More

    ಗ್ರಾಮಾಂತರದಲ್ಲಿ ಭರ್ಜರಿ ಮಳೆ, ದ.ಕ.ದಲ್ಲಿ ಇಂದು ಆರೆಂಜ್ ಅಲರ್ಟ್

    ಮಂಗಳೂರು: ದ.ಕ ಜಿಲ್ಲೆಯಲ್ಲಿ ನೈಋತ್ಯ ಮುಂಗಾರಿನ ಮಳೆ ಮುಂದುವರಿದಿದೆಯಾದರೂ, ತೀವ್ರತೆ ಸ್ವಲ್ಪ ತಗ್ಗಿದೆ. ಸೋಮವಾರ ಘಟ್ಟದ ತಪ್ಪಲು ಭಾಗ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕುಗಳಲ್ಲಿ, ಗ್ರಾಮಾಂತರದ ಪುತ್ತೂರು, ವಿಟ್ಲ ಮೊದಲಾದೆಡೆಗಳಲ್ಲಿ ಮಳೆ ಬಿಟ್ಟು ಬಿಟ್ಟು ಮಳೆಯಾಗಿದೆ. ಮಂಗಳೂರು ನಗರ ಸೇರಿದಂತೆ ಹೊರ ವಲಯಗಳಲ್ಲಿ ಮಳೆ ಮೋಡ ಕವಿದ ವಾತಾವರಣ, ಆಗಾಗ್ಗೆ ಒಂದೆರಡು ಭರ್ಜರಿ ಸುರಿದಿದೆ. ಬೆಳಗ್ಗೆ ಸ್ವಲ್ಪ ಹೊತ್ತು, ಬಿಸಿಲೂ ಕಾಣಿಸಿಕೊಂಡಿತ್ತು.

    ಫಲ್ಗುಣಿ, ಶಾಂಭವಿ, ನಂದಿನಿ ನದಿ ಪಾತ್ರಗಳಲ್ಲಿ ಉಂಟಾಗಿದ್ದ ನೆರೆ ಪ್ರಮಾಣ ಕಡಿಮೆಯಾಗಿದ್ದು, ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ನೆರೆಯಿಂದಾಗಿ ಮೂಲ್ಕಿ ಭಾಗದಲ್ಲಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದವರು ತಮ್ಮ ಮನೆಗಳಿಗೆ ತೆರಳಿದ್ದಾರೆ. 199.2 ಹೆಕ್ಟೇರ್‌ನಷ್ಟು ಕೃಷಿ ಭೂಮಿ ಹಾನಿಗೀಡಾಗಿದೆ ಎಂದು ಜಿಲ್ಲಾಡಳಿತದ ಮಾಹಿತಿ ತಿಳಿಸಿದೆ.

    ಈ ನಡುವೆ ಕರಾವಳಿಯಲ್ಲಿ ಮಂಗಳವಾರ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಮಳೆ ತೀವ್ರತೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ ಸಮುದ್ರದಲ್ಲಿ ಗಂಟೆಗೆ 45-55 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

    32 ಮನೆಗಳಿಗೆ ಹಾನಿ
    ದ.ಕ ಜಿಲ್ಲೆಯಲ್ಲಿ ಭಾನುವಾರ ಸಾಯಂಕಾಲದಿಂದ ಸೋಮವಾರ ಸಾಯಂಕಾಲದ ವರೆಗೆ ಮಳೆಯಿಂದ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ 32 ಮನೆಗಳು ಹಾನಿಗೀಡಾಗಿವೆ. ಮಂಗಳೂರು ತಾಲೂಕಿನಲ್ಲಿ 5 ಮನೆಗಳು ಪೂರ್ಣ, 6 ಮನೆಗಳು ಭಾಗಶಃ, ಬಂಟ್ವಾಳದಲ್ಲಿ 5 ಪೂರ್ಣ, 8 ಭಾಗಶಃ ಹಾನಿಗೀಡಾಗಿವೆ. ಪುತ್ತೂರಿನಲ್ಲಿ 2 ಭಾಗಶಃ, ಸುಳ್ಯದಲ್ಲಿ 1 ಪೂರ್ಣ, ಮೂಡುಬಿದಿರೆಯಲ್ಲಿ 4 ಭಾಗಶಃ ಮತ್ತು ಕಡಬದಲ್ಲಿ 1 ಮನೆ ಭಾಗಶಃ ಹಾನಿಗೀಡಾಗಿವೆ ಎಂದು ಜಿಲ್ಲಾ ಪ್ರಾಕೃತಿಕ ವಿಕೋಪ ಉಸ್ತುವಾರಿ ಪ್ರಾಧಿಕಾರ ತಿಳಿಸಿದೆ.

    ಮಳೆ ವಿವರ
    ಸೋಮವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಬಂಟ್ವಾಳ 73.8, ಬೆಳ್ತಂಗಡಿ 104.5, ಮಂಗಳೂರು 78.6, ಪುತ್ತೂರು 63, ಸುಳ್ಯ 86.8 ಮಿ.ಮೀ ಸಹಿತ ದ.ಕ ಜಿಲ್ಲೆಯಲ್ಲಿ ಸರಾಸರಿ 81.3 ಮಿ.ಮೀ. ಮಳೆ ಸುರಿದಿದೆ. ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರದ ಬೆಳಗ್ಗಿನಿಂದ ಸಾಯಂಕಾಲದ ವರೆಗಿನ ಮಾಹಿತಿಯಂತೆ ಕೊಕ್ಕಡ 39.5, ಉಪ್ಪಿನಂಗಡಿ 39, ನೂಜಿಬಾಳ್ತಿಳದಲ್ಲಿ 38 ಮಿ.ಮೀ. ಮಳೆ ಸುರಿದಿದೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಬಂಟ್ವಾಳದಲ್ಲಿ 7.1 ಮೀ, ಉಪ್ಪಿನಂಗಡಿಯಲ್ಲಿ 27.8 ಮೀ ಇದೆ. ಉಪ್ಪಿನಂಗಡಿಯಲ್ಲಿ ಕುಮಾರಧಾರಾ 23 ಮೀ.ಇದೆ. ಗುಂಡ್ಯ ನದಿ ನೀರಿನ ಮಟ್ಟ 4.6 ಮೀ. ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts