More

    ಸಿದ್ದರಾಮಯ್ಯ, ಡಿಕೆಶಿ ಅಧಿಕಾರದಲ್ಲಿರುವುದನ್ನು ಕುಮಾರಸ್ವಾಮಿಗೆ ಸಹಿಸಿಕೊಳ್ಳಲಾಗದೆ ಟೀಕೆ: ಡಿ.ಕೆ.ಶಿವಕುಮಾರ್

    ಬೆಂಗಳೂರು:
    ಅಧಿಕಾರ ಸಿಗಲಿಲ್ಲ ಎಂಬ ಹತಾಶೆ ಕುಮಾರಸ್ವಾಮಿ ಅವರನ್ನು ಕಾಡುತ್ತಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ನಮ್ಮ ಪಕ್ಷ ಅಧಿಕಾರದಲ್ಲಿರುವುದನ್ನು ಅವರಿಂದ ಸಹಿಸಲಾಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
    ಸುದ್ದಿಗಾರರೊಂದಿಗೆ ಮಾತನಾಡಿ, ಅವರ ಬಾಯಿಗೆ ಬೀಗ ಹಾಕುವ ಶಕ್ತಿ ನನ್ನಲಿಲ್ಲ. ಅವರು ಮಾತನಾಡುತ್ತಿರಬೇಕು. ಅವರ ನುಡಿಮುತ್ತುಗಳನ್ನು ನಾವು ಸಂತೋಷದಿಂದ ಕೇಳುತ್ತಿದ್ದೇವೆ ಎಂದು ವ್ಯಂಗ್ಯವಾಗಿ ಹೇಳಿದರು.
    ಕಾಂಗ್ರೆಸ್ ಸರ್ಕಾರದಲ್ಲಿ ಅಜಿತ್ ಪವಾರ್ ಹಾಗೂ ಏಕನಾಥ ಶಿಂಧೆಯಂತಹವರು ಇದ್ದಾರೆ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರು ಮೇಧಾವಿಗಳು. ಅನುಭವ ಹೆಚ್ಚಾಗಿದೆ. ಜೋತಿಷ್ಯ ಗೊತ್ತಿದೆ. ಅವರು ಏನೆನೋ ಪ್ರಯತ್ನ ಮಾಡುತ್ತಿದ್ದಾರೆ, ಒಳ್ಳೆಯದಾಗಲಿ ಎಂದರು.
    ಬರದ ಸಮಯದಲ್ಲೂ ಸಿಎಂ ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ ಎಂಬ ವಿರೋಧ ಪಕ್ಷಗಳ ಟೀಕೆ ಬಗ್ಗೆ ಪ್ರತಿಕ್ರಿಯಿಸಿ, ಸಮಯ ಉಳಿಸುವ ಉದ್ದೇಶದಿಂದ ಸಿಎಂ, ವಿಮಾನಗಳಲ್ಲಿ ಓಡಾಡುವುದು ಸಹಜ ಎಂದರು.
    ಪ್ರಧಾನಮಂತ್ರಿಗಳ ಭೇಟಿಗೆ ವಿರೋಧ ಪಕ್ಷಗಳ ನಾಯಕರನ್ನು ಕರೆದುಕೊಂಡು ಹೋಗಬೇಕಿತ್ತು ಎಂಬುದಕ್ಕೆ ಪ್ರತಿಕ್ರಿಯಿಸಿ, ನಾವು ಸರ್ವಪಕ್ಷ ನಿಯೋಗವನ್ನು ಪ್ರಧಾನಿಗಳ ಬಳಿ ಕರೆದೊಯ್ಯಲು ಸಿದ್ಧವಿದ್ದೇವೆ. ಅವರು ಅಧಿಕಾರಿಗಳ ಭೇಟಿಗೆ ಸಮಯ ನೀಡಿಲ್ಲ ಎಂದರು.

    ನೀರಿನ ದರ ಏರಿಕೆ ಮಾಡಿಲ್ಲ
    2018 ಕಾನೂನು ಸಕ್ರಮ
    ಜನಸಾಮಾನ್ಯರ ಮನೆಗಳ ನೀರಿನ ದರ ಏರಿಕೆ ಆಗಿಲ್ಲ. 2018ರಲ್ಲಿ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಹೈಕೋರ್ಟನಲ್ಲಿ ತಡೆಯಾಜ್ಞೆ ಇತ್ತು. ಹೀಗಾಗಿ 2018ರಲ್ಲಿ ನಿಗದಿ ಮಾಡಿದಂತೆ ಕೈಗಾರಿಕೆಗಳ ನೀರಿನ ದರ ಏರಿಕೆ ಮಾಡಲಾಗಿದೆ ಎಂದು ಹೇಳಿದರು.
    2013ರಿಂದ ಇಲ್ಲಿಯವೆಗೂ ಕಳೆದ 10 ವರ್ಷಗಳಿಂದ ಬೆಂಗಳೂರಿನ ಜನಸಾಮಾನ್ಯರ ಬಳಕೆ ನೀರಿನ ದರವನ್ನು ಏರಿಕೆ ಮಾಡಿಲ್ಲ. ಈಗ 2018ರ ಕಾನೂನನ್ನು ಸಂಪುಟದಲ್ಲಿ ಸಕ್ರಮ ಮಾಡಿದ್ದೇವೆ ಎಂದು ತಿಳಿಸಿದರು.

    ತಪ್ಪಿತಸ್ಥರ ಮೇಲೆ ಕ್ರಮ
    ಯಶವಂತಪುರದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿರುವ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಪಾಲಿಕೆ ವ್ಯಾಪ್ತಿಯ ಶಾಲೆಗಳ ವಿಚಾರವಾಗಿ ಸಭೆ ಕರೆದಿದ್ದು, ಈ ಘಟನೆ ಬಗ್ಗೆ ವರದಿ ತರಿಸಿಕೊಳ್ಳಲಾಗುವುದು. ಇದರಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
    ಕೋಲಾರದ ಶಾಲೆಯ ಘಟನೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಮಕ್ಕಳನ್ನು ನಾವು ಯಾವ ರೀತಿ ನಡೆಸಿಕೊಳ್ಳಬೇಕೋ ಆ ರೀತಿ ನಡೆಸಿಕೊಳ್ಳಬೇಕು. ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳುವಂತಿಲ್ಲ. ಶೌಚಾಲಯಗಳನ್ನು ಮಕ್ಕಳಿಂದ ಸ್ವಚ್ಛಗೊಳಿಸಲು ಅವಕಾಶ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts