More

    ಎರಡು ದಿನ ಭಾರಿ ಮಳೆ ಎಚ್ಚರಿಕೆ

    ಮಂಗಳೂರು/ಉಡುಪಿ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿಯಲ್ಲಿ ಮತ್ತೆ ಮಳೆ ಆರಂಭವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾದ್ಯಂತ ಗುರುವಾರ ಉತ್ತಮ ಮಳೆ ಸುರಿದಿದ್ದು, ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
    ಗುರುವಾರ ಮುಂಜಾನೆಯಿಂದಲೇ ಮಳೆ ಸುರಿದಿದ್ದು, ಸಾಯಂಕಾಲ ಅಬ್ಬರ ಹೆಚ್ಚಾಗಿದೆ. ಆರೆಂಜ್ ಅಲರ್ಟ್ ಘೋಷಿಸಿದ್ದ ಹವಾಮಾನ ಇಲಾಖೆ, ಸಾಯಂಕಾಲ ರೆಡ್ ಅಲರ್ಟ್‌ಗೆ ಬದಲಿಸಿತು. ಪ್ರಸ್ತುತ ಹವಾವಾನದ ಸ್ಥಿತಿಗತಿ ಪ್ರಕಾರ ಶನಿವಾರ ಮುಂಜಾನೆವರೆಗೆ ರೆಡ್ ಅಲರ್ಟ್ ಇರಲಿದ್ದು, ಬಳಿಕ ಆರೆಂಜ್ ಅಲರ್ಟ್ ಮುಂದುವರಿಯಲಿದೆ.
    ‘ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಕರಾವಳಿಯಲ್ಲಿ ಎರಡು ದಿನ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. ಶನಿವಾರದಿಂದ ಮತ್ತೆ ಸಹಜ ಸ್ಥಿತಿಗೆ ಮರಳಬಹುದು’ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್ ಗಾವಸ್ಕರ್ ತಿಳಿಸಿದ್ದಾರೆ.

    ಅಂಗಡಿ-ಮನೆಗಳಿಗೆ ನೀರು: ಮಂಗಳೂರು ನಗರದಲ್ಲಿ ಕೃತಕ ನೆರೆಗೆ ತಗ್ಗು ಪ್ರದೇಶಗಳ ಜನ ಸಂಕಷ್ಟ ಅನುಭವಿಸಿದರು. ಅಳಕೆ, ಕುದ್ರೋಳಿ, ಕೊಟ್ಟಾರ ಚೌಕಿ, ಮಾಲೆಮಾರ್, ಮಣ್ಣಗುಡ್ಡ, ಕೊಡಿಯಾಲ್‌ಬೈಲ್ ಮೊದಲಾದೆಡೆ ರಾಜಕಾಲುವೆ, ತೋಡುಗಳಲ್ಲಿ ಹೂಳು ತುಂಬಿದ್ದರಿಂದ ನೀರು ಹರಿಯಲು ಸಾಧ್ಯವಾಗದೆ ರಸ್ತೆಗಳಲ್ಲಿ ಹರಿದು ಅಂಗಡಿ, ಮನೆಗಳಿಗೂ ನುಗ್ಗಿತು.
    ಮಂಗಳೂರು, ಬೆಳ್ತಂಗಡಿ ತಾಲೂಕಿನಲ್ಲಿ ಭಾರಿ ಮಳೆಯಾಗಿದೆ. ಬೆಳಗ್ಗಿನಿಂದ ಸಾಯಂಕಾಲದವರೆಗಿನ ಅಂಕಿ ಅಂಶದಂತೆ ಮೂಡುಬಿದಿರೆಯಲ್ಲಿ ಅತ್ಯಧಿಕ 69.5 ಮಿ.ಮೀ., ಬೆಳ್ತಂಗಡಿಯ ನಾವೂರಿನಲ್ಲಿ 64.5 ಮಿ.ಮೀ. ಮಳೆ ಸುರಿದಿದೆ. ಗ್ರಾಮಾಂತರ ಭಾಗದಲ್ಲಿ ತೋಡು, ತೊರೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕೆಲವೆಡೆ ಪ್ರವಾಹ ಭೀತಿಯೂ ಉಂಟಾಗಿದೆ.
    ಕಾಸರಗೋಡು ಜಿಲ್ಲೆಯಲ್ಲೂ ಬಿರುಸಿನ ಮಳೆಯಾಗುತ್ತಿದೆ.

    ಮೀನುಗಾರರಿಗೆ, ಸಾರ್ವಜನಿಕರಿಗೆ ಎಚ್ಚರಿಕೆ: ಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ, ಮೀನುಗಾರಿಕೆಗೆ ತೆರಳಬಾರದು. ಸಾರ್ವಜನಿಕರು ನದಿ, ಸಮುದ್ರಕ್ಕೆ ಇಳಿಯಬಾರದು. ಭಾರಿ ಮಳೆ ಸುರಿಯುತ್ತಿರುವುದರಿಂದ ಜನ ಎಚ್ಚರಿಕೆಯಿಂದ ಇರುವಂತೆ ದ.ಕ, ಉಡುಪಿ ಜಿಲ್ಲಾಡಳಿತಗಳು ಸೂಚಿಸಿವೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ತೆರಳಬಾರದು. ಎಲ್ಲ ಪಿಡಿಒ ಮತ್ತು ಗ್ರಾಮಕರಣಿಕರು ತಮ್ಮ ವ್ಯಾಪ್ತಿಯಲ್ಲಿ ಸನ್ನದ್ಧರಿದ್ದು, ವಿಪತ್ತಿನ ಸಂದರ್ಭ ತಕ್ಷಣ ಸ್ಪಂದಿಸಬೇಕು. ಅಪಾಯದ ಸಂದರ್ಭ ಜನ ಜಿಲ್ಲಾ ಕಂಟ್ರೋಲ್ ರೂಂ 1077 ಅಥವಾ ವಾಟ್ಸಾೃಪ್ ಸಂಖ್ಯೆ 9483908000 ಸಂಪರ್ಕಿಸಬಹುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತನ್ನು ನಿಭಾಯಿಸಲು ತಯಾರಿ ಮಾಡಿಕೊಳ್ಳಬೇಕು. ತುರ್ತು ಸೇವೆಗೆ ಸಂಖ್ಯೆ 1077 ಅಥವಾ ದೂರವಾಣಿ ಸಂಖ್ಯೆ 0820-2574802 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts