More

    ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ತಪಾಸಣೆ ಶಿಬಿರ

    ರಾಯಚೂರು: ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿರುವ ಕಾರಣ ಸರ್ಕಾರದಿಂದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
    ಸ್ಥಳೀಯ ಕೃಷಿ ವಿಜ್ಞಾನಗಳ ವಿವಿ ಆವರಣದಲ್ಲಿ ಜಸ್ಟಿಸ್ ಶಿವರಾಜ ಪಾಟೀಲ್ ಪ್ರತಿಷ್ಠಾನದಿಂದ ಭಾನುವಾರ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಶಿಬಿರ ಆಯೋಜನೆಯಿಂದ ಜನರ ಆರೋಗ್ಯ ಸುಧಾರಣೆಗೆ ಅನುಕೂಲವಾಗಲಿದೆ ಎಂದರು.
    ಶಿಬಿರದಲ್ಲಿ ಜನರ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಜಿಲ್ಲೆ ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕಳುಹಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆ. ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವ ಜಸ್ಟಿಸ್ ಶಿವರಾಜ ಪಾಟೀಲ್ ಪ್ರತಿಷ್ಠಾನ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲಿ ಎಂದು ಎನ್.ಎಸ್.ಬೋಸರಾಜು ಹೇಳಿದರು.
    ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ರಾಜ್ಯದ ಯಾವುದೇ ಆಸ್ಪತ್ರೆಗೆ ಹೋದರೂ ಅಲ್ಲಿ ಜಿಲ್ಲೆಯ ಜನರು ಕಾಣಸಿಗುತ್ತಾರೆ. ನಮ್ಮಲ್ಲಿನ ಗಾಳಿ, ನೀರು, ಆಹಾರ ಕೆಟ್ಟು ಹೋಗಿರುವುದು ಅದಕ್ಕೆ ಕಾರಣವಾಗಿದೆ. ಜತೆಗೆ ಮೂಲ ಸೌಕರ್ಯಗಳ ಕೊರತೆಯೂ ಕಾರಣವಾಗಿದೆ.
    ಪರಿಸರ ಕಲುಷಿತವಾಗಿರುವುದರಿಂದ ರೋಗ ರುಜೀನಗಳು ಹೆಚ್ಚಾಗಿದ್ದು, ಪ್ರತಿಯೊಬ್ಬರು ಆರೋಗ್ಯ ರಕ್ಷಣೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಪ್ರತಿಷ್ಠಾನ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸೇವಾ ಕಾರ್ಯ ನಡೆಸುತ್ತಿದ್ದು, ಇನ್ನೊಬ್ಬರಿಗೆ ಮಾದರಿಯಾಗಿದೆ ಎಂದರು.
    ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶರೀರ ದುಸ್ತರ ಪರಿಸ್ಥಿತಿಯಲ್ಲಿ ಬದುಕುತ್ತಿದೆ. ದೇಹ ಕೃಷಿ ಮಾಡದಿರುವುದು ಅದಕ್ಕೆ ಕಾರಣವಾಗಿದೆ. ಉತ್ತಮ ಆಹಾರ ಸೇವನೆ ಜತೆಗೆ, ದೈಹಿಕ ಆರೋಗ್ಯದ ಬಗ್ಗೆ ಎಲ್ಲರೂ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.
    ಬೆಂಗಳೂರಿನಿಂದ ಆಗಮಿಸಿದ್ದ ಕ್ಯಾನ್ಸರ್, ನರರೋಗ ಸೇರಿದಂತೆ ವಿವಿಧ ವಿಭಾಗದ ತಜ್ಞ ವೈದ್ಯರು ರೋಗಿಗಳ ತಪಾಸಣೆ ನಡೆಸಿದರು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರ, ಡಿಎಚ್‌ಒ ಡಾ.ಸುರೇಂದ್ರಬಾಬು, ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಕೆ.ದೇವಣ್ಣ ನಾಯಕ, ಪ್ರೊ.ಚನ್ನಾರೆಡ್ಡಿ ಪಾಟೀಲ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts