More

    ಜಿಲ್ಲೆಯ ಜನರಿಗೆ ಹೆಲ್ಮೆಟ್ ತಲೆ ಬಿಸಿ; ಒಂದೇ ದಿನ 3.71 ಲಕ್ಷ ರೂ. ದಂಡ; ಎಸ್‌ಪಿ ಅಂಶುಕುಮಾರ ನೇತೃತ್ವದಲ್ಲಿ ಜಾಗೃತಿ ಅಭಿಯಾನ

    ಹಾವೇರಿ: ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಅಭಿಯಾನ ಆರಂಭಿಸಿದೆ. ಅಭಿಯಾನದ ಆರಂಭದಲ್ಲಿ ಗುರುವಾರ ಒಂದೇ ದಿನ ಪೊಲೀಸರು ಜಿಲ್ಲೆಯ ವಿವಿಧೆಡೆ 60 ಕಡೆ ತಪಾಸಣೆ ನಡೆಸಿ, ಹೆಲ್ಮೆಟ್ ಧರಿಸದ 742 ಸವಾರರಿಗೆ 3,71,000 ರೂ. ದಂಡ ವಿಧಿಸಿದ್ದಾರೆ.
    ಬೆಳಗ್ಗೆ 9 ಗಂಟೆಗೆ ಜಿಲ್ಲೆಯ 60 ಕಡೆಗಳಲ್ಲಿ ಏಕ ಕಾಲದಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸಿದರು. ಹೆಲ್ಮೆಟ್ ಧರಿಸಿದ್ದವರಿಗೆ ಗುಲಾಬಿ ಹೂವು ಕೊಟ್ಟು ಶುಭಾಶಯ ಕೋರಿದರು. ಹೆಲ್ಮೆಟ್ ಧರಿಸದವರಿಗೆ ದಂಡದ ಚಲನ್ ನೀಡಿ, ಇನ್ನುಮುಂದೆ ಹೆಲ್ಮೆಟ್ ಇಲ್ಲದೇ ಓಡಾಡಬೇಡಿ ಎಂದು ಸೂಚಿಸಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಬೆಳಗ್ಗೆ ಜಾಗೃತಿ ಅಭಿಯಾನ ನಡೆಯಿತು. ನಗರದ ವಾಲ್ಮೀಕಿ ಸರ್ಕಲ್, ಹೊಸಮನಿ ಸಿದ್ದಪ್ಪ ಸರ್ಕಲ್,ಗುತ್ತಲ ರಸ್ತೆ, ಹಾನಗಲ್ಲ ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪೊಲೀಸರು ಅಭಿಯಾನ ನಡೆಸಿದರು. ಹೆಲ್ಮೆಟ್ ಧರಿಸದೆ ಸಂಚರಿಸುತ್ತಿರುವ ವಾಹನ ಸವಾರರನ್ನು ತಡೆದು ಹೆಲ್ಮೆಟ್ ಧರಿಸುವುದರಿಂದ ಆಗುವ ಲಾಭ ಹಾಗೂ ಜೀವಹಾನಿ ಕುರಿತು ತಿಳಿಸಿಕೊಟ್ಟರು.
    ಹೆಲ್ಮೆಟ್ ಧರಿಸಿದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ತಲೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ನರಳಾಡುಬೇಕಾಗುತ್ತದೆ. ಇದರಿಂದ ಜೀವಕ್ಕೆ ಕುತ್ತು ಬರುತ್ತದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಅಭಿಯಾನ ಮಾಡಲಾಗುತ್ತಿದೆ ಎಂದು ಪೊಲೀಸರು ವಿವರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂತು.
    ಏಕಾಏಕಿ ಹೆಲ್ಮೆಟ್ ದಂಡ ವಿಧಿಸಿರುವುದಕ್ಕೆ ಕೆಲವರು ಪ್ರತಿರೋಧ ವ್ಯಕ್ತಪಡಿಸಿದರು. ಯಾವುದೇ ಆತಂಕವಿಲ್ಲದೇ ಓಡಾಡುತ್ತಿದ್ದ ಹಲವರಿಗೆ ಹೆಲ್ಮೆಟ್ ತಲೆಬಿಸಿ ಶುರುವಾಗಿದೆ. ಒಂದು ತಿಂಗಳು ಕಾಲಾವಕಾಶ ನೀಡಿದ್ದರು. ಆದರೂ ಏಕಾಏಕಿ ಏಕೆ ದಂಡ ವಿಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
    ಕೆಲವೆಡೆ ವಾಗ್ವಾದ
    ಬಹುತೇಕ ವಾಹನ ಸವಾರರು ಮನೆಯಿಂದ ಹೆಲ್ಮೆಟ್ ತರುವುದಾಗಿ ವಾಹನ ಬಿಟ್ಟು ತೆರಳಿದರು. ಕೆಲವರು ದಂಡ ಪಾವತಿ ಮಾಡಿದ್ದು, ಇನ್ನೂ ಕೆಲವರು ಅಲ್ಲೇ ಅಕ್ಕ-ಪಕ್ಕದ ಸ್ಥಳದಲ್ಲಿ ಹೆಲ್ಮೆಟ್ ಖರೀದಿಸಿ ಸಂಚಾರ ನಡೆಸಿದರು. ಇನ್ನು ಕೆಲವರು ಏಕಾಏಕಿ ದಂಡ ಪಾವತಿಸುತ್ತಿರುವುದಕ್ಕೆ ಬೇಸರಗೊಂಡರು. ಕಾಲಾವಕಾಶ ನೀಡಿ ನಂತರ ದಂಡ ಹಾಕಿ ಎಂದು ಪೊಲೀಸರೊಂದಿಗೆ ಕೆಲವರು ವಾಗ್ವಾದ ನಡೆಸಿದರು.

    ಕಳೆದ ವರ್ಷ ಜಿಲ್ಲೆಯಲ್ಲಿ ಬೈಕ್ ಅಪಘಾತದಿಂದ 284 ಸವಾರರು ಮೃತಪಟ್ಟಿದ್ದಾರೆ. 1,385 ಜನ ಗಾಯಗೊಂಡಿದ್ದಾರೆ. ಈ ವರ್ಷ ಅಕ್ಟೋಬರ್‌ವರೆಗೆ 250ಕ್ಕೂ ಅಧಿಕ ಸವಾರರು ಮೃತಪಟ್ಟಿದದಾರೆ. ಬಹುತೇಕ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದಿರುವುದೇ ಸಾವಿಗೆ ಕಾರಣವಾಗಿದೆ. ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಇನ್ನುಮುಂದೆ ಪ್ರತಿ ವಾರ ಈ ಬಗ್ಗೆ ವಿಶೇಷ ಅಭಿಯಾನ ನಡೆಸಲಾಗುವುದು. ಸಂಚಾರ ಪೊಲೀಸರು ಪ್ರತಿ ದಿನ ಕಾರ್ಯಾಚರಣೆ ನಡೆಸುತ್ತಾರೆ.
    > ಅಂಶುಕುಮಾರ, ಎಸ್‌ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts