More

    ಜೆಜೆಎಂ ಕಾಮಗಾರಿಗೆ ರಸ್ತೆ ಹಾಳು; ಪತ್ರ ಬರೆದರೂ ಸ್ಪಂದಿಸದ ಅಧಿಕಾರಿಗಳು; ಕೆಡಿಪಿ ಸಭೆಯಲ್ಲಿ ಪಿಡಬ್ಲೂೃಡಿ ಅಧಿಕಾರಿಗಳ ಆರೋಪ

    ಹಾವೇರಿ: ತಾಲೂಕಿನ ವಿವಿಧೆಡೆ ನಡೆದಿರುವ ಜಲಜೀವನ ಮಿಷನ್ (ಜೆಜೆಎಂ) ಕಾಮಗಾರಿ ವೇಳೆ ಪೈಪ್‌ಲೈನ್ ಅಳವಡಿಕೆಗಾಗಿ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ರಸ್ತೆ ಅಗೆಯಲಾಗುತ್ತಿದ್ದು, ಇದರಿಂದ ರಸ್ತೆಗಳು ಹಾಳಾಗುತ್ತಿವೆ. ಈ ಬಗ್ಗೆ ಜೆಜೆಎಂ ಅಧಿಕಾರಿಗಳಿಗೆ ಲಿಖಿತವಾಗಿ ಪತ್ರ ಬರದರೂ ಯಾರೂ ಗಮನ ಹರಿಸುತ್ತಿಲ್ಲ ಎಂದು ಲೋಕೋಪಯೋಗಿ ಇಲಾಖೆ ಎಇಇ ಶ್ರೀಮಂತ ಹದಗಲ್ಲ ಆರೋಪಿಸಿದರು.
    ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಹೊಸರಿತ್ತಿ, ಕರ್ಜಗಿ, ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ನಮ್ಮ ಇಲಾಖೆಯ ಗಮನಕ್ಕೆ ತರದೇ ಬೇಕಾಬಿಟ್ಟಿ ರಸ್ತೆ ಅಗೆದು ಪೈಪ್‌ಲೈನ್ ಅಳವಡಿಸುತ್ತಿದ್ದಾರೆ. ಆರು ತಿಂಗಳ ಹಿಂದೆ ಮಾಡಿರುವ ಹೊಸ ರಸ್ತೆಗಳನ್ನು ಹಾಳು ಮಾಡಿದ್ದಾರೆ. ಈ ಬಗ್ಗೆ ಜೆಜೆಎಂ ಹಾಗೂ ಜಿಪಂ ಸಿಇಒ ಅವರಿಗೂ ಪತ್ರ ಬರೆಯಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು. ಈ ಸಮಸ್ಯೆ ಬಗೆಹರಿಸಬೇಕು. ಕೂಡಲೇ ತಾಪಂ ಇಒ ಅವರ ಬಳಿ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ರುದ್ರಪ್ಪ ಲಮಾಣಿ ಜೆಜೆಎಂ ಅಧಿಕಾರಿಗಳಿಗೆ ಸೂಚಿಸಿದರು.
    ತಾಲೂಕಿನಲ್ಲಿ 5 ರಾಜ್ಯ ಹೆದ್ದಾರಿ ಕಾಮಗಾರಿ ಚಾಲ್ತಿಯಲ್ಲಿದೆ. ಹಾವೇರಿ- ಗುತ್ತಲ ರಸ್ತೆಯ ಎರಡು ಹಂತ, ಹೊಸರಿತ್ತಿ- ನೆಗಳೂರು ರಸ್ತೆ ಸೇರಿದಂತೆ ಕೆಲ ರಸ್ತೆ ಕಾಮಗಾರಿಗಳು ಆರಂಭ ಹಂತದಲ್ಲಿದ್ದು, ಸದ್ಯಕ್ಕೆ ಸ್ಥಗಿತಗೊಳಿಸುವಂತೆ ಸರ್ಕಾರದ ಸೂಚನೆ ಇದೆ. ಇದನ್ನು ತೆರವುಗೊಳಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಈ ವಾರ ನನ್ನ ಜತೆ ಬೆಂಗಳೂರಿಗೆ ಬನ್ನಿ ನಾನು ಎಲ್ಲ ಕಾಮಗಾರಿಗೆ ಇರುವ ಅಡೆತಡೆ ತೆರವುಗೊಳಿಸಿಕೊಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
    ನರೇಗಾ ಕಾಮಗಾರಿ ಅಡಿಯಲ್ಲಿ ನಿರ್ಮಿಸುತ್ತಿರುವ ಹಾಗೂ ದುರಸ್ತಿ ಮಾಡುತ್ತಿರುವ ಅಂಗನವಾಡಿ ಕೇಂದ್ರಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ. ಆರೋಗ್ಯ ಇಲಾಖೆಯ ಆಶಾಕಿರಣ, ಆಯುಷ್ಮಾನ್ ಭಾರತ ಸೇರಿ ಇತರ ಯೋಜನೆಗಳು ಜನರಿಗೆ ಸರಳವಾಗಿ ದೊರೆಯುವಂತೆ ನೋಡಿಕೊಳ್ಳಿ. ಜಿಲ್ಲಾಸ್ಪತ್ರೆಯಲ್ಲಿ ಮೂರನೇ ಅಂತಸ್ತಿನಲ್ಲಿ ನಿರ್ಮಿಸುತ್ತಿರುವ ಕಟ್ಟಡದಲ್ಲಿ ಸಭಾಂಗಣದ ಬದಲಾಗಿ ರೋಗಿಗಳ ವಾರ್ಡ್ ಮಾಡಿ. ರೋಗಿಗಳಿಗೆ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳಿಗೆ ಶಾಸಕರು ಸಲಹೆ ನೀಡಿದರು.
    ಸಭೆಯಲ್ಲಿ ಡಿಡಿಪಿಐ ಹಾಗೂ ತಾಪಂ ಆಡಳಿತಾಧಿಕಾರಿ ಗಿರೀಶ ಪದಕಿ, ತಹಶೀಲ್ದಾರ್ ಶಂಕರ ಜಿ., ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಭರತ ಹೆಗಡೆ, ಟಿಎಚ್‌ಒ ಡಾ.ಪ್ರಭಾಕರ ಕುಂದೂರ, ಎಡಿಎಲ್‌ಆರ್ ನಾಗರಾಜ ಚಕ್ರಸಾಲಿ, ಸಿಡಿಪಿಒ ಶೈಲಾ ಕುರಹಟ್ಟಿ, ರವಿಕುಮಾರ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
    ನೆಲೋಗಲ್ಲ ಗುಡ್ಡ ಉಳಿಸಿ
    ನೆಲೋಗಲ್ಲ ಗುಡ್ಡದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸುಮಾರು 7 ಎಕರೆ ಜಾಲದಲ್ಲಿ ಕಾನೂನು ಕಾಲೇಜ್ ನಿರ್ಮಿಸಲು ಉದ್ದೇಶಿಸಲಾಗಿದೆ. ಲಾ ಕಾಲೇಜಿಗೆ 2 ಎಕರೆ ಜಾಗ ಸಾಕು. ಉಳಿದ ಜಾಎಯನ್ನು ಗುಡ್ಡದ ಮೂಲ ಸೌಂದರ್ಯಕ್ಕೆ ದಕ್ಕೆ ಬಾರದಂತೆ ನೋಡಿಕೊಳ್ಳಿ. ಪ್ರಕೃತಿದತ್ತವಾಗಿ ಬಂದಿರುವ ಗುಡ್ಡವನ್ನೆಲ್ಲ ಬಳಸಿಕೊಳ್ಳುವುದು ಸರಿಯಲ್ಲ ಎಂದು ಶಾಸಕ ರುದ್ರಪ್ಪ ಲಮಾಣಿ ಅಧಿಕಾರಿಗಳಿಗೆ ಆದೇಶಿಸಿದರು.
    ಗೈರಾದವರಿಗೆ ನೋಟಿಸ್
    ಸಭೆಗೆ ಗೈರಾಗಿದ್ದ ನಿರ್ಮಿತಿ ಕೇಂದ್ರ, ಅಲ್ಪಸಂಖ್ಯಾತರ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಶಾಸಕ ರುದ್ರಪ್ಪ ಲಮಾಣಿ ತಾಪಂ ಇಒ ಭರತ ಹೆಗಡೆಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts