More

    ಅಕ್ರಮ ಮರಳು ದಂಧೆ ತಡೆಗೆ ವಿಶೇಷ ತಂಡ ರಚನೆ ! ; ನಿತ್ಯವೂ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ತಪಾಸಣೆ; ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕ್ರಮ

    ಹಾವೇರಿ: ಜಿಲ್ಲೆಯ ತುಂಗಭದ್ರಾ ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿವಿಧ ಇಲಾಖೆಗಳನ್ನು ಒಳಗೊಂಡ ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಮುಂದಾಗಿದೆ. ಜಿಲ್ಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಹಾವೇರಿ ಹಾಗೂ ರಾಣೆಬೆನ್ನೂರ ತಾಲೂಕಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಹೆಸ್ಕಾಂ, ಪಿಡಬ್ಲೂೃಡಿ, ಸಹಕಾರ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ, ಶಿಕ್ಷಣ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಅವರೊಂದಿಗೆ ಸ್ಥಳೀಯ ಪಿಡಿಒ, ವಿಐ, ಪೊಲೀಸರನ್ನು ಒಳಗೊಂಡ ಐವರ ತಂಡಗಳನ್ನು ರಚಿಸಲಾಗಿದೆ. ಒಂದನೇ ತಾರೀಖಿನಿಂದ 30ನೇ ತಾರೀಖಿನವರೆಗೆ ಪ್ರತ್ಯೇಕ ತಂಡಗಳನ್ನು ರಚಿಸಿ, ತಪಾಸಣೆಗೆ ಸೂಚಿಸಲಾಗಿದೆ. ಹಗಲು ಮತ್ತು ರಾತ್ರಿ ಕಾರ್ಯಾಚರಣೆಗೆ ಪಾಳಿ ಪ್ರಕಾರ ಕರ್ತವ್ಯಕ್ಕೆ ತಂಡಗಳನ್ನು ನಿಯೋಜಿಸಲಾಗಿದೆ. ಕಳೆದ ಒಂದು ವಾರದಿಂದ ಈ ತಂಡಗಳು ಕರ್ತವ್ಯ ನಿರ್ವಹಿಸುತ್ತಿವೆ. ಅಕ್ರಮ ಮರಳು ಗಣಿಗಾರಿಕೆ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಷಣ್ಮುಖಪ್ಪ ಡಿ.ಎಚ್. ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಕುರಿತು ಕನ್ನಡಿಗರ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ಇತ್ತೀಚೆಗೆ ಒಂದು ವಾರ ಸರಣಿ ವರದಿ ಪ್ರಕಟಿಸಿತ್ತು. ತುಂಗಭದ್ರೆ ಸೇರಿದಂತೆ ವರದಾ, ಕುಮಧ್ವತಿ ನದಿಯ ಒಡಲಿಗೂ ದಂಧೆಕೋರರು ಕನ್ನ ಹಾಕುತ್ತಿರುವ ಕುರಿತು ಎಳೆಎಳೆಯಾಗಿ ಬಿಚ್ಚಿಡಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ಭಾರಿ ಸ್ಪಂದನೆ ದೊರೆತಿತ್ತು. ‘ವಿಜಯವಾಣಿ’ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಅಕ್ರಮ ಮರಳು ತಡೆಗೆ ಮುಂದಡಿ ಇಟ್ಟಿದೆ. ಆದರೆ, ಇದು ಪರಿಣಾಮಕಾರಿಯಾಗಿ ಆಗಬೇಕು. ಶಾಶ್ವತವಾಗಿ ಅಕ್ರಮ ದಂಧೆಗೆ ಬ್ರೇಕ್ ಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ಕೋಟ್:
    ಹಾವೇರಿ ಎಸಿ ಎಚ್.ಬಿ.ಚನ್ನಪ್ಪ ಅವರು ನಿರಂತರವಾಗಿ ಟಾಸ್ಕ್ ಫೋರ್ಸ್ ಕಮಿಟಿ ಸಭೆಗಳನ್ನು ನಡೆಸುತ್ತಿದ್ದಾರೆ. ವಿಶೇಷ ತಂಡಗಳು ನದಿಯಲ್ಲಿರುವ ಮರಳು ಸಂಗ್ರಹದ ಕುರಿತು ನಿರಂತರವಾಗಿ ವರದಿ ಮಾಡುತ್ತಿವೆ. ಅಕ್ರಮ ಕಂಡ ಕೂಡಲೇ ಜಪ್ತಿ ಮಾಡಲು ಸೂಚಿಸಿದ್ದೇನೆ.
    – ರಘುನಂದನ ಮೂರ್ತಿ, ಜಿಲ್ಲಾಧಿಕಾರಿ

    ಕೋಟ್:
    ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ತಡೆಗಾಗಿ ಪೊಲೀಸ್ ಇಲಾಖೆಯಿಂದ ನಿರಂತರವಾಗಿ ತಪಾಸಣೆ ಹಾಗೂ ದಾಳಿ ನಡೆಸಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ ಹಲವೆಡೆ ದಾಳಿ ನಡೆಸಿ 26 ಪ್ರಕರಣ ದಾಖಲಿಸಿಕೊಂಡು 415 ಲೋಡ್ ಮರಳು ವಶಪಡಿಸಿಕೊಳ್ಳಲಾಗಿದೆ. 38 ವಾಹನಗಳನ್ನು ಸೀಜ್ ಮಾಡಲಾಗಿದೆ. ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವ ವಾಹನಗಳ ಲೈಸನ್ಸ್ ರದ್ದುಪಡಿಸುವಂತೆ ಆರ್‌ಟಿಒಗೆ ಸೂಚಿಸಲಾಗಿದೆ.
    – ಅಂಶುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts