More

    Hello Doctor: ವಿಶ್ವ ಆರೋಗ್ಯದ ಮೂಲಮಂತ್ರವೇ ವಸುಧೈವ ಕುಟುಂಬಕಂ

    • ಡಾ. ಎಸ್.ಪಿ. ಯೋಗಣ್ಣ, ವೈದ್ಯ ಸಾಹಿತಿ, ಮೈಸೂರು

    Hello Doctor: ವಿಶ್ವ ಆರೋಗ್ಯದ ಮೂಲಮಂತ್ರವೇ ವಸುಧೈವ ಕುಟುಂಬಕಂವಸುಧೈವ ಕುಟುಂಬಕಂ ನಮ್ಮ ಸಂಸ್ಕೃತಿಯ ಆಶಯವಾಗಿದ್ದು, ಸಾಮಾಜಿಕ ಆರೋಗ್ಯದ ವಿಸ್ತಾರ ಮತ್ತು ವಿವಿಧ ಮುಖಗಳನ್ನು ಪ್ರತಿಪಾದಿಸುತ್ತದೆ. ಇಡೀ ವಿಶ್ವವೇ ಒಂದೆಂಬ ಅರಿವು ಮತ್ತು ವಿಶ್ವದ ಆರೋಗ್ಯ ಮನುಷ್ಯನ ಆರೋಗ್ಯಕ್ಕೆ ಪೂರಕವಾಗುವ ಜೀವನಶೈಲಿ ಮತ್ತು ಮನೋವೃತ್ತಿಗಳು ಸಾಮಾಜಿಕ ಆರೋಗ್ಯದ ವ್ಯಾಪ್ತಿಗೆ ಬರುತ್ತವೆ. ವಿಶಾಲ ದೃಷ್ಟಿಯಲ್ಲಿ ಇದನ್ನು ವಿಶ್ವ ಆರೋಗ್ಯವೆಂದೇ ಪರಿಗಣಿಸಬೇಕಾಗಿದೆ. ಸಾಮಾಜಿಕ ಆರೋಗ್ಯದ ವ್ಯಾಪ್ತಿ ವಿಸ್ತಾರವಾದುದು. ಸೃಷ್ಟಿಯ ಎಲ್ಲದರ ಆರೋಗ್ಯಸ್ಥಿತಿ ಮನುಷ್ಯನ ಆರೋಗ್ಯಕ್ಕೂ ಅವಶ್ಯಕ. ಸೃಷ್ಟಿಯ ಆರೋಗ್ಯ ಕಾಪಾಡುವುದರಲ್ಲಿ ಅವನ ಆರೋಗ್ಯವೂ ಅಡಗಿದೆ. ಪರಿಸರ, ಆಹಾರ, ಸಾಮಾಜಿಕ ಮತ್ತು ಧಾರ್ವಿುಕ ನಡವಳಿಕೆಗಳು, ಕಟ್ಟುಪಾಡು, ಜಾತಿ, ನಂಬಿಕೆ, ಅಭ್ಯಾಸಗಳೆಲ್ಲ ಸಾಮಾಜಿಕ ಆರೋಗ್ಯದ ಅವಿಭಾಜ್ಯ ಅಂಗಗಳು. ಇವೆಲ್ಲ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಅವುಗಳ ನಿರಂತರ ನಿಯಂತ್ರಣ ಅತ್ಯವಶ್ಯಕ.

    ಪರಿಸರ: ಮನುಷ್ಯನನ್ನು ಹೊರತುಪಡಿಸಿ ಸುತ್ತಮುತ್ತಲಿನ ಎಲ್ಲವೂ ಪರಿಸರದ ವ್ಯಾಪ್ತಿಗೆ ಬರುತ್ತವೆ. ಪರಿಸರದಲಿರುವುದನ್ನು ಭೌತಿಕ, ಜೈವಿಕ ಮತ್ತು ರಾಸಾಯನಿಕಗಳೆಂದು ವರ್ಗೀಕರಿಸಲಾಗಿದೆ. ಭೂಮಿ, ವಾಯು, ಆಕಾಶ, ಜಲ, ಅಗ್ನಿ, ಸೂರ್ಯ, ಚಂದ್ರ ಮಾತ್ರವಲ್ಲದೆ ಋತುಮಾನ, ತಾಪಮಾನ, ಭೌತಿಕ ಪರಿಸರದ ಸಸ್ಯ ಮತ್ತು ಇನ್ನಿತರ ಜೀವಿಗಳು ಜೈವಿಕ ಪರಿಸರದ ಹಾಗೂ ಪರಿಸರದಲ್ಲಿರುವ ಹಲವಾರು ಸಹಜ ಮತ್ತು ಅಸಹಜ ರಾಸಾಯನಿಕಗಳು ರಾಸಾಯನಿಕ ಪರಿಸರದ ವ್ಯಾಪ್ತಿಯಲ್ಲಿದ್ದು ಮನುಷ್ಯನ ಆರೋಗ್ಯವನ್ನು ನಿಯಂತ್ರಿಸುತ್ತವೆ.

    ಪರಿಸರದ ತಾಪಮಾನದ ವ್ಯತ್ಯಾಸಗಳು ಅಸ್ತಮಾ, ಸೋಂಕು, ಹೃದ್ರೋಗ ಇತ್ಯಾದಿ ಕಾಯಿಲೆಗಳನ್ನು ಉಲ್ಬಣಗೊಳಿಸುತ್ತವೆ. ಅತಿಯಾದ ಪೆಟ್ರೋಲಿಯಂ ಸುಡುವಿಕೆ, ಕೈಗಾರಿಕೆ ಮತ್ತು ವ್ಯವಸಾಯಗಳ ತ್ಯಾಜ್ಯಗಳು, ವಾಯು ಮತ್ತು ಜಲಮಾಲಿನ್ಯವನ್ನುಂಟುಮಾಡಿ ಮಾನವನ ಆರೋಗ್ಯಕ್ಕೆ ಮಾರಕವಾಗುತ್ತವೆ. ಜೈವಿಕ ಪರಿಸರದಲ್ಲಿ ಸಸ್ಯ, ಪ್ರಾಣಿ ಮತ್ತು ಸೂಕ್ಷ್ಮಜೀವಿ ಜಗತ್ತುಗಳಿದ್ದು, ಇವೆಲ್ಲವುಗಳ ಆರೋಗ್ಯವೂ ಮನುಷ್ಯನ ಆರೋಗ್ಯಕ್ಕೆ ಪೂರಕ. ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಗೂ ಅದರದೇ ಆದ ಸೃಷ್ಟಿಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ಮುಂದುವರಿಸುವ ಪೂರ್ವನಿಗದಿತ ಕಾರ್ಯಯೋಜನೆಯಿದೆ. ಇವುಗಳಿಗೆ ಅಡೆತಡೆ ಮಾಡದೆ ಪೋಷಿಸಿದಾಗ ಮಾತ್ರ ಸಾಮಾಜಿಕ ಆರೋಗ್ಯ ಸಾಧ್ಯ. ಜೀವಿಗಳ ಸೃಷ್ಟಿಯೂ ನಿರ್ದಿಷ್ಟ ಪೂರ್ವನಿಗದಿತ ಅನುಪಾತದಲ್ಲಾಗಿದೆ. ಆ ಅನುಪಾತವನ್ನು ಕಾಪಾಡುವುದೂ ಮುಖ್ಯ. ಜನಸಂಖ್ಯಾಸ್ಪೋಟ ಸಾಮಾಜಿಕ ಅನಾರೋಗ್ಯದ ಪ್ರಮುಖ ಸಂಕೇತ.

    ಜೈವಿಕ ಪರಿಸರ: ಸಸ್ಯ, ಪ್ರಾಣಿ ಮತ್ತು ಸೂಕ್ಷ್ಮಜೀವಿಗಳ ನಡುವೆ ಸರಪಳಿಯೋಪಾದಿಯ ಪೂರ್ವನಿಗದಿತ ಕಾರ್ಯಚಕ್ರವಿದೆ. ಇದರ ವ್ಯವಸ್ಥಿತ ನಿರ್ವಹಣೆ ಸಹ ಮನುಷ್ಯನ ಆರೋಗ್ಯಕ್ಕೆ ಅತ್ಯವಶ್ಯಕ. ಪ್ರಾಣಿಗಳು ಹೊರಹಾಕುವ ಇಂಗಾಲದ ಡೈ ಆಕ್ಸೈಡ್ ಅನ್ನು ಸಸ್ಯ ಜಗತ್ತು ಹೀರಿ ಪ್ರಾಣಿ ಜಗತ್ತಿಗೆ ಅವಶ್ಯವಾದ ಆಮ್ಲಜನಕವನ್ನು ನೀಡುವ ಸಹಕಾರಿ ಕ್ರಿಯೆಯ ನಿಯಂತ್ರಣವೂ ಅತ್ಯವಶ್ಯಕ.

    ಸಸ್ಯ ಮತ್ತು ಪ್ರಾಣಿಸಂಖ್ಯೆಗಳ ಅನುಪಾತದಲ್ಲಿ ವ್ಯತ್ಯಾಸವಾದರೆ ಸಾಮಾಜಿಕ ಆರೋಗ್ಯಕ್ಕೆ ಮಾರಕ. ಪರಿಸರದಲ್ಲಿರುವ ಸೂಕ್ಷ್ಮಜೀವಿ ಜಗತ್ತಿನ ಬ್ಯಾಕ್ಟೀರಿಯಾ, ವೈರಸ್, ಫಂಗಸ್ ಇತ್ಯಾದಿಗೆ ಸಹ ಪರಿಸರದ ಉಳಿವಿನ ಪೂರ್ವನಿಗದಿತ ಜವಾಬ್ದಾರಿಗಳಿವೆ. ಇದನ್ನರಿತು ಅವುಗಳನ್ನೂ ನಿಯಂತ್ರಿಸಿ ಪೋಷಿಸುವುದು ಸಾಮಾಜಿಕ ಆರೋಗ್ಯಕ್ಕೆ ಅಗತ್ಯ. ಆಧುನೀಕರಣದಿಂದಾಗಿ ಪರಿಸರಕ್ಕೆ ಅಧಿಕವಾಗಿ ಸೇರ್ಪಡೆಯಾಗುತ್ತಿರುವ ಕಾರ್ಬನ್​ಡೈಆಕ್ಸೈಡ್​ನಂಥ ವಿಷಮಯ ರಾಸಾಯನಿಕಗಳು ಸಹಜ ರಾಸಾಯನಿಕ ಪರಿಸರವನ್ನು ಅಸ್ತವ್ಯಸ್ತಗೊಳಿಸುತ್ತಿವೆ.

    ಸಾಮಾಜಿಕ ನಡವಳಿಕೆಗಳು: ಮಾನವ ಜನಾಂಗ ಜಾತಿ, ಪಂಗಡ, ಧರ್ಮ, ಸಂಸ್ಕೃತಿ, ನಂಬಿಕೆಗಳಿಗನುಗುಣವಾಗಿ ವಿಂಗಡಣೆಯಾಗಿದೆ. ಅದಕ್ಕನುಗುಣವಾಗಿ ಆಹಾರ ವೈವಿಧ್ಯ, ಕಸುಬುಗಳು, ದೈನಂದಿನ ದೈಹಿಕ ಚಟುವಟಿಕೆಗಳು, ಮಾನಸಿಕ ಏರುಪೇರು ಸಹ ಮನುಷ್ಯನ ಆರೋಗ್ಯವನ್ನು ನಿಯಂತ್ರಿಸುತ್ತವೆ.

    ಸಾಮಾಜಿಕ ಅನಾರೋಗ್ಯಕ್ಕೆ ಕಾರಣಗಳು: ಜನಸಂಖ್ಯಾಸ್ಪೋಟ, ಸಸ್ಯ ಸಂಪತ್ತಿನ ಕೊರತೆ, ಅತಿವಾಹನಗಳ ಹಾಗೂ ಕೈಗಾರಿಕೆಗಳಿಂದ ಆಗುತ್ತಿರುವ ವಾಯು ಮತ್ತು ಜಲಮಾಲಿನ್ಯ, ಅತಿಯಾದ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯಿಂದಾಗುತ್ತಿರುವ ಅಧಿಕ ರೇಡಿಯೇಷನ್​ಗಳು, ಭೌತಿಕ ಸಂಪತ್ತು ಗಳಿಕೆ ಆಧಾರಿತ ಆಧುನಿಕ ಸ್ಪರ್ಧಾತ್ಮಕ ಬದುಕು, ಜನಾಂಗೀಯ ಅವೈಜ್ಞಾನಿಕ ಕಟ್ಟುಪಾಡುಗಳು ಸಾಮಾಜಿಕ ಅನಾರೋಗ್ಯಕ್ಕೆ ಪ್ರಮುಖ ಕಾರಣಗಳಾಗಿದ್ದು, ಕ್ಯಾನ್ಸರ್, ಹೃದಯಾಘಾತ, ಸಕ್ಕರೆಕಾಯಿಲೆ ಇಂಥವುಗಳಿಗೆ ಕಾರಣವಾಗಿವೆ.

    ಸಾಮಾಜಿಕ ಆರೋಗ್ಯ ಹೇಗೆ?: ಇಡೀ ಸೃಷ್ಟಿಯನ್ನೇ ಒಂದು ಸಮಾಜವೆಂದು ಪರಿಗಣಿಸಿ, ಅದರಲ್ಲಿರುವ ಪೂರ್ವನಿಗದಿತ ವೈಜ್ಞಾನಿಕ ಕಾರ್ಯಚಕ್ರಗಳನ್ನು ಮಲಿನಗೊಳಿಸದೆ ಪೋಷಿಸುವುದರಿಂದ ಮಾತ್ರ ಸಾಮಾಜಿಕ ಆರೋಗ್ಯ ಸಾಧ್ಯ. ಮನುಷ್ಯನ ಪ್ರತಿಯೊಂದು ಸ್ಥಾನಿಕ ಕ್ರಿಯೆ ಇಡೀ ವಿಶ್ವದ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಪ್ರತಿಯೊಬ್ಬರೂ ವಿಶ್ವವ್ಯಾಪ್ತಿ ಯೋಚಿಸಿ ಸ್ಥಳೀಯವಾಗಿ ಕಾರ್ಯೋನ್ಮುಖವಾಗುವುದು ಅವಶ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts