More

    ದ.ಕ. ಜಿಲ್ಲೆಯಲ್ಲಿ ಅಬ್ಬರದ ಗಾಳಿಮಳೆ

    ಮಂಗಳೂರು: ಹಗಲು ವೇಳೆ ಸ್ವಲ್ಪ ಬಿಡುವು ನೀಡಿದ್ದ ಮಳೆ ಸಾಯಂಕಾಲವಾಗುತ್ತಿದ್ದಂತೆ ಅಬ್ಬರಿಸಿದ್ದು, ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲಾದ್ಯಂತ ಉತ್ತಮ ಮಳೆ ಸುರಿದಿದೆ.
    ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದ್ದರೂ, ದಿನವಿಡೀ ಮೋಡ ಕವಿದ ಬಿಸಿಲಿನ ವಾತಾವರಣವಿತ್ತು. ಸಾಯಂಕಾಲ ಸುಬ್ರಹ್ಮಣ್ಯದಲ್ಲಿ ಗುಡುಗು ಮಿಂಚಿನ ಅಬ್ಬರದ ಮಳೆಯಾಗಿದೆ. ಬಂಟ್ವಾಳ, ಕಡಬ, ಸುರತ್ಕಲ್, ಗುರುಪುರ, ಉಳ್ಳಾಲ ಸೇರಿದಂತೆ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದೆ.
    ಮಂಗಳೂರು ನಗರ ವ್ಯಾಪ್ತಿಯಲ್ಲಿ ಸುಮಾರು ಅರ್ಧಗಂಟೆ ಕಾಲ ಗಾಳಿ ಸಹಿತ ಧಾರಾಕಾರವಾಗಿ ಸುರಿದು ಬಳಿಕ ಕಡಿಮೆಯಾಗಿದೆ. ಹಲವೆಡೆ ರಾತ್ರಿವರೆಗೂ ವಿದ್ಯುತ್ ವ್ಯತ್ಯಯವಾಗಿತ್ತು. ಬೈಕಂಪಾಡಿ ಮೀನಕಳಿಯದಲ್ಲಿ ವಾಸವಾಗಿದ್ದ ತಮಿಳುನಾಡು ಮೂಲದ ಸುರೇಶ್ ಎಂಬುವರ ಮನೆ ಛಾವಣಿ ಶೀಟ್‌ಗಳು ಸಂಪೂರ್ಣ ಹಾರಿ ಹೋಗಿದ್ದು, ವಿದ್ಯುತ್ ಉಪಕರಣ, ಸಾಮಗ್ರಿಗಳು ಹಾನಿಗೀಡಾಗಿವೆ. ಅವರು ಇನ್ನೊಂದು ಮನೆಗೆ ಸ್ಥಳಾಂತರಗೊಂಡಿದ್ದಾರೆ.

    ಮಳೆ ವಿವರ: ಸಾಯಂಕಾಲವರೆಗಿನ ಮಾಹಿತಿಯಂತೆ ದ.ಕ ಜಿಲ್ಲೆಯ ನೂಜಿಬಾಳ್ತಿಲದಲ್ಲಿ ಅತ್ಯಧಿಕ 45, ಸುರತ್ಕಲ್‌ನಲ್ಲಿ 29 ಮಿ.ಮೀ. ಮಳೆಯಾಗಿದೆ. ಗುರುವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 46.9 ಮಿ.ಮೀ. ಮಳೆಯಾಗಿದೆ. ಬಂಟ್ವಾಳ 46.1, ಬೆಳ್ತಂಗಡಿ 58.1, ಮಂಗಳೂರು 63.8, ಪುತ್ತೂರು 43.7, ಸುಳ್ಯದಲ್ಲಿ 22.9 ಮಿ.ಮೀ. ಸುರಿದಿದೆ.

    ಇನ್ನೆರಡು ದಿನ ಭಾರಿ ಮಳೆ: ಪೂರ್ವ ಮಧ್ಯ ಬಂಗಾಳಕೊಲ್ಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಉಂಟಾಗಿರುವ ಕಡಿಮೆ ಒತ್ತಡ ಕಾರಣದಿಂದಾಗಿ ಕರ್ನಾಟಕ ಕರಾವಳಿ ಭಾಗದಲ್ಲೂ ಮುಂದಿನ 2-3 ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ವಿಶೇಷ ಮುಂಗಾರು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ಮುಂದಿನ ಎರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

    ಮುರಿದು ಬಿದ್ದ ವಿದ್ಯುತ್ ಕಂಬ
    ಗುರುಪುರ: ಗುರುಪುರ ಕೈಕಂಬ, ಅಡ್ಡೂರು ಪ್ರದೇಶದಲ್ಲಿ ಬೀಸಿದ ಭಾರಿ ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಬಹುತೇಕ ಕಡೆಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ಕೆಲವು ಮನೆಗಳ ಹೆಂಚು ಹಾರಿ ಹೋಗಿದ್ದರೆ, ವಿದ್ಯುತ್ ಉಪಕರಣಗಳು ಹಾನಿಗೀಡಾಗಿವೆ. ಗುರುಪುರ, ಆದ್ಯಪಾಡಿ, ಸಾದೂರು, ಮುಚ್ಚೂರು ಫೀಡರ್‌ಗಳು ಹಾನಿಗೀಡಾಗಿವೆ. ಅಡ್ಡೂರಿನ ನಡುಗುಡ್ಡೆ ಪಡ್ಪು ಎಂಬಲ್ಲಿ ರಸ್ತೆ ಬದಿಯ ಹಲಸಿನ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು, ಕಂಬ ತುಂಡಾಗಿ ವಾಹನದ ಮೇಲೆ ಬಿದ್ದಿದೆ.

    24 ವಿದ್ಯುತ್ ಕಂಬಗಳಿಗೆ ಹಾನಿ
    ಉಡುಪಿ: ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಸಾಧಾರಣ ಮಳೆಯಾಗಿದ್ದು, ನಂತರ ಮೋಡ ಕವಿದ ವಾತಾವರಣವಿತ್ತು. ದಿನವಿಡೀ ಅಗಾಗ್ಗೆ ತುಂತುರು ಮಳೆ ಸುರಿಯುತ್ತಿತ್ತು. ಬುಧವಾರ ತಡರಾತ್ರಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
    ಬೈಂದೂರು ತಾಲೂಕಿನ ಶಿರೂರು ಗ್ರಾಮದ ಆದಮಕ್ಕಿ ನಿವಾಸಿ ಅಕ್ಕಯ್ಯ ಶೆಟ್ಟಿ ಅವರ ಮನೆಗೆ ಸಿಡಿಲು ಬಡಿದು ಗೋಡೆ ಬಿರುಕು ಬಿಟ್ಟಿದ್ದು, ಮೀಟರ್ ಬೋರ್ಡ್, ವೈರಿಂಗ್ ಸುಟ್ಟು ಹೋಗಿದೆ. ನೀಲಾ ಫರ್ನಾಂಡಿಸ್ ಅವರ ಮನೆಗೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದೆ. ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಉಡುಪಿ ಮೆಸ್ಕಾಂ ವಿಭಾಗ ವ್ಯಾಪ್ತಿಯಲ್ಲಿ 24 ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಕುಂದಾಪುರದಲ್ಲಿ 2 ವಿದ್ಯುತ್ ಪ್ರವಾಹಕಗಳು ಹಾನಿಗೀಡಾಗಿವೆ. ಮೆಸ್ಕಾಂಗೆ ಅಂದಾಜು 2.34 ಲಕ್ಷ ರೂ. ನಷ್ಟ ಸಂಭವಿಸಿದೆ.
    ಉಡುಪಿ 86.6, ಕುಂದಾಪುರ 107.4, ಕಾರ್ಕಳ 79.5 ಮಿ.ಮೀ. ಸಹಿತ ಜಿಲ್ಲೆಯಲ್ಲಿ 93.60 ಮಿ. ಮೀ ಸರಾಸರಿ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts