈ ತೊಳೆಯುವುದು. ಅಲ್ಲಿಂದ ಪಕ್ಕದ ಹಾಲ್​ಗೆ ಪ್ರವೇಶ. ಕೈಗವಸು, ಮುಖಗವಸು, ವಿಶೇಷ ಕ್ಯಾಪ್ ಧರಿಸಿಕೊಂಡು, ಮತ್ತೆ ನಾಲ್ಕುಹನಿ ಸ್ಯಾನಿಟೈಸರ್​ನಿಂದ ಕೈತೊಳೆದು ಯಾರನ್ನೂ ಮುಟ್ಟದೆ, ಎಲ್ಲೂ ತಾಗಿಸಿಕೊಳ್ಳದೆ ಒಳ ಪ್ರವೇಶಿಸುವುದು. ಗೋಡೆ, ಬಾಗಿಲುಗಳನ್ನೂ ಮುಟ್ಟದೆ ಅವರಿಗೆ ನಿಗದಿ ಮಾಡಿರುವ ಸ್ಥಳಕ್ಕೆ ಹೋಗಿ, ಕುಳಿತು ಕೆಲಸ ಆರಂಭಿಸುವುದು… ಹೀಗೆ ಒಂದು ದಿನ ಅಲ್ಲ, 56 ದಿನಗಳ ಕಾಲ ನಡೆಯಿತು.

    ಇದು ಯಾವುದೋ ಸಿನಿಮಾದ ಆರಂಭಿಕ ದೃಶ್ಯ ಇರಬಹುದೇ ಎಂದು ಗಲಿಬಿಲಿಗೊಳ್ಳಬೇಡಿ. ಲಾಕ್​ಡೌನ್ ಅವಧಿಯಲ್ಲಿ ವಲಸೆ ಕಾರ್ವಿುಕರು, ದಿನಗೂಲಿ ನೌಕರರು. ಪರವೂರಿಂದ ಬೆಂಗಳೂರಿಗೆ ಬಂದ ವಿದ್ಯಾರ್ಥಿಗಳು ಊಟಕ್ಕಾಗಿ ಪರದಾಡುತ್ತಿದ್ದ ದಯನೀಯ ಸ್ಥಿತಿಯ ಅರಿವು ಬಹುತೇಕರಿಗೆ ಇದೆ. ಅಂಥ ಕಾರ್ವಿುಕರಿಗಾಗಿ ಅದಮ್ಯ ಚೇತನದ ಬೆಂಗಳೂರು ‘ಅನ್ನಪೂರ್ಣ’ ಅಡುಗೆಮನೆ ಯಲ್ಲಿ ಸಿದ್ಧಗೊಂಡ ಊಟ, ಅದನ್ನು ಅತ್ಯಂತ ಶುಚಿಪದ್ಧತಿಯಿಂದ ಪ್ಯಾಕ್ ಮಾಡಿದ ಸ್ವಯಂಸೇವಕರ ಸೇವಾತತ್ಪರತೆ ಮತ್ತು ಈ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ವಹಿಸಿದ ಮುಂಜಾಗ್ರತೆಯ ಪರಿಯನ್ನು ಈ ಮೇಲಿನಂತೆ ವಿವರಿಸಿದೆ ಅಷ್ಟೆ.

    ಇದನ್ನೂ ಓದಿ   ಬರಲಿದೆ ಆನ್‌ಲೈನ್ ಶೂಟಿಂಗ್ ಲೀಗ್…

    ಮತ್ತಷ್ಟು ಸನ್ನಿವೇಶ ನೋಡೋಣ. ಅಡುಗೆ ಸಿದ್ಧಗೊಂಡ ತಕ್ಷಣ ಅದನ್ನು 30 ಕೆಜಿಯ ಸ್ಟೀಲ್ ಡಬ್ಬದಲ್ಲಿ ತುಂಬಿಸಲಾಗುತ್ತಿತ್ತು. ಹಬೆಯಾಡುವ, ಕನಿಷ್ಠ 150 ಡಿಗ್ರಿ ಸೆಲ್ಸಿಯಸ್ ಉಷ್ಣತೆಯ ಅಡುಗೆಯನ್ನು ಮತ್ತೆ ಸಣ್ಣ ಸಣ್ಣ ಡಬ್ಬಿಗಳಿಗೆ ತುಂಬಿಸುವ ಕೆಲಸ ಆಗಬೇಕು. ಸೌಟಿನ ಸಹಾಯದಿಂದ ಡಬ್ಬಗಳಿಗೆ ತುಂಬಿಸಿ, ಅದನ್ನು ಭದ್ರವಾಗಿ ಮುಚ್ಚಲಾಗುತ್ತಿತ್ತು. ಹೀಗೆ ಗಂಟೆಗೆ ಸರಸರನೆ 100-120 ಡಬ್ಬಗಳು ಭರ್ತಿ ಆಗುತ್ತಿದ್ದವು. ಪ್ರತಿ 15-20 ನಿಮಿಷಕ್ಕೊಮ್ಮೆ ಒಬ್ಬರು ಬಂದು ‘ಎಷ್ಟು ಡಬ್ಬ ಪ್ಯಾಕ್ ಆಗಿದೆ ಕೊಟ್ಟುಬಿಡಿ’ ಅಂತ ಹೇಳಿ, ಅವುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಇದೆಲ್ಲ ನಡೆದಿದ್ದು ಬಿರುಬೇಸಿಗೆಯ ಏಪ್ರಿಲ್-ಮೇ ತಿಂಗಳಲ್ಲಿ. ಭಾರಿ ಸೆಕೆ. ಅದರ ಮಧ್ಯೆ ಮುಖಕ್ಕೆ ಮಾಸ್ಕು, ಕೈಗೆ ಗ್ಲೌಸು, ತಲೆಗೆ ಟೊಪ್ಪಿಗೆ, ಅಡುಗೆಮನೆಯ ಬಿಸಿಹವೆ. ಎಲ್ಲ ಸ್ವಯಂಸೇವಕರು ಆರಡಿ ಅಂತರದಲ್ಲಿ ಕುಳಿತು ವೈಯಕ್ತಿಕ ಅಂತರ ಕಾಪಾಡಿದ್ದರಿಂದ ಪರಸ್ಪರ ಪರಿಚಯವೂ ಆಗುತ್ತಿರಲಿಲ್ಲ. ಮುಖಕ್ಕೆ ಮಾಸ್ಕು ಧರಿಸುತ್ತಿದ್ದರಿಂದ ಗುರುತು ಸಿಗುತ್ತಿರಲಿಲ್ಲ. ಮಾತುಗಳಂತೂ ಇರಲೇ ಇಲ್ಲ. ಕೆಲಸ ಮತ್ತು ಕೆಲಸ…. ಅಷ್ಟೆ.

    ಬಿಸಿ ಆಹಾರ, ಭಾರವಾದ ಸೌಟು… ತುಂಬಿಸುತ್ತಲೇ ಹೋಗಬೇಕು. ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿತ್ತು. 9 ಗಂಟೆಗೆ ಹೀಗೆ ಕೆಲಸ ಆರಂಭವಾದರೆ, 11.30ರ ಹೊತ್ತಿಗೆ ಒಬ್ಬೊಬ್ಬರು 300-350 ಡಬ್ಬಗಳನ್ನು ತುಂಬಿಸುತ್ತಿದ್ದರು. 11.30ಕ್ಕೆ ಸರಿಯಾಗಿ ಚಹಾ ವಿರಾಮ. ಆಗಲೂ, ಎಷ್ಟೋ ಜನ ತಮ್ಮ ಕೆಲಸ ಇನ್ನೂ ಆಗಿಲ್ಲ ಅಂತ, ಕೆಲಸದಲ್ಲೇ ಮುಳುಗಿರುತ್ತಿದ್ದರು. ಕೆಲವರು ಚಹಾಕ್ಕೆ ತೆರಳಿದರೂ, ಅಡುಗೆಮನೆಯೊಳಗೆ ಧರಿಸುವ ಪಾದರಕ್ಷೆಯನ್ನು ಅಲ್ಲೇ ಬಿಟ್ಟು, ಹೊರಗೆ ಬಿಟ್ಟುಬಂದಿದ್ದ ಪಾದರಕ್ಷೆ ಧರಿಸಿ, ಪಕ್ಕದ ಊಟದ ಕೋಣೆಗೆ ತೆರಳುತ್ತಿದ್ದರು. ಅಲ್ಲಿ ಕೈಯಲ್ಲಿನ ಗ್ಲೌಸ್ ಕಳಚಿ, ಕಸದ ಡಬ್ಬಿಗೆ ಹಾಕುತ್ತಿದ್ದರು. ತೊಳೆದ ಲೋಟವನ್ನು ಮತ್ತೊಮ್ಮೆ ತೊಳೆದು ಚಹಾ, ಕಾಫಿ ಸೇವಿಸುತ್ತಿದ್ದರು. ಆ ಹೊತ್ತಲ್ಲಿ ಯಾರೂ ಫ್ಲಾಸ್ಕ್ ರ್ಸ³ಸುತ್ತಿರಲಿಲ್ಲ. ಫ್ಲಾಸ್ಕ್​ನ ನಲ್ಲಿ ತಿರುಗಿಸಲೆಂದೇ ಒಬ್ಬ ವ್ಯಕ್ತಿಯನ್ನು ನಿಯೋಜಿಸಲಾಗಿತ್ತು. ನೀರು, ಕಾಫಿ ಕುಡಿದು ಹೊಸ ಗ್ಲೌಸ್ (ಅವಶ್ಯವಿದ್ದಲ್ಲಿ ಹೊಸ ಮಾಸ್ಕ್ ಕೂಡ) ಧರಿಸಿಕೊಂಡು, ಕೈ ತೊಳೆದುಕೊಂಡು ಅಡುಗೆಮನೆ ಪ್ರವೇಶಿಸುತ್ತಿದ್ದರು.

    ಇದನ್ನೂ ಓದಿ   ಬೌದ್ಧರ ಕೆತ್ತನೆಗಳ ವಿರೂಪ: ಪಾಕ್‌ಗೆ ತೀಕ್ಷ್ಣ ಸಂದೇಶ ರವಾನಿಸಿದ ಭಾರತ

    ಈ ಮುಂಜಾಗ್ರತಾ ಕ್ರಮಗಳನ್ನೆಲ್ಲ ಮರೆಯಬಾರದು ಅಥವಾ ಅದನ್ನು ಅನುಸರಿಸುವಾಗ ಲೋಪಗಳು ಆಗಬಾರದು ಎಂಬ ಕಾರಣಕ್ಕೆ ಮತ್ತೊಂದು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಅದೇನೆಂದರೆ, ವಿಮಾನ ಹತ್ತಿ, ಅದರ ಹಾರಾಟಕ್ಕೆ ಮುಂಚೆ ಸೂಚನೆಗಳನ್ನು ಘೋಷಿಸುವಂತೆ ಇಲ್ಲಿಯೂ ಪ್ರವೇಶದ ಹೊತ್ತಲ್ಲೇ ಸೂಚನೆಗಳ ರೆಕಾರ್ಡೆಡ್ ಆಡಿಯೋವನ್ನು ಹಾಕಲಾಗುತ್ತಿತ್ತು. ಮೂರು ನಿಮಿಷಗಳ ಈ ಸೂಚನಾ ಆಡಿಯೋವನ್ನು ಕಾಫಿವಿರಾಮದ ಹೊತ್ತಲ್ಲಿ ಮತ್ತೊಮ್ಮೆ ಕೇಳಿಸಲಾಗುತ್ತಿತ್ತು. ಒಟ್ಟಾರೆ, ದಿನಕ್ಕೆ ಮೂರ್ನಾಲ್ಕು ಬಾರಿ ಅದನ್ನು ಹಾಕುತ್ತಿದ್ದರಿಂದ ಸ್ವಯಂಸೇವಕರು ಆ ಸೂಚನೆಗಳನ್ನೆಲ್ಲ ಚಾಚೂತಪ್ಪದೆ ಪಾಲಿಸಿಕೊಂಡು ಹೋಗಲು ಸಾಧ್ಯವಾಯಿತು.

    ಅದಮ್ಯ ಚೇತನದ ಅಡುಗೆಮನೆಯಲ್ಲಿ ಊಟ ಸಿದ್ಧವಾಗುತ್ತಿದ್ದರೆ, ಇದರ ಎದುರಿನಲ್ಲೇ ಇರುವ ಕಲ್ಯಾಣ ಮಂಟಪದಲ್ಲಿ ದಿನಸಿ ಕಿಟ್​ಗಳ ಪ್ಯಾಕಿಂಗ್ ನಡೆಯುತ್ತಿತ್ತು. ಅಲ್ಲಿ ಸ್ವಯಂಸೇವಕರು ಪ್ರವೇಶಿಸುವಾಗಲೂ, ಈ ಮೇಲ್ಕಂಡ ನಿಯಮಗಳನ್ನೆಲ್ಲ ಪಾಲಿಸಲಾಗುತ್ತಿತ್ತು. ಅಲ್ಲಿ ಅಕ್ಕಿ, ಬೇಳೆ, ಗೋಧಿಹಿಟ್ಟು, ಸಕ್ಕರೆ, ರವೆ ಮೂಟೆಗಳು ಸಂಗ್ರಹವಾಗಿದ್ದವು. ಅಲ್ಲಿ ಮೂರು ಕೆಜಿ ಅಕ್ಕಿ, 1 ಕೆಜಿ ಬೇಳೆ, 2 ಕೆಜಿ ಗೋಧಿ ಹಿಟ್ಟು, ಇತರ ದಿನಸಿ ಸೇರಿಸಿ ಕಿಟ್ ತಯಾರಿಸಲಾಗುತ್ತಿತ್ತು. 25 ಕಿಟ್​ಗಳು ಸಿದ್ಧಗೊಂಡಾಕ್ಷಣ ಅದನ್ನು ದೊಡ್ಡ ಚೀಲಕ್ಕೆ ತುಂಬಿಸಲಾಗುತ್ತಿತ್ತು. ಮತ್ತೊಂದು ತಂಡದವರು, ಸಂಖ್ಯೆಯನ್ನು ನಮೂದಿಸಿ ಪ್ಯಾಕಿಂಗ್ ಮಾಡುತ್ತಿದ್ದರು. ಈವರೆಗೆ 24,100 ಕಿಟ್​ಗಳನ್ನು (ಜೂನ್ 2ರ ಹೊತ್ತಿಗೆ) ಸಿದ್ಧಪಡಿಸಿ, ವಿತರಿಸಲಾಗಿದೆ.

    ಇದನ್ನೂ ಓದಿ   ಚೀನಾ ವಿಮಾನಗಳಿಗೆ ಪ್ರವೇಶ ನಿಷೇಧಿಸಿದ ಅಮೆರಿಕ!

    ಕಾರ್ವಿುಕರಿಗೆ ಊಟ ನೀಡುವಾಗ ಶುಚಿ-ರುಚಿಗೆ ಪ್ರಧಾನ ಆದ್ಯತೆ ನೀಡಲಾಗಿತ್ತು. ಪೌಷ್ಟಿಕ ಊಟ ಮಾತ್ರವಲ್ಲ, ವೈವಿಧ್ಯಮಯ ಊಟವನ್ನೂ ಒದಗಿಸಲು ಸಾಧ್ಯವಾಯಿತು ಎಂಬುದು ಸಮಾಧಾನದ ವಿಷಯ. ಟೊಮಾಟೋ ಭಾತ್, ಪಲಾವ್, ಚಿತ್ರಾನ್ನ, ಪುಳಿಯೋಗರೆ, ವಾಂಗಿ ಭಾತ್, ಕ್ಯಾಪ್ಸಿಕಂ ಭಾತ್-ಹೀಗೆ ವೈವಿಧ್ಯ ಆಹಾರ ಒದಗಿಸಲಾಯಿತು. ಊಟದಲ್ಲಿ ಮಾತ್ರವಲ್ಲ ಕಿಟ್​ನಲ್ಲೂ ವೈವಿಧ್ಯವಿತ್ತು. ಬಿಹಾರದಿಂದ ವಲಸೆ ಬಂದ ಕಾರ್ವಿುಕರಿಗೆ ಗೋಧಿಹಿಟ್ಟು ಜಾಸ್ತಿ ಹಾಕಿ ಕೊಡಲಾಗುತ್ತಿತ್ತು. ನಾಗಾಲ್ಯಾಂಡ್, ಅಸ್ಸಾಂ ಸೇರಿ ಈಶಾನ್ಯ ಭಾರತದ ಕಾರ್ವಿುಕರಿಗೆ ಅಕ್ಕಿ ಜಾಸ್ತಿ ನೀಡಲಾಗುತ್ತಿತ್ತು. ಹೀಗೆ ಎಂಟು ಬಗೆಯ ಕಿಟ್​ಗಳನ್ನು ತಯಾರು ಮಾಡಲಾಯಿತು.

    ಬೆಳಗ್ಗೆ 11 ಗಂಟೆಯಿಂದ ಊಟ ರವಾನಿಸುವುದು ಶುರುವಾಗುತ್ತಿತ್ತು. ಅಡುಗೆ ತಯಾರಿಕೆ ಮತ್ತು ಅದನ್ನು ಪ್ಯಾಕ್ ಮಾಡುವ ಪ್ರತೀ ಹಂತದಲ್ಲೂ ಮುಂಜಾಗ್ರತೆಯ ಎಲ್ಲ ನಿಯಮಗಳನ್ನು ಪಾಲಿಸಿದ ಮೇಲೆ, ಮಾನವಸ್ಪರ್ಶ ಇಲ್ಲವೇ ಇಲ್ಲ ಎನ್ನುವಷ್ಟು ಕನಿಷ್ಠ ಮಟ್ಟಕ್ಕೆ ತಗ್ಗಿಸಿದ ಮೇಲೆ ಆಹಾರ ರವಾನೆ ಹೊತ್ತಲ್ಲೂ ಅಷ್ಟೇ ಕಾಳಜಿ ವಹಿಸಬೇಕಲ್ಲವೇ? ಏಕೆಂದರೆ, ಅವು ಹಲವು ಕಿಲೋಮೀಟರ್ ಕ್ರಮಿಸಿ ಕಾರ್ವಿುಕರು ಮತ್ತು ಇತರ ಫಲಾನುಭವಿಗಳನ್ನು ತಲುಪಬೇಕಿತ್ತು. ಹಾಗಾಗಿ, ವಾಹನ ಅದಮ್ಯ ಚೇತನದ ಅಂಗಳವನ್ನು ತಲುಪುವ ಮೊದಲೇ ಅದರ ಗಾಲಿ, ಹ್ಯಾಂಡಲ್ ಸೇರಿ ಇಡೀ ವಾಹನವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿತ್ತು. ಚಾಲಕ ಗ್ಲೌಸ್, ಮಾಸ್ಕ್ ಹಾಕೋದು ಕಡ್ಡಾಯವಾಗಿತ್ತು. ಒಂದೊಂದು ಕ್ರೇಟ್​ನಲ್ಲಿ 75 ಪ್ಲಾಸ್ಟಿಕ್ ಡಬ್ಬಗಳು ಇರುತ್ತಿದ್ದವು. ಹೀಗೆ ಒಂದು ವಾಹನದಲ್ಲಿ 2000-2500 ಜನರಿಗೆ ಆಗುವಷ್ಟು ಅಡುಗೆ ರವಾನಿಸಲಾಗುತ್ತಿತ್ತು. ಕಿಟ್ ರವಾನೆ ಕಾರ್ಯ ಬೆಳಗ್ಗೆ 7ರಿಂದ 9ರರೆಗೆ ನಡೆಯುತ್ತಿತ್ತು. ಮಧ್ಯಾಹ್ನ 3ರ ಬಳಿಕ ಕಿಟ್ ತೆಗೆದುಕೊಳ್ಳುವ ಸ್ವಯಂಸೇವಕರು ಅವರದ್ದೇ ವಾಹನ ತರಬೇಕಿತ್ತು.

    ಇದನ್ನೂ ಓದಿ  VIDEO|ದೀಪಕ್ ಚಹರ್ ಬೌಲಿಂಗ್, ಅಕ್ಕ ಮಾಲತಿ ಬ್ಯಾಟಿಂಗ್!

    ಹಲವು ರಾಜ್ಯಗಳಿಂದ ಇಲ್ಲಿ ದುಡಿಯಲು ಬಂದ ವಲಸೆ ಕಾರ್ವಿುಕರು, ಹಕ್ಕಿಪಿಕ್ಕಿ ಜನಾಂಗವರು, ಬೆಂಗಳೂರಿಗೆ ಓದಲು ಬಂದ ವಿದ್ಯಾರ್ಥಿಗಳು, ಕುಷ್ಠರೋಗಿಗಳ ಪುನರ್ ವಸತಿ ಕೇಂದ್ರ, ವೃದ್ಧಾಶ್ರಮ, ಅಬಲಾಶ್ರಮ, ಸೇವಾಬಸ್ತಿಗಳ ಬಡವರು, ಅರ್ಚಕರು ಇವರಿಗೆಲ್ಲ ಊಟ ಮತ್ತು ಕಿಟ್ ತಲುಪಿದೆ. ಒಂದೇ ಕಿಟ್ ಇರಲಿ, ನೂರು ಕಿಟ್ ಇರಲಿ ಅದನ್ನು ಅತ್ಯಂತ ಶ್ರದ್ಧೆಯಿಂದ, ಮುತುವರ್ಜಿಯಿಂದ ತಲುಪಿಸಲಾಗಿದೆ.

    ಈ ಎಲ್ಲ ಕೆಲಸಗಳಿಗೆ ಎಷ್ಟೋ ಜನರು ಸದ್ದುಗದ್ದಲವಿಲ್ಲದೆ ಆರ್ಥಿಕ ನೆರವು ನೀಡಿದರು. ರೈತರು ಬೆಳೆದ ತರಕಾರಿ ಹಾಳಾಗುತ್ತಿದೆ ಎಂದು ತಿಳಿದ ತಕ್ಷಣ ಕೆಲವರು ನೇರ ರೈತರಿಂದಲೇ ತರಕಾರಿಯನ್ನು ಖರೀದಿಸಿ, ಅದನ್ನು ಅದಮ್ಯ ಚೇತನಕ್ಕೆ ತಲುಪಿಸಿದರು. ಇನ್ನೊಂದು ತಂಡ ಸೂಕ್ತ ಫಲಾನುಭವಿಗಳನ್ನು ಗುರುತಿಸುವ ಕೆಲಸದಲ್ಲಿ ನಿರತವಾಗಿತ್ತು. ಫೋನ್ ಮೂಲಕ ಫಲಾನುಭವಿಗಳ ಮಾಹಿತಿ ಪಡೆಯುತ್ತಿದ್ದ ಕಾರ್ಯಕರ್ತರು ದಿನಕ್ಕೆ 10 ಗಂಟೆ ಕಾಲ ಕಾರ್ಯನಿರ್ವಹಿಸಿದರು. ಹೀಗೆ ಒಟ್ಟಾರೆ, 200-300 ಜನ ಕಾರ್ಯಕರ್ತರ ಅಪಾರ ಪರಿಶ್ರಮ, ಸಾವಿರಾರು ದಾನಿಗಳ ನೆರವು, ಇವರೆಲ್ಲರ ಒಟ್ಟು ಪ್ರಯತ್ನದ ಫಲವಾಗಿ ಈವರೆಗೆ 6.90 ಲಕ್ಷ ಊಟಗಳನ್ನು, 24 ಸಾವಿರ ಕಿಟ್​ಗಳು ಒದಗಿಸಲು ಸಾಧ್ಯವಾಗಿದೆ ಎಂಬುದು ಸಂತೃಪ್ತಿಯ, ಸಮಾಧಾನದ ಸಂಗತಿ.

    ಇದನ್ನೂ ಓದಿ   ಮತ್ತೆ ಕಲಬುರಗಿ ನಂ.1: ರಾಜ್ಯದಲ್ಲಿ ಇಂದು 267 ಕೋವಿಡ್ 19 ಪ್ರಕರಣಗಳು ದೃಢ

    ಇಲ್ಲಿ ಒಂದು ಸಂಗತಿಯನ್ನು ಮುಖ್ಯವಾಗಿ ಪ್ರಸ್ತಾಪಿಸಲೇಬೇಕು. ಇಷ್ಟೆಲ್ಲ ಕಾರ್ಯ ಆದದ್ದು ಯಾವುದೋ ಕಾರ್ಖಾನೆ ಅಥವಾ ಕಂಪನಿಯಲ್ಲಲ್ಲ. ಅದಮ್ಯ ಚೇತನದ ಅಡುಗೆಮನೆಯಲ್ಲಿ. ಇಲ್ಲಿಗೆ ಬಂದವರು ಯಾವುದೋ ಸಂಬಳಕ್ಕಾಗಿ ಬಂದವರಲ್ಲ, ಫೋಟೋ ಪ್ರಚಾರಕ್ಕಾಗಿ ಬಂದವರಲ್ಲ (ಅಡುಗೆಮನೆ, ಊಟದ ಕೋಣೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಅವಕಾಶವೇ ಇರಲಿಲ್ಲ). ಯಾವುದೋ ಪ್ರಮಾಣಪತ್ರಕ್ಕಾಗಿಯೋ, ಅಧಿಕಾರದ ಆಸೆಗೋ ಬಂದವರಲ್ಲ. ಅವರೆಲ್ಲ ಸೇವೆ ಮಾಡಲೆಂದೇ ಬಂದು, ಸಮರ್ಪಣಾ ಭಾವದಿಂದ ಆ ಕೆಲಸ ಮಾಡಿದರು. ನಮ್ಮ ಹಿರಿಯರು ಹೇಳಿದ ಜೀವನಮಂತ್ರ ‘ಸರ್ವೆ ಜನಾಃ ಸುಖಿನೋಭವಂತು’ ಮತ್ತು ‘ವಸುಧೈವ ಕುಟುಂಬಕಂ’ ಇದರ ನಿಜವಾದ ಅನುಷ್ಠಾನವಾಗಿದ್ದು ಈ ಕೆಲಸದಲ್ಲಿ. ಅದಮ್ಯ ಚೇತನದ ಜವಾಬ್ದಾರಿ, ಅಲ್ಲಿನ ಕೆಲಸಗಳ ನಿರ್ವಹಣೆಯ ಭಾಗ್ಯವನ್ನು ನನಗೆ ಒದಗಿಸಿದವರು ದಿ.ಅನಂತಕುಮಾರ. ಈ ಸೇವಾಕಾರ್ಯದ ಹೊತ್ತಲ್ಲಂತೂ ಇಂಥ ನೂರಾರು ವಿಶೇಷ ವ್ಯಕ್ತಿಗಳೊಂದಿಗೆ ಒಡನಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ.

    ಕೊವಿಡ್ ಸಂಕಷ್ಟದ ಸಮಯದಲ್ಲಿ ದೇಶಾದ್ಯಂತ ವಲಸೆ ಕಾರ್ವಿುಕರು, ಬಡವರು ಹಲವು ಸಮಸ್ಯೆ ಎದುರಿಸಿದರು. ಈ ಹೊತ್ತಲ್ಲಿ ನೂರಾರು ಸಂಘಸಂಸ್ಥೆಗಳು ಸಹಾಯಹಸ್ತ ಚಾಚುವ ಮೂಲಕ, ನೋಂದವರ ನೆರವಿಗೆ ಬಂದಿದ್ದು ಭಾರತದ ಅದಮ್ಯ ಚೇತನವೇ ಸರಿ. ಭಾರತದ ಹೃದಯ ಎಂದೂ ನೊಂದವರಿಗಾಗಿ ಮಿಡಿಯುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಯಿತು.

    (ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)

    ವಿಜಯ್ ಮಲ್ಯ ಗಡಿಪಾರಿಗೆ ದಿನಗಣನೆ- ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts