More

    ಜನನ-ಮರಣ ನೋಂದಣಾಧಿಕಾರಿಯಾಗಿ ಪಿಡಿಒ ನಿಯೋಜನೆ; ಜಿಪಂ ಸಿಇಒ ಅಕ್ಷಯ ಶ್ರೀಧರ ಹೇಳಿಕೆ

    ಹಾವೇರಿ: ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ಪದ್ದತಿ ಬಲಪಡಿಸಲು ಹಾಗೂ ಜನನ- ಮರಣ ನೋಂದಣಿ ಘಟನೆಗಳನ್ನು ಶೇ.100ರಷ್ಟು ದಾಖಲಿಸುವ ಕಾರ್ಯವನ್ನು ಸರ್ಕಾರವು ಗ್ರಾಮ ಪಂಚಾಯಿತಿಗಳಿಗೆ ವಹಿಸಿದೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಹೇಳಿದರು.
    ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ, ತಾಲೂಕು ಯೋಜನಾ ವ್ಯವಸ್ಥಾಪಕರಿಗೆ ಹಾಗೂ ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಆಯೋಜಿಸಿದ್ದ ಜನನ ಮತ್ತು ಮರಣ ನೋಂದಣಿ ಘಟನೆಗಳನ್ನು ದಾಖಲಿಸುವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ದೇಶದಲ್ಲಿ ಸಂಭವಿಸುವ ಪ್ರತಿಯೊಂದು ಜನನ-ಮರಣ ಮತ್ತು ನಿರ್ಜೀವ ಜನನಗಳ ನೋಂದಣಿಯನ್ನು ಜನನ-ಮರಣ ನೋಂದಣಿ ಅಧಿನಿಯಮ 1969 ಅನ್ವಯ ಕಡ್ಡಾಯ ಮಾಡಲಾಗಿದೆ. ಈ ಕಾಯ್ದೆಯು ರಾಜ್ಯದಲ್ಲಿ ಏಪ್ರಿಲ್ 1, 1970ರಿಂದ ಜಾರಿಗೆ ಬಂದಿದೆ. ರಾಜ್ಯದಲ್ಲಿ ಜನನ-ಮರಣ ನೋಂದಣಿ ಕಾರ್ಯಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಹೊರತಂದಿದ್ದು, ಈ ನಿಯಮಗಳು ಜನವರಿ 1, 1971ರಿಂದ ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಜನನ ಮತ್ತು ಮರಣ ಇವುಗಳು ಎರಡು ಪ್ರಮುಖ ಘಟನೆಗಳಾಗಿವೆ ಎಂದರು.
    ವ್ಯಕ್ತಿಯ ಕಾನೂನಾತ್ಮಕ ಅಸ್ತಿತ್ವವನ್ನು ವಿವರಿಸುವುದಲ್ಲದೇ ಆ ಘಟನೆಗಳ ನೋಂದಣಿಯು ಅವುಗಳು ಒಳಪಡುವ ವ್ಯಾಪ್ತಿ ಪ್ರದೇಶದ ಜನಸಂಖ್ಯೆಯ ಪ್ರಮುಖ ಮೂಲಭೂತ ಮಾಹಿತಿಯ ಮೂಲವಾಗಿದೆ. ನಾಗರಿಕ ನೋಂದಣಿಯನ್ನು ಪ್ರಮುಖ ಘಟನೆಗಳಾದ ಜನನ, ಮರಣ, ವಿವಾಹ, ಭ್ರೂಣ ಮರಣ ಮತ್ತು ವಿವಾಹ ವಿಚ್ಛೇದನೆಗಳು ಹಾಗೂ ಅಂಕಿ ಅಂಶಗಳ ಸಂಭವನೀಯತೆ ಹಾಗೂ ಗುಣಲಕ್ಷಣಗಳ ನಿರಂತರ, ಶಾಶ್ವತ ಮತ್ತು ಕಡ್ಡಾಯ ನೋಂದಣಿ ಎಂದು ವ್ಯಾಖ್ಯಾನಿಸಲಾಗಿದೆ ಎಂದರು.
    ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ, ಜಿಪಂ ಮುಖ್ಯ ಯೋಜನಾಧಿಕಾರಿ ಎಸ್.ವೈ.ಮೀಶಿ, ಜಿಲ್ಲಾ ಅಂಕಿ ಸಂಖ್ಯಾ ಸಂಗ್ರಹಣಾಧಿಕಾರಿ ಭುಜಂಗ, ಸಹಾಯಕ ಸಾಂಖ್ಯಿಕ ಅಧಿಕಾರಿ ಕುಮಾರ ಮಣ್ಣವಡ್ಡರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts