More

    ರಾಜ್ಯೋತ್ಸವ ಆಚರಣೆಗೆ 6 ಸಮಿತಿಗಳ ರಚನೆ

    ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವ (ನವೆಂಬರ್ 1) ಆಚರಣೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು 6 ಸಮಿತಿಗಳನ್ನು ರಚಿಸಿದೆ. ಇದರೊಂದಿಗೆ ಈ ಬಾರಿಯೂ ಅವಳಿ ನಗರದ ಸಾಧಕರಿಗೆ ಧೀಮಂತ ಪ್ರಶಸ್ತಿ ನೀಡುವುದು ಖಚಿತಪಟ್ಟಿದೆ.

    ಮೇಯರ್ ವೀಣಾ ಬರದ್ವಾಡ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಸಮಿತಿಗಳನ್ನು ರಚಿಸಲಾಯಿತು.

    ರಾಜಣ್ಣ ಕೊರವಿ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಸಮಿತಿ, ಚಂದ್ರಶೇಖರ ಮನಗುಂಡಿ ಅಧ್ಯಕ್ಷತೆಯಲ್ಲಿ ಪ್ರಚಾರ ಮತ್ತು ಸಂಘಟನೆ ಸಮಿತಿ, ಸಂತೋಷ ಚವ್ಹಾಣ ಅಧ್ಯಕ್ಷತೆಯಲ್ಲಿ ಅಲ್ಪೋಪಹಾರ ಸಮಿತಿ, ಶಿವು ಮೆಣಸಿನಕಾಯಿ ಅಧ್ಯಕ್ಷತೆಯಲ್ಲಿ ಮೆರವಣಿಗೆ ಸಮಿತಿ, ಮೇಯರ್ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣೆ ಮತ್ತು ಉಸ್ತುವಾರಿ ಸಮಿತಿ (ಕೇಂದ್ರ ಸಮಿತಿ) ಹಾಗೂ ಉಪ ಮೇಯರ್ ಸತೀಶ ಹಾನಗಲ್ ನೇತೃತ್ವದಲ್ಲಿ ಧೀಮಂತ ಸನ್ಮಾನ ಸಮಿತಿ ರಚಿಸಲಾಯಿತು.

    ಕೆಲ ವರ್ಷಗಳ ಬಳಿಕ 2022ರಲ್ಲಿ ಪಾಲಿಕೆಯಿಂದ ಪುನಃ ಧೀಮಂತ ಪ್ರಶಸ್ತಿ ವಿತರಣೆ ಪ್ರಕ್ರಿಯೆ ನಡೆಸಲಾಗಿತ್ತು. ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿ ಧೀಮಂತ ಪ್ರಶಸ್ತಿ ವಿತರಣೆ ಬಗ್ಗೆ ಅನುಮಾನಗಳಿದ್ದವು. ಇದೀಗ ಸಮಿತಿ ರಚನೆ ಮೂಲಕ ಧೀಮಂತ ಪ್ರಶಸ್ತಿ ವಿತರಣೆಗೆ ಪಾಲಿಕೆ ಕೈ ಹಾಕಿದೆ.

    ಸಭೆಯಲ್ಲಿ ಉಪ ಮೇಯರ್ ಸತೀಶ ಹಾನಗಲ್, ಸಭಾನಾಯಕ ಶಿವು ಹಿರೇಮಠ, ವಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲ, ಸದಸ್ಯರು, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಸಹಾಯಕ ಆಯುಕ್ತರಾದ ಎಸ್.ಸಿ. ಬೇವೂರ, ಗಿರೀಶ ತಳವಾರ, ಇತರರು ಇದ್ದರು.

    ಪೂರ್ವಭಾವಿ ಸಭೆ ಇಂದು

    ಪಾಲಿಕೆ ವತಿಯಿಂದ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಕುರಿತು ಮೇಯರ್ ವೀಣಾ ಬರದ್ವಾಡ ಅಧ್ಯಕ್ಷತೆಯಲ್ಲಿ ಅ. 21ರಂದು ಬೆಳಗ್ಗೆ 11ಗಂಟೆಗೆ ಇಲ್ಲಿಯ ಪಾಲಿಕೆ ಆಯುಕ್ತರ ಕಚೇರಿ ಸಭಾಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.

    ಸಂಜೆ 4 ಗಂಟೆಗೆ ಧಾರವಾಡದಲ್ಲಿನ ಪಾಲಿಕೆಯ ಅಮೃತ ಮಹೋತ್ಸವ ಸಭಾ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಸಭೆಗೆ ಕನ್ನಡಪರ ಸಂಘಟನೆಗಳು, ಕನ್ನಡ ಅಭಿಮಾನಿಗಳು, ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ಪಾಲಿಕೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts