More

    ಶೀತ ವಾತಾವರಣಕ್ಕೆ ಆರೋಗ್ಯ ಏರುಪೇರು : ಕರೊನಾದೊಂದಿಗೆ ಬಾಧಿಸುತ್ತಿದೆ ಇತರ ಕಾಯಿಲೆ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶೀತ ವಾತಾವರಣದಿಂದ ಕರೊನಾ ಜತೆಗೆ ಇತರ ಕಾಯಿಲೆಗಳು ಬಾಧಿಸುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ಶೀತದಿಂದ ನೆಗಡಿ, ತಲೆ ನೋವು, ಕೈ ಕಾಲು ನೋವು, ಕೆಮ್ಮು ಸೇರಿ ನಾನಾ ಸಮಸ್ಯೆಗಳು ಕಾಡುತ್ತಿವೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ತೆರಳಿ, ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬಹುತೇಕರು ಕರೊನಾ ಸೋಂಕಿನ ಭೀತಿಯಲ್ಲಿದ್ದಾರೆ.

    ನವೆಂಬರ್ ಅಂತ್ಯದಿಂದ ಚಳಿಗಾಲ ಪ್ರಾರಂಭವಾಗಿದ್ದು ಸಂಜೆ 5ಕ್ಕೆ ಮಂಜು ಕಾಣಿಸಿಕೊಳ್ಳುತ್ತಿದ್ದು, ಬೆಳಗ್ಗೆ 8ರವರೆಗೆ ಇರುತ್ತದೆ. ಉಷ್ಣಾಂಶವು ಕನಿಷ್ಠ ಮಟ್ಟ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶೀತ ಪ್ರಭಾವಕ್ಕೆ ಬಹುತೇಕ ಮನೆಗಳಲ್ಲಿ ಅನಾರೋಗ್ಯದಲ್ಲಿನ ಏರುಪೇರಿನ ಸಮಸ್ಯೆ ಕಾಡುತ್ತಿದೆ. ಇದರ ನಡುವೆ ವಿವಿಧ ಕೆಲಸ ಕಾರ್ಯಗಳಿಗೆ ಓಡಾಡುತ್ತಿರುವ ಜನರಲ್ಲಿನ ಶೀತದ ಸಮಸ್ಯೆಯೂ ಫ್ಲೂ ಆಗಿ ಬೇರೆಯವರಿಗೆ ಹರಡುತ್ತಿದೆ. ಮತ್ತೊಂದೆಡೆ ರಸ್ತೆಬದಿ, ಚರಂಡಿ, ಗುಂಡಿಯ ಜತೆಗೆ ಮನೆಯ ಸುತ್ತಲು ಹೆಚ್ಚಿಗೆ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಇದರಿಂದ ಮಲೇರಿಯಾ, ಡೆಂಘೆ, ಚಿಕೂನ್‌ಗುನ್ಯಾ ಸೇರಿ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿವೆ.

    ಎಲ್ಲೆಲ್ಲೂ ಕರೊನಾ ಭೀತಿ: ಜಿಲ್ಲೆಯಲ್ಲಿ ಪ್ರತಿದಿನ ಸೋಂಕು ಪ್ರಕರಣಗಳ ಸಂಖ್ಯೆಯ ಏರು ಗತಿಯಲ್ಲಿ ಸಾಗುತ್ತಿದ್ದು ಪ್ರತಿಯೊಂದು ಕಡೆಯೂ ಕರೊನಾ ಭೀತಿ ಎದುರಾಗಿದೆ. ನೆರೆ-ಹೊರೆಯವರನ್ನು ಮಾತನಾಡಿಸಲು ಹಿಂಜರಿಯುವಂತಾಗಿದೆ. ಇದರ ನಡುವೆ ಆಸ್ಪತ್ರೆಗೆ ಹೋದಾಗ ಕರೊನಾ ಪರೀಕ್ಷೆ, ಸೋಂಕು ದೃಢಪಟ್ಟರೆ ನಿರ್ಲಕ್ಷ್ಯ, ಕ್ವಾರಂಟೈನ್ ಕಿರಿಕಿರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಮನೆಯೊಳಗೆ ಮೆಡಿಕಲ್ ಶಾಪ್‌ನಿಂದ ತಂದ ಮಾತ್ರೆಗಳನ್ನು ಸೇವಿಸಲಾಗುತ್ತಿದೆ. ಇತ್ತೀಚೆಗೆ ವೈದ್ಯರು, ಶುಶ್ರೂಷಕಿಯರು ಸೇರಿ ಆರೋಗ್ಯ ಸೇವೆಯಲ್ಲಿ ತೊಡಗಿರುವವರೇ ಕರೊನಾ ಪೀಡಿತರಾಗುತ್ತಿದ್ದು, ಆಸ್ಪತ್ರೆಗಳು ಸುರಕ್ಷಿತವಲ್ಲ ಎನ್ನುವ ಲೆಕ್ಕಾಚಾರದಲ್ಲೂ ಮನೆ ಮದ್ದಿಗೆ ಸೀಮಿತವಾಗುತ್ತಿದ್ದಾರೆ.

    ಆತಂಕಪಡುವ ಅವಶ್ಯಕತೆ ಇಲ್ಲ: ಶೀತ ವಾತಾವರಣ ಪ್ರಭಾವದಿಂದ ಆರೋಗ್ಯದಲ್ಲಿ ಏರುಪೇರಾಗುವುದು. ಇದಕ್ಕೆ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ ಎನ್ನುವುದು ವೈದ್ಯ ನರಸಿಂಹಮೂರ್ತಿ ಮಾತು. ಪ್ರಸ್ತುತ ಕರೊನಾ ವ್ಯಾಪಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅನವಶ್ಯಕವಾಗಿ ಓಡಾಡಬಾರದು. ಪರಸ್ಪರ ಅಂತರ ಕಾಪಾಡಿಕೊಳ್ಳುವಿಕೆ, ಸ್ವಚ್ಛತೆ ನಿರ್ವಹಣೆಯ ಮುಂಜಾಗ್ರತೆ ಪಾಲಿಸಬೇಕು. ಆರೋಗ್ಯದ ಸಮಸ್ಯೆ ಕಂಡು ಬಂದಾಗ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು. ಅವರ ಸಲಹೆಯಂತೆ ನಡೆದುಕೊಳ್ಳುವುದರಿಂದ ಜೀವಹಾನಿಯ ಜತೆಗೆ ಇತರರನ್ನು ಸಂಕಷ್ಟಕ್ಕೀಡು ಮಾಡುವುದನ್ನು ತಪ್ಪಿಸಬಹುದು ಎಂದು ತಿಳಿಸಿದೆ.

    ಮೂರು ಪಟ್ಟು ಹೆಚ್ಚಳ: ವ್ಯಾಪಕವಾಗಿ ಕಾಡುತ್ತಿರುವ ಕರೊನಾ ಸೋಂಕಿನ ನಡುವೆ ಸೊಳ್ಳೆಗಳ ಉತ್ಪತ್ತಿ ಹೆಚ್ಚಳ, ಅನೈರ್ಮಲ್ಯ ವಾತಾವರಣದಿಂದ ವಿವಿಧ ಕಾಯಿಲೆಗಳ ಕಾಟವು ತಲೆ ನೋವಾಗಿದೆ. ಜಿಲ್ಲೆಯಲ್ಲಿ 50 ಡೆಂಘೆ, 9 ಚಿಕೂನ್‌ಗುನ್ಯಾ ಪ್ರಕರಣಗಳು (ಜನವರಿ 1ರಿಂದ ಈವರೆಗೆ) ವರದಿಯಾಗಿವೆ. ಆದರೆ, ಆರೋಗ್ಯ ಇಲಾಖೆಯ ದಾಖಲೆಗೆ ಸೇರದ ಪ್ರಕರಣಗಳು ಅಂಕಿ ಅಂಶಗಳಿಗಿಂತಲೂ ಮೂರು ಪಟ್ಟು ಹೆಚ್ಚಾಗಿದೆ. ನ್ಯುಮೋನಿಯಾ, ಎಚ್1ಎನ್1 ಸಮಸ್ಯೆಯೂ ಕಾಡುತ್ತಿದ್ದು ಹಲವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶೀತದ ವಾತಾವರಣದಿಂದ ಮೈ ಕೈ ನೋವು, ನೆಗಡಿ, ಕೆಮ್ಮು, ಜ್ವರ ಬಾಧೆ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು.
    ಮೋಹನ್, ವೈದ್ಯರು ಚಿಕ್ಕಬಳ್ಳಾಪುರ

    ಕರೊನಾ ಹರಡುವುದನ್ನು ತಡೆಯಲು ಮುಂಜಾಗ್ರತೆ ಪಾಲಿಸಬೇಕು ಮತ್ತು ಸಮಸ್ಯೆಯಾದಲ್ಲಿ ಚಿಕಿತ್ಸೆ ಪಡೆಯಬೇಕೇ ಹೊರತು ಯಾವುದೇ ಕಾರಣಕ್ಕೂ ಆತಂಕಪಡಬಾರದು.
    ಡಾ. ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts