More

    ಅಸಂಘಟಿತ ಕಾರ್ಮಿಕರ ಬೇಡಿಕೆ ಈಡೇರಿಸಿ

    ಹಾವೇರಿ: ವ್ಯವಸಾಯ ವೃತ್ತಿಪರ ಕೂಲಿ ಕಾರ್ಮಿಕರು ಕಾಲಕಾಲಕ್ಕೆ ತಕ್ಕಂತೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ವ್ಯವಸಾಯ ಕಾರ್ಮಿಕರು ಅಸಂಘಟಿತ ಕಾರ್ಮಿಕ ವರ್ಗದ ವ್ಯಾಪ್ತಿಗೆ ಬರುತ್ತೇವೆ. ನಮ್ಮನ್ನು ಕೂಡ ಕಾರ್ಮಿಕರು ಎಂದು ಗುರುತಿಸಿ ಇ-ಶ್ರಮ ಪೋರ್ಟಲ್‌ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕರ್ನಾಟಕ ವ್ಯವಸಾಯ ವೃತ್ತಿಪರ ಯೂನಿಯನ್‌ನ ಜಿಲ್ಲಾಧ್ಯಕ್ಷ ಶೇಖಪ್ಪ ಶಿವಕ್ಕನವರ ಒತ್ತಾಯಿಸಿದರು.
    ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಂಘಟಿತ ವಲಯದ ಕಾರ್ಮಿಕರು ಅಭದ್ರತೆಯಲ್ಲಿ ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇಂಥ ಕಾರ್ಮಿಕರಿಗೆ ಸರ್ಕಾರದಿಂದ ಯಾವುದೇ ನೆರವು ಸಿಗುವುದಿಲ್ಲ, ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಸಂಘಟಿತ ಕಾರ್ಮಿಕರ ವಿವಿಧ ಬೇಡಿಕೆಗಳನ್ನೂ ಗಂಭೀರವಾಗಿ ಪರಿಗಣಿಸಬೇಕು. ಕಾರ್ಮಿಕ ಮಹಿಳೆಯರಿಗೆ ಮಾತೃತ್ವ ಪ್ರಯೋಜನೆಗಾಗಿ 50 ಸಾವಿರ ರೂ. ವೇತನ ಪರಿಹಾರ ನೀಡುವುದು ಸೇರಿದಂತೆ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
    ಅಸಂಘಟಿತ ಕಾರ್ಮಿಕರು ಅಪಾಯಕಾರಿ, ಅನೈರ್ಮಲ್ಯ ಹಾಗೂ ಕಲುಷಿತ ಸ್ಥಳಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆರೋಗ್ಯ ಕೂಡ ಹಾಳಾಗುತ್ತದೆ. ಅಲ್ಲದೆ ಕೆಲಸ ಮಾಡುವಾಗ ಅಪಘಾತ ಅನಾಹುತಗಳು ಸಂಭವಿಸಿದರೆ, ಚಿಕಿತ್ಸೆ ಮಾಡಿಕೊಳ್ಳಲು ಹಣ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಆರೋಗ್ಯ ಸೌಲಭ್ಯ ನೀಡಬೇಕು ಎಂದರು.
    ಅಸಂಘಟಿತ ಕಾರ್ಮಿಕರು ಪ್ರತಿದಿನ ದುಡಿದೇ ಜೀವನ ಸಾಗಿಸಬೇಕು. ವೃದ್ದಾಪ್ಯದ ಸಮಯದಲ್ಲಿ ಇವರನ್ನು ನೋಡಿಕೊಳ್ಳುವವರು ಯಾರೂ ಇರುವುದಿಲ್ಲ. ಊಟ, ವಸತಿ, ವೈದ್ಯಕೀಯ ಚಿಕಿತ್ಸೆಗೆ ಬೇರೆಯವರನ್ನು ಅವಲಂಬಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪಿಂಚಣಿ ಸೌಲಭ್ಯವನ್ನು ಕಲ್ಪಿಸಿ, 5 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಬೇಕು. ಕೆಲಸದ ಸಂದರ್ಭದಲ್ಲಿ ಅಪಘಾತ ಹಾಗೂ ಅನಾಹುತ ಸಂಭವಿಸಿ ಮೃತಪಟ್ಟರೆ ಪರಿಹಾರವಾಗಿ 5 ಲಕ್ಷ ರೂ. ಪರಿಹಾರ ನೀಡಬೇಕು. ಅಲ್ಲದೆ ಅಸಂಘಟಿತ ಕಾರ್ಮಿಕರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
    ಸುದ್ದಿಗೋಷ್ಠಿಯಲ್ಲಿ ಕಾಮಾಕ್ಷಿ ರೇವಣಕರ, ದೀಪಾ ಈಳಗೇರ, ಬಸವಣ್ಣೆಮ್ಮ ಚಲವಾದಿ, ನಾಗಪ್ಪ ಮಾಳಗಿ, ನಾಗರಾಜ ಮಳ್ಳೇರ, ನವೀನ ಹುಲ್ಲತ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts