More

    ಅಸಮಾಧಾನ ಶಮನಕ್ಕೆ ಮುಂದಾದ ಎಚ್‌ಸಿಎಂ

    ಕೊಳ್ಳೇಗಾಲ : ಲೋಕಸಭಾ ಚುನಾವಣೆ ಕಾಂಗ್ರೆಸ್ ಟಿಕೆಟ್ ತಮ್ಮ ಪುತ್ರ ಸುನೀಲ್ ಬೋಸ್‌ಗೆ ಖಚಿತವಾದ ಬೆನ್ನಲ್ಲೇ ಸಚಿವ ಎಚ್.ಸಿ.ಮಹದೇವಪ್ಪ ಬುಧವಾರ ಕೊಳ್ಳೇಗಾಲಕ್ಕೆ ಭೇಟಿ ನೀಡಿ ಕ್ಷೇತ್ರ ಶಾಸಕ, ಮಾಜಿ ಶಾಸಕರನ್ನು ಭೇಟಿ ಮಾಡಿ ಪುತ್ರನ ಗೆಲ್ಲಿಸಿಕೊಳ್ಳಲು ಕಾರ್ಯ ಚಟುವಟಿಕೆ ಶುರು ಮಾಡಿದರು.

    ಸಚಿವ ಎಚ್.ಸಿ. ಮಹದೇವಪ್ಪ, ಸುನೀಲ್ ಬೋಸ್, ಶಾಸಕ ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕ ಎಸ್.ಜಯಣ್ಣ ಇನ್ನಿತರ ಕಾಂಗ್ರೆಸ್ ಮುಖಂಡರು ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ, ಹನೂರು ಕ್ಷೇತ್ರ ಮಾಜಿ ಶಾಸಕ ಆರ್.ನರೇಂದ್ರ ಅವರ ನಿವಾಸಕ್ಕೆ ಬೇಟಿ ನೀಡಿದರು. ನಂತರ, ಕಾಂಗ್ರೆಸ್ ಟಿಕೆಟ್ ರೇಸಿನಲ್ಲಿದ್ದ ಜಿ.ಎನ್. ನಂಜುಂಡಸ್ವಾಮಿ ನಿವಾಸಕ್ಕೂ ತೆರಳಿ ಪುತ್ರನ ಗೆಲುವಿಗೆ ಶ್ರಮಿಸುವಂತೆ ಮನವೊಲಿಸಿದ್ದಾರೆ. ಮುಖಂಡ ಓಲೆ ಮಹದೇವ ಅವರ ಮನೆಗೂ ಭೇಟಿ ನೀಡಿ ಕಾಂಗ್ರೆಸ್ ಜತೆ ಇರುವಂತೆ ತಿಳಿಸಿದರು. ಒಂದೆಡೆ ಅಧಿಕೃತವಾಗಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡುವ ಮುನ್ನವೆ ಕ್ಷೇತ್ರದೊಳಗಿದ್ದ ಅಸಮಾಧಾನ ಹಾಗೂ ಮುನಿಸನ್ನು ಶಮನ ಮಾಡುವ ಪ್ರಯತ್ನವನ್ನು ಸಚಿವ ಎಚ್.ಸಿ ಮಹದೇವಪ್ಪ ಮಾಡಿದ್ದು, ಇದು ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಲೋಕಸಭಾ ಕ್ಷೇತ್ರದಲ್ಲಿ 7 ಕಾಂಗ್ರೆಸ್ ಶಾಸಕರಿದ್ದರೂ ಮೋದಿ ಅಲೆ ಬಿಜೆಪಿಗೆ ಗೆಲುವು ನೀಡುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಾ.ಎಚ್.ಸಿ.ಮಹದೇವಪ್ಪ, ಏ.26ಕ್ಕೆ ಯಾರ ಅಲೆ ಇದೆ, ಯಾರು ಕೊಚ್ಚಿ ಹೋಗುತ್ತಾರೆ ಎಂದು ತಿಳಿಯುತ್ತದೆ. ಈ ಕ್ಷೇತ್ರ ಕಾಂಗ್ರೆಸ್ ಪರವಾಗಿದೆ. ರಾಜ್ಯದ ಅಭಿವೃದ್ಧಿ, ಪ್ರಜಾಸತ್ತಾತ್ಮಕ ನಿರ್ಧಾರಗಳು, ಸಂವಿಧಾನ ರಕ್ಷಣೆ, ಅದರ ಆಶಯಗಳ ಜಾರಿ ಮಾಡಿರುವುದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡುತ್ತೇವೆ. ಕೋಮುವಾದ ಹಾಗೂ ಜಾತೀವಾದದ ಬಗ್ಗೆ ಎಂದೂ ಮಾತನಾಡಿದವನಲ್ಲ. ಅಂಬೇಡ್ಕರ್ ಅವರ ಬಗ್ಗೆ ಮಾತನಾಡುತ್ತಿದ್ದವರು ಈಗ ಎಲ್ಲಿದ್ದಾರೆ? ಆದರೆ ನಾನು ಸಂವಿಧಾನ ಹಾಗೂ ಅದರ ಆಶಯಗಳ ಪರವಾಗಿ ಗಟ್ಟಿಯಾಗಿ ನಿಂತಿದ್ದೇನೆ ಎಂದು ಟೀಕೆ ಮಾಡುವರ ವಿರುದ್ಧ ಕಿಡಿಕಾರಿದರು.

    ಇಡೀ ದೇಶದಲ್ಲಿ ಯಾವುದೇ ಸರ್ಕಾರ, ಮಂತ್ರಿ ಮಾಡದೇ ಇರುವ ಕೆಲಸವನ್ನು ನಾನು ಮಾಡಿದ್ದೇನೆ. ರಾಜ್ಯಕ್ಕೆ ವ್ಯಾಪಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಜಾಗೃತಿ ಚಳವಳಿ ಮಾಡಿದ್ದೇನೆ. ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸಂವಿಧಾನ ರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ಶ್ರಮಿಸಿದ್ದೇನೆ. ಕಾಂಗ್ರೆಸ್ ಮೇಲೆ ಜನರಿಗೆ ವಿಶ್ವಾಸವಿದೆ. ಕಾಂಗ್ರೆಸ್ ಗ್ಯಾರಂಟಿ ಮತಕ್ಕಾಗಿ ನೀಡಿದಲ್ಲ. ಬಡವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೀಡಿರುವುದು. ಗ್ಯಾರಂಟಿ ವಿರೋಧಿಸುತ್ತಿದ್ದ ಬಿಜೆಪಿಯವರು ಅವರೇ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ ಎಂದು ಕಾಲೆಳೆದರು.

    ಜಿಎನ್‌ಎನ್ ಮನವೊಲಿಸಿದ ಎಚ್.ಸಿ.ಮಹದೇವಪ್ಪ: ಲೋಕಸಭಾ ಟಿಕೆಟ್ ಸುನೀಲ್ ಬೋಸ್‌ಗೆ ದಕ್ಕುವ ಎಲ್ಲ ಲಕ್ಷಣ ಕಾಣಿಸುತ್ತಿದ್ದಂತೆ ಮತ್ತೊಬ್ಬ ಆಕಾಂಕ್ಷಿ ಜಿ.ಎನ್.ನಂಜುಂಡಸ್ವಾಮಿ ಬೆಂಬಲಿಗರು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಲ್ಲದೆ ಜಿಎನ್‌ಎನ್ ಸಹ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನೀಡಿದ್ದರು.

    ಈ ಹಿನ್ನೆಲೆಯಲ್ಲಿ ಎಚ್.ಸಿ ಮಹದೇವಪ್ಪ ಜಿಎನ್‌ಎನ್ ನಿವಾಸಕ್ಕೆ ಭೇಟಿ ಮಾಡಿ ಮನವೊಲಿಸಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಒಗ್ಗೂಡಿ ಕಾಂಗ್ರೆಸ್ ಗೆಲುವಿಗಾಗಿ ಕೆಲಸ ಮಾಡುವಂತೆ ಚರ್ಚಿಸಿದ್ದಾರೆ. ಈ ವೇಳೆ ಜಿಎನ್‌ಎನ್ ಬೆಂಬಲಿಗರು ನಂಜುಂಡಸ್ವಾಮಿಗೆ ಉತ್ತಮ ಸ್ಥಾನಮಾನ ನೀಡುವಂತೆ ಒತ್ತಾಯಿಸಿದರು. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಗಮನಸೆಳೆಯುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

    ಸಚಿವರ ಹೇಳಿಕೆ ವಿರುದ್ಧ ಅಸಮಾಧಾನ: ಇತ್ತೀಚೆಗೆ ಚಾಮರಾಜನಗರದಲ್ಲಿ ನಡೆದ ಗ್ಯಾರಂಟಿ ಫಲಾನುಭವಿಗಳ ಸಭೆಯಲ್ಲಿ ಹನೂರು ಶಾಸಕ ಎಂ.ಆರ್.ಮಂಜುನಾಥ್ ಸಹ ಮುಂದೆ ನಮಗೆ ಸಹಾಯ ಮಾಡಲಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಹದೇವಪ್ಪ ಅವರು ಆರ್.ನರೇಂದ್ರ ನಿವಾಸಕ್ಕೆ ಭೇಟಿ ನೀಡಿದಾಗ ಅಲ್ಲೂ ಬೆಂಬಲಿಗರು ಅವರ ಹೇಳಿಕೆಯನ್ನು ಪ್ರಶ್ನಿಸಿ, ಅಸಮಾಧಾನ ಹೊರಹಾಕಿದರು. ಈ ವೇಳೆ ಸಚಿವರು ಆರ್.ನರೇಂದ್ರ ಅವರು ಆತ್ಮೀಯ. ಅವರನ್ನು ಎಲ್ಲೂ ಬಿಟ್ಟು ಕೊಡುವುದಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts