More

    ರೈತನ ಜೀವ ಉಳಿಸಿದ ಹೃದಯ ಶಸ್ತ್ರಚಿಕಿತ್ಸೆ, ಯೆನೆಪೋಯ ಆಸ್ಪತ್ರೆ ಸಾಧನೆ

    ಮಂಗಳೂರು: ರೋಗಿಯ ಸೀಳಿದ ಮಹಾಪಧಮನಿ (ಅಯಾರ್ಟಿಕ್ ಡಿಸೆಕ್ಷನ್)ಯನ್ನು ನಗರದ ಯೆನೆಪೋಯ ಆಸ್ಪತ್ರೆಯ ವೈದ್ಯರು ಸುದೀರ್ಘ ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಿ ಜೀವ ಉಳಿಸಿದ್ದಾರೆ.

    ಅಯಾರ್ಟಿಕ್ ಡಿಸೆಕ್ಷನ್ ಅಪರೂಪದ ಹಾಗೂ ಗಂಭೀರ ಪ್ರಕರಣವಾಗಿದ್ದು ಪ್ರತಿವರ್ಷ 1 ಲಕ್ಷ ಜನರಲ್ಲಿ ಇಬ್ಬರಿಂದ ಮೂವರಲ್ಲಿ ಉಂಟಾಗುತ್ತದೆ. ಮಹಾಪಧಮನಿಯ ಒಳಪದರವು ಸೀಳಿ, ಮಧ್ಯಮ ಹಾಗೂ ಒಳಪದರದ ನಡುವಿನಲ್ಲಿ ರಕ್ತವು ಚಲಿಸಿ ಈ ಪದರಗಳು ಬೇರ್ಪಡುತ್ತ ಸಾಗುತ್ತದೆ. ಸರಿಯಾದ ಸಮಯದಲ್ಲಿ ಶಸ್ತ್ರಚಿಕಿತ್ಸೆ ನಡೆಸದಿದ್ದರೆ ಮಾರಣಾಂತಿಕವಾಗಿರುತ್ತದೆ.

    ಮಂಗಳೂರು ಗ್ರಾಮೀಣ ಭಾಗದ 55 ವರ್ಷದ ರೈತರೊಬ್ಬರಲ್ಲಿ ಅಯಾರ್ಟಿಕ್ ಡಿಸೆಕ್ಷನ್ ಸಮಸ್ಯೆ ಕಂಡು ಬಂದಿತ್ತು. ಮಹಾಪಧಮನಿಯ ಬುಡದಿಂದ ಆರಂಭಗೊಂಡು, ಕುತ್ತಿಗೆಯ ರಕ್ತನಾಳಗಳ ಜತೆಗೆ ಕಿಬ್ಬೊಟ್ಟೆಯ ತನಕ ಸೀಳಿಹೋಗಿತ್ತು. ಹಿರಿಯ ಹೃದ್ರೋಗ ತಜ್ಞ ಡಾ.ಆರ್.ಎಲ್. ಕಾಮತ್ ತಪಾಸಣೆ ನಡೆಸಿ ಕೊಡಿಯಾಲ್‌ಬೈಲ್‌ನ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಲು ಸೂಚಿಸಿದ್ದರು.

    ಆಸ್ಪತ್ರೆಯ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ಕೆ.ಶಕ್ತಿವೇಲ್ ತಮ್ಮ ತಂಡದ ವೈದ್ಯರಾದ ಡಾ. ಗಣೇಶ್ ಕಾಮತ್, ಹೃದ್ರೋಗ ಅರಿವಳಿಕೆ ತಜ್ಞರಾದ ಡಾ. ಮೋಹನ್‌ದಾಸ್ ಬಿ.ಎಸ್, ಡಾ.ಕೃಷ್ಣ ಪ್ರಸಾದ್ ಸಹಯೋಗದಲ್ಲಿ ಸತತ 12 ತಾಸುಗಳ ನಿರಂತರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಪರ್ಫ್ಯೂಷನಿಸ್ಟ್‌ಗಳಾದ ಅಂಶು ಮತ್ತು ಅಜ್ಮಲ್ ನೆರವಾಗಿದ್ದರು.

    ರೋಗಿಯು ಉತ್ತಮವಾಗಿ ಚೇತರಿಸಿಕೊಂಡಿದ್ದು ಐದು ದಿನ ನಂತರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ತಾಹಿರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts