More

    ಹಲೋ ಡಾಕ್ಟರ್: ಏನಿದು ‘ಮೆಟಾಬಾಲಿಕ್ ಸಿಂಡ್ರೋಮ್?

    • ಡಾ. ಜಿ.ಬಿ. ಸತ್ತೂರ

    ಮೆಟಾಬಾಲಿಕ್ ಸಿಂಡ್ರೋಮ್ ಅಂದರೆ ಸಾಮಾನ್ಯ ನೆಗಡಿ. ಮುಖದ ಮೇಲಿನ ಮೊಡವೆಗಳಷ್ಟು ಸಾಮಾನ್ಯವಾದುದು. ಭಾರತೀಯರಲ್ಲಿ ಪ್ರತಿಶತ 30ರಷ್ಟು ಜನರು ಇದನ್ನು ಹೊಂದಿದ್ದಾರೆ! ಇದು ಆನುವಂಶಿಕ ಕೂಡ. ಇದನ್ನು ಬೇನೆ ಎಂದು ಕರೆಯುವುದಕ್ಕಿಂತ ಹಲವಾರು ಅಪಾಯಕಾರಿ ಅಂಶಗಳ ಸಮೂಹವೇ ಈ ಸಿಂಡ್ರೋಮ್ ಎನ್ನಬಹುದು. ಈ ಮುಂದಿನ 5 ಲಕ್ಷಣಗಳ ಪೈಕಿ 3 ಅಥವಾ ಹೆಚ್ಚು ಲಕ್ಷಣಗಳು ಇದ್ದಲ್ಲಿ ಮೆಟಾಬಾಲಿಕ್ ಸಿಂಡ್ರೋಮ್ ಇದ್ದುದು ಖಚಿತಪಟ್ಟಂತೆ.

    1. ಹೆಚ್ಚಿದ ನಡದ ಸುತ್ತಳತೆ: ಗಂಡಸರಲ್ಲಿ 90 ಸೆಂ.ಮೀ., ಹೆಂಗಸರಲ್ಲಿ 80 ಸೆಂ.ಮೀ. ಮೀರಿದಾಗ. ನಡದ ಸುತ್ತಳತೆಯನ್ನು ಸಾದಾ ಟೇಪ್​ನಿಂದ ಹೊಕ್ಕಳಿನ ಸ್ಥಾನದಲ್ಲಿ ನೋಡಬೇಕು.

    2. ಹೆಚ್ಚಿದ ಟ್ರೖೆಗ್ಲಿಸರಾಯಿಡ್: ಕೊಬ್ಬಿನ ಅಂಶದ ಪ್ರಮಾಣ ರಕ್ತದಲ್ಲಿ 150 ಮಿಲಿ ಗ್ರಾಂ ಗಿಂತ ಕಡಿಮೆ ಇರಬೇಕು.

    3. ಖಾಲಿ ಹೊಟ್ಟೆಯಲ್ಲಿ ಸಕ್ಕರೆಯ ಅಂಶ: ಇದು 100 ಮಿ.ಗ್ರಾಂ ಗಿಂತ ಕಡಿಮೆ ಇರಬೇಕು.

    4. ರಕ್ತದೊತ್ತಡ (ಬಿ.ಪಿ.) 130/85ಕ್ಕಿಂತ ಹೆಚ್ಚು ಇರಕೂಡದು.

    5. ಕಡಿಮೆ ಪ್ರಮಾಣದ ಉತ್ತಮ ಎಚ್.ಡಿ.ಎಲ್. ಕೊಲೆಸ್ಟೆರಾಲ್ : ಇದು ಗಂಡಸರಲ್ಲಿ 40 ಮಿ.ಗ್ರಾಂ. ಮತ್ತು ಹೆಂಗಸರಲ್ಲಿ 50 ಮಿ.ಗ್ರಾಂ. ಗಿಂತ ಕಡಿಮೆ ಇರಬೇಕು.

    ಈ 5 ಲಕ್ಷಣಗಳಲ್ಲಿ ಪ್ರಮುಖವಾಗಿ ಕಾಣುವುದು ಹೊಟ್ಟೆಯ ಸುತ್ತಳತೆ. ಹೊಟ್ಟೆಯೊಳಗಿನ ಕೊಬ್ಬು ಟೈಪ್ 2 ಮಧುಮೇಹ, ರಕ್ತದೊತ್ತಡ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಮಧುಮೇಹ, ಬಿ.ಪಿ. ಮತ್ತು ಹೃದಯಾಘಾತದ ಸಮೂಹಕ್ಕೆ ‘ಗಂಡಾಂತರ ತ್ರಿಕೋನ’ (ಡೆಡ್ಲಿ ಟ್ರಯಾಂಗಲ್) ಎಂಬ ಹೆಸರನ್ನು ನಾನು 1990ರಲ್ಲಿ ಕೊಟ್ಟಿದ್ದೇನೆ.

    ಟ್ರೖೆಗ್ಲಿಸರಾಯಿಡ್ ಒಂದು ತರಹದ ಕೊಬ್ಬು . ಇದು ಮಾಂಸಖಂಡಗಳಲ್ಲಿ ಶೇಖರಣೆಗೊಂಡು ದೇಹಕ್ಕೆ ಶಕ್ತಿಯನ್ನು ‘ಕ್ಯಾಲರಿ’ ರೂಪದಲ್ಲಿ ಒದಗಿಸುತ್ತದೆ. ವಿಶೇಷವಾಗಿ ಉಪವಾಸವಿದ್ದಾಗ. ಹೆಚ್ಚಿದ ಟ್ರೖೆಗ್ಲಿಸರಾಯಿಡ್ ಪ್ರಮಾಣ ಹೃದಯಾಘಾತಕ್ಕೆ ಕಾರಣ ಕೂಡ. ಎಚ್​ಡಿಎಲ್ ಕೊಲೆಸ್ಟರಾಲ್ ಹೆಚ್ಚಿನ ಪ್ರಮಾಣದಲ್ಲಿದ್ದರೆ ಹೃದಯಾಘಾತದ ಸಂಭವ ಕಡಿಮೆ. ಇದು ರಕ್ತನಾಳದಲ್ಲಿಯ ಕೆಟ್ಟ ಎಲ್​ಡಿಎಲ್ ಕೊಬ್ಬನ್ನು ಯಕೃತ್ತಿಗೆ ಕೊಂಡೊಯ್ಯುತ್ತದೆ. ಕೆಟ್ಟ ಕೊಬ್ಬು ಮಾತ್ರ ರಕ್ತನಾಳದ ಒಳಮೈಯಲ್ಲಿ ಶೇಖರಣೆಗೊಂಡು ಕಾಲಾಂತರದಲ್ಲಿ ಹೃದಯಾಘಾತವನ್ನು ಉಂಟುಮಾಡುತ್ತದೆ.

    ಖಾಲಿ ಹೊಟ್ಟೆಯಲ್ಲಿರುವಾಗ ರಕ್ತದಲ್ಲಿಯ ಸಕ್ಕರೆಯ ಅಂಶವು 100 ಮಿ.ಗ್ರಾಂ.ಗಿಂತ ಕಡಿಮೆ ಇರಬೇಕು. ಇದು 126 ಮಿ.ಗ್ರಾಂ. ಮೀರಿದಲ್ಲಿ ‘ಮಧುಮೇಹ’ ಇರುವುದು ಖಚಿತಪಟ್ಟಂತೆ. 100ರಿಂದ 126ರವರೆಗಿನ ರಕ್ತದಲ್ಲಿಯ ಸಕ್ಕರೆ ಅಂಶ ಕೂಡ ಅಪಾಯಕಾರಿ. ಅಲಕ್ಷಿಸಿದಲ್ಲಿ ಮಧುಮೇಹ (ಟೈಪ್ 2) ಬರುವುದು ಖಚಿತ. ನಿಯಮಿತ ವ್ಯಾಯಾಮ, ಹೊಟ್ಟೆಯ ಬೊಜ್ಜನ್ನು ಇಳಿಸಲು ಪ್ರತ್ಯೇಕ ವ್ಯಾಯಾಮ, ಆಹಾರ ಶೈಲಿ, ಜೀವನ ಶೈಲಿ ಬದಲಾವಣೆಯಿಂದ ಮಧುಮೇಹ ಬರುವುದನ್ನು 5 ವರ್ಷಕ್ಕಿಂತ ಹೆಚ್ಚು ಸಮಯ ಮುಂದೂಡಬಹುದು. ಇನ್ನು ಬಿ.ಪಿ.ಯು 130/85ಕ್ಕಿಂತ ಹೆಚ್ಚಿದಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಮಾಡಿಸಿಕೊಳ್ಳದಿದ್ದಲ್ಲಿ ಪಾರ್ಶ್ವವಾಯು, ಹೃದಯಾಘಾತ, ಮೂತ್ರಪಿಂಡ ವೈಫಲ್ಯ ಉಂಟಾಗುವ ಸಂಭವ ಹೆಚ್ಚುವುದು. ಬಿ.ಪಿ. ಹೆಚ್ಚಿದಂತೆ ಈ ಬೇನೆಗಳ ತೀವ್ರತೆಯೂ ಹೆಚ್ಚುವುದು.

    ಎಷ್ಟೇ ಹೆಚ್ಚಿದರೂ (ಉದಾ: 180/110) ಯಾವ ಲಕ್ಷಣಗಳೂ ಕಂಡುಬರದಿರುವುದರಿಂದ, ಬಿ.ಪಿ.ಗೆ ಸೈಲೆಂಟ್ ಕಿಲ್ಲರ್ ಎಂಬ ಹೆಸರೂ ಉಂಟು! ಮೆಟಾಬಾಲಿಕ್ ಸಿಂಡ್ರೋಮ್ಲ್ಲಿ ಏದುಸಿರು, ನಿದ್ರೆಯಲ್ಲಿ ಗೊರಕೆ ಹೊಡೆಯುವುದು, ಕಣ್ಣಿನ ಸುತ್ತ ಹಳದಿ ಕಲೆಗಳು ಕೂಡ ಕಂಡುಬರುವವು. ವಯಸ್ಸು ಹೆಚ್ಚಿದಂತೆ ಈ ಸಿಂಡ್ರೋಮ್ ಹೆಚ್ಚು ಕಾಣಿಸಿಕೊಳ್ಳುತ್ತದೆ. ಉದಾ: 50ರ ಆಸುಪಾಸಿನ ವಯಸ್ಸಿನ ಪ್ರತಿಶತ 30 ಜನರಲ್ಲಿ ಕಂಡರೆ, 60 ವರ್ಷದ ನಂತರ ಪ್ರತಿಶತ 45 ಜನರಲ್ಲಿ ಕಂಡುಬರುವುದು.

    ಇತ್ತೀಚೆಗೆ, ಈ ಸಿಂಡ್ರೋಮ್ೊಂದಿಗೆ, ಯಕೃತ್ತಿನಲ್ಲಿ ಹೆಚ್ಚಿದ ಕೊಬ್ಬು, ಪಿತ್ತಕೋಶದ ಹರಳುಗಳು, ಹೆಂಗಸರಲ್ಲಿ ಅಂಡಾಶಯ ಗಳಲ್ಲಿ ತೊಂದರೆ ಕೂಡ ಸಾಮಾನ್ಯವೆಂದು ಅಧ್ಯಯನಗಳು ತಿಳಿಸಿವೆ. ಭಾರತೀಯರಲ್ಲಿ ಇದು ಇನ್ನೂ ಹೆಚ್ಚುವ – ವಿಶೇಷವಾಗಿ ಯುವಕರಲ್ಲಿ ಸಂಭವಿಸುವ ಅಪಾಯ ಜಾಸ್ತಿ. ಇದಕ್ಕೆ ಇರುವ ಉಪಚಾರವೆಂದರೆ ಜೀವನಶೈಲಿಯ ಬದಲಾವಣೆ, ಬೊಜ್ಜು ಇಳಿಸುವುದು, ಕಡಿಮೆ ಜಂಕ್​ಫುಡ್ ಸೇವಿಸುವುದು, ನಿಯಮಿತ ವ್ಯಾಯಾಮ ಮಾತ್ರ. ಹಣ್ಣು ಮತ್ತು ಕಾಯಿಪಲ್ಯೆಗಳನ್ನು ಹೆಚ್ಚು ಸೇವಿಸಿದಲ್ಲಿ ಈ ಸಿಂಡ್ರೋಮ್ ಲಕ್ಷಣಗಳು ನಿಯಂತ್ರಣದಲ್ಲಿ ಉಳಿಯತ್ತವೆ. ತಂಬಾಕು ಸೇವನೆಯನ್ನು ಪೂರ್ತಿಯಾಗಿ ವರ್ಜಿಸಬೇಕು. ಅದು ಹೋಮದ ಅಗ್ನಿಯ ಮೇಲೆ ತುಪ್ಪ ಸುರಿದಂತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts